ನರೇಂದ್ರ ಮೋದಿಗಾಗಿ ಬಿಜೆಪಿ-ಜೆಡಿಎಸ್‌ ಒಗ್ಗಟ್ಟು: ವಿ.ಸೋಮಣ್ಣ

| Published : Apr 08 2024, 01:06 AM IST

ನರೇಂದ್ರ ಮೋದಿಗಾಗಿ ಬಿಜೆಪಿ-ಜೆಡಿಎಸ್‌ ಒಗ್ಗಟ್ಟು: ವಿ.ಸೋಮಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ನರೇಂದ್ರ ಮೋದಿ ಪ್ರಧಾನಿಯಾಗಲೇಬೇಕು ಎಂದು ದೇವೇಗೌಡರು ಬಿಜೆಪಿ ಜೊತೆ ಮಹಾಮೈತ್ರಿ ಮಾಡಿಕೊಂಡಿದ್ದಾರೆ. ಅದರಂತೆ ಯಡಿಯೂರಪ್ಪ, ಕುಮಾರಸ್ವಾಮಿ ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್‌ನ ಎಲ್ಲ ಮುಖಂಡರು, ನಾಯಕರು ಮತ್ತು ಕಾರ್ಯಕರ್ತರುಗಳು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಸೋಮಣ್ಣ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತಿಪಟೂರು

ನರೇಂದ್ರ ಮೋದಿ ಪ್ರಧಾನಿಯಾಗಲೇಬೇಕು ಎಂದು ದೇವೇಗೌಡರು ಬಿಜೆಪಿ ಜೊತೆ ಮಹಾಮೈತ್ರಿ ಮಾಡಿಕೊಂಡಿದ್ದಾರೆ. ಅದರಂತೆ ಯಡಿಯೂರಪ್ಪ, ಕುಮಾರಸ್ವಾಮಿ ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್‌ನ ಎಲ್ಲ ಮುಖಂಡರು, ನಾಯಕರು ಮತ್ತು ಕಾರ್ಯಕರ್ತರುಗಳು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಸೋಮಣ್ಣ ತಿಳಿಸಿದರು.

ತಾಲೂಕಿನ ಕೆರೆಗೋಡಿ ರಂಗಾಪುರ ಸುಕ್ಷೇತ್ರದಿಂದ ಭಾನುವಾರ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಷ್ಟ್ರದ ಭದ್ರತೆ, ಜನರ ಭಾವೈಕ್ಯತೆ ಹಾಗೂ ವಿಶ್ವದ ಭೂಪಟದಲ್ಲಿ ಭಾರತದ ಸ್ವಾಭಿಮಾನ ಎತ್ತಿಹಿಡಿಯುವ ಮಹಾ ಚುನಾವಣೆ ಇದಾಗಿದೆ. ಬೇರೆ ಪಕ್ಷಗಳಿಗೆ ಪ್ರಧಾನಮಂತ್ರಿ ಅಭ್ಯರ್ಥಿಯೇ ಇಲ್ಲವಾಗಿದೆ. ನರೇಂದ್ರ ಮೋದಿಯವರ ಆಡಳಿತ ವೈಖರಿ ಎಲ್ಲರ ಮೆಚ್ಚುಗೆ ಗಳಿಸಿದೆ. ದೇಶದ ಜಿಡಿಪಿ ೭.೫ರಿಂದ ೧೦ಕ್ಕೆ ಹೋಗಬೇಕೆಂದರೆ ಮೋದಿ ಮತ್ತೆ ಪ್ರಧಾನಿಯಾಗಬೇಕು. ಅದಕ್ಕೆ ಬಿಜೆಪಿ ೪೦೦ ಸೀಟು ಗೆಲ್ಲಬೇಕು. ಅದರಲ್ಲಿ ತುಮಕೂರು ಕ್ಷೇತ್ರವೂ ಒಂದಾಗಿರಲು ನೀವೆಲ್ಲರೂ ಕಮಲದ ಗುರುತಿಗೆ ಮತ ನೀಡಿ ನನ್ನನ್ನು ಗೆಲ್ಲಿಸಿದರೆ ತುಮಕೂರು ಕ್ಷೇತ್ರವನ್ನು ಬೆಂಗಳೂರಿಗೆ ಸಮಾನವಾಗಿ ಅಭಿವೃದ್ಧಿಪಡಿಸುತ್ತೇನೆ ಎಂದರು. ನಾನು ಹೊರಗಿನವನು ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ನಾನು ನಿಮ್ಮೆಲ್ಲರ ಹೃದಯದಲ್ಲಿ ಇರುವವನು. ನಾನೊಬ್ಬ ಅಭಿವೃದ್ಧಿ ಹಾಗೂ ಜನಪರ ಕೆಲಸಗಾರ. ಬೆಂಗಳೂರಿನ ಗೋವಿಂದರಾಜನಗರ ಹೇಗೆ ಅಭಿವೃದ್ದಿ ಮಾಡಿದ್ದೇನೊ ಹಾಗೆ ಇಲ್ಲಿಯೂ ಅಭಿವೃದ್ಧಿಗೆ ದುಡಿಯುತ್ತೇನೆ. ಅದಕ್ಕಾಗಿ ನಾನು ತುಮಕೂರಿನಲ್ಲೇ ಮನೆ ಮಾಡಿದ್ದೇನೆ. ಹಲವಾರು ವರ್ಷಗಳಿಂದಲೂ ನಾನು ತುಮಕೂರಿನ ಒಡನಾಟ ಇಟ್ಟುಕೊಂಡಿದ್ದೇನೆ. ಜಿಲ್ಲಾ ಸಚಿವನಾಗಿ ಕೆಲಸ ಮಾಡಿ ದ್ದೇನೆ. ನನ್ನ ವಿರುದ್ದ ಅಪಪ್ರಚಾರ ಮಾಡುವವರು ರಾಹುಲ್‌ ಗಾಂಧಿ ಅಮೇಥಿ ಬಿಟ್ಟು ಕೇರಳದ ವಯನಾಡಿಗೆ ಹೋಗಿರುವ ಬಗ್ಗೆ ಮಾತನಾಡುವುದಿಲ್ಲ. ಕಾಂಗ್ರೆಸ್‌ನವರು ಮತ ಕೇಳಲು ಮೋದಿಯವರ ಬಗ್ಗೆ ಅಪಪ್ರಚಾರ ಬಿಟ್ಟರೆ ತಮ್ಮ ಸಾಧನೆ ಹೇಳಲು ಏನೂ ಇಲ್ಲ.

ದೇಶದ ಖಜಾನೆಗೆ ಖನ್ನಾ ಹಾಕುವಂತಹ ಸುಳ್ಳು ಗ್ಯಾರಂಟಿಗಳ ಹರಿ ಬಿಟ್ಟು ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿರುವ ಕಾಂಗ್ರೆಸ್ ಅನ್ನು ದೇಶಭಕ್ತಿ ಇರುವ ಯಾರೂ ನಂಬಬಾರದು. ಮುಂದಿನ ೧೦ ವರ್ಷಗಳ ಕಾಲ ದೇಶವನ್ನು ಮುನ್ನಡೆಸುವ ಶಕ್ತಿ ಇರುವುದು ಮೋದಿಯವರಿಗೆ ಮಾತ್ರ ಎಂಬುದನ್ನು ನಾವೆ ಲ್ಲರೂ ಅರ್ಥಮಾಡಿಕೊಳ್ಳಬೇಕಿದ್ದು, ಮೋದಿಯವರ ಕೈಬಲಪಡಿಸಲು ಪ್ರತಿಯೊಬ್ಬರೂ ಬಿಜೆಪಿಗೆ ಮತ ನೀಡಬೇಕೆಂದು ಮನವಿ ಮಾಡದರು. ಜೆಡಿಎಸ್ ಮುಖಂಡ ಕೆ.ಟಿ.ಶಾಂತಕುಮಾರ್ ಮಾತನಾಡಿ, ಕಳೆದ ಚುನಾವಣೆಯಲ್ಲಿ ದೇವೇಗೌಡರನ್ನು ಕಾಂಗ್ರೆಸ್ ಮುಖಂಡರು ತುಮಕೂರಿಗೆ ಕರೆತಂದು ಬಲಿಪಶು ಮಾಡಿದರು. ಎಲ್ಲರೂ ಸೇರಿ ಮೋಸದ ಕೂಟ ರಚನೆ ಮಾಡಿಕೊಂಡು ಮಾಜಿ ಪ್ರಧಾನಿ ದೇವೇಗೌಡರು ಸೋಲಲು ಏನೆಲ್ಲಾ ಬೇಕೊ ಅದನ್ನು ಮಾಡಿ ಸೋಲಿಸಿದರು. ಇಂದು ದೇವೇಗೌಡರು ಸೂಚಿಸಿರುವ ಹಾಗೂ ಅಭ್ಯರ್ಥಿಯಾಗಿರುವ ಸೋಮಣ್ಣನವರನ್ನು ಗೆಲ್ಲಿಸುವ ಮೂಲಕ ದೇವೇಗೌಡರ ಸೋಲಿಗೆ ಇಲ್ಲಿನ ಹಾಗೂ ಜಿಲ್ಲೆಯ ಎಲ್ಲರೂ ಉತ್ತರ ನೀಡಬೇಕು.

ದೇಶ ಮುನ್ನಡೆಸುವ ಎಲ್ಲ ಬುದ್ಧಿವಂತಿಕೆ, ಶಕ್ತಿ ಇರುವುದು ಮೋದಿಯವರಿಗೆ ಮಾತ್ರ ಎಂಬುದನ್ನ ದೇಶದ ಮತದಾರರು ಅರ್ಥಮಾಡಿಕೊಂಡಿದ್ದು ತುಮಕೂರಿ ನಲ್ಲಿ ಸೋಮಣ್ಣನವರನ್ನು ಗೆಲ್ಲಿಸುವ ಕೆಲಸಕ್ಕೆ ಎಲ್ಲರೂ ಕೈಜೋಡಿಸಬೇಕಾಗಿದೆ. ಸೋಮಣ್ಣ ಗೆಲ್ಲುತ್ತಾರೆ ಎನ್ನುವುದಕ್ಕೆ ನಾಮಪತ್ರ ಸಲ್ಲಿಸುವ ದಿನ ಸೇರಿದ್ದ ಅಪಾರ ಜನಸ್ತೋಮವೇ ಸಾಕ್ಷಿ. ಮಾಜಿ ಪ್ರಧಾನಿ ದೇವೇಗೌಡರು ಸೋಮಣ್ಣನವರಿಗೆ ಶುಭ ಸಂದೇಶ ನೀಡಿ ಕಳಿಸಿದ್ದು ತಿಪಟೂರು ಕ್ಷೇತ್ರದಿಂದ ಹೆಚ್ಚಿನ ಲೀಡ್ ನೀಡಿ ಗೆಲ್ಲಿಸಬೇಕೆಂದು ತಿಳಿಸಿದರು.ಮಾಜಿ ಸಚಿವ ಬಿ.ಸಿ.ನಾಗೇಶ್ ಮಾತನಾಡಿ, ಈ ಸಲ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಎನ್‌ಡಿಎ ಅಭ್ಯರ್ಥಿಗಳು ೪೦೦ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ನರೇಂದ್ರ ಮೋದಿ ಮತ್ತೆ ದೇಶದ ಪ್ರಧಾನಮಂತ್ರಿಯಾಗುವುದರಲ್ಲಿ ಯಾವ ಅನುಮಾನವೂ ಇಲ್ಲ. ದೇಶದೆಲ್ಲಡೆ ಮೋದಿ ಅಲೆ ಇದೆ. ಪ್ರಪಂಚ ದ ಬಹುತೇಕ ದೇಶಗಳು ಮೋದಿಯವರ ಸಲಹೆ ಪಡೆಯಲು ಕಾಯುತ್ತಿದ್ದಾರೆ. ಮೈತ್ರಿ ಕಾರ್ಯಕರ್ತರು ಬಿಜೆಪಿಗೆ ಮತ ಹಾಕಿಸುವ ಬಗ್ಗೆ ಮನವೊಲಿಸಿ ಜನ ರನ್ನು ಮತಗಟ್ಟೆಗೆ ಕರೆತರುವ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.ಮುಖಂಡರಾದ ಬಿಜೆಪಿ ಗಂಗರಾಜು, ಜೆಡಿಎಸ್ ಶಿವಸ್ವಾಮಿ, ಬಿಸಲೇಹಳ್ಳಿ ಜಗದೀಶ್, ರಂಗಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಇಂದಿರ, ದೇವರಾಜು, ಗುಲಾಬಿ ಸುರೇಶ್, ಸುರೇಶ್ ಮತ್ತಿತರರು ಇದ್ದರು. ಬಜಗೂರು, ಗಂಗನಘಟ್ಟ, ನೊಣವಿನಕೆರೆ, ಕೆ.ಬಿ. ಕ್ರಾಸ್, ಕರಡಾಳು ಸಂತೆ ಮೈದಾನ ಪ್ರಚಾರ ಮಾಡಿದರು.