ಡಾ.ಸುಧಾಕರ್‌ಗೆ ಗೆಲುವಿಗೆ ಬಿಜೆಪಿ-ಜೆಡಿಎಸ್‌ ಒಗ್ಗಟ್ಟು

| Published : Mar 30 2024, 12:56 AM IST / Updated: Mar 30 2024, 01:11 PM IST

ಸಾರಾಂಶ

ರಾಷ್ಟ್ರಮಟ್ಟದಲ್ಲಿ ಒಂದು ಸುಭದ್ರ, ಜನಪರವಾದ ಸರ್ಕಾರ ಬೇಕು ಎನ್ನುವ ದೃಷ್ಟಿಯಿಂದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು, ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಕೈ ಜೋಡಿಸಿದ್ದಾರೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು ತಿಳಿಸಿದರು.

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್‌ ನಿರಂತರವಾಗಿ ಸಭೆಗಳನ್ನು ನಡೆಸುತ್ತಿದ್ದು, ಎಲ್ಲೆಡೆ ಬಿಜೆಪಿ ಮತ್ತು ಜೆಡಿಎಸ್‌ ಒಗ್ಗಟ್ಟು ಕಂಡುಬಂದಿದೆ.

ಬಾಗೇಪಲ್ಲಿಯ ಹಿರಿಯ ಮುಖಂಡ ಹಾಗೂ ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು, ಗೌರಿಬಿದನೂರಿನ ಹಿರಿಯ ಮುಖಂಡ, ದ್ರಾಕ್ಷಿ ಮತ್ತು ವೈನ್‌ ಮಂಡಳಿ ಮಾಜಿ ಅಧ್ಯಕ್ಷ ರವಿನಾರಾಯಣ ರೆಡ್ಡಿ ಹಾಗೂ ಜೆಡಿಎಸ್‌ ಹಿರಿಯ ಮುಖಂಡ ಸಿ.ಆರ್‌.ನರಸಿಂಹಮೂರ್ತಿ, 2023ರ ಚುನಾವಣೆಯಲ್ಲಿ ಗೌರಿಬಿದನೂರು ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ಡಾ.ಶಶಿಧರ್ ಅವರನ್ನು ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್‌ ಭೇಟಿ ಮಾಡಿದ್ದು, ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರು ಸಂಪೂರ್ಣ ಬೆಂಬಲ ನೀಡಿ ಗೆಲುವಿಗೆ ಶ್ರಮಿಸುವುದಾಗಿ ತಿಳಿಸಿದರು.

ರಾಷ್ಟ್ರಮಟ್ಟದಲ್ಲಿ ಒಂದು ಸುಭದ್ರ, ಜನಪರವಾದ ಸರ್ಕಾರ ಬೇಕು ಎನ್ನುವ ದೃಷ್ಟಿಯಿಂದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು, ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಕೈ ಜೋಡಿಸಿದ್ದಾರೆ. 

ಮಾಜಿ ಮುಖ್ಯಮಂತ್ರಿ ಕುಮಾರಣ್ಣನವರು ನೀಡಿರುವ ಕರೆಯಂತೆ ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ಎಲ್ಲ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಒಗ್ಗಟ್ಟಿನಿಂದ ಎನ್‌ಡಿಎ ಮೈತ್ರಿಕೂಟದ ಗೆಲುವಿಗೆ ಶ್ರಮಿಸುತ್ತೇವೆ ಎಂದು ಭರವಸೆ ನೀಡಿದರು.

ನರೇಂದ್ರ ಮೋದಿಯವರನ್ನು ಮೂರನೇ ಬಾರಿಗೆ ಪ್ರಧಾನಿಯಾಗಿಸಲು ಹಾಗೂ ಬಯಲುಸೀಮೆಯ ಅಭಿವೃದ್ಧಿಗಾಗಿ ಬಿಜೆಪಿ ಮತ್ತು ಜೆಡಿಎಸ್‌ನ ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ಶ್ರಮಿಸಲಾಗುವುದು. 

ಈ ಮೂಲಕ ವಿಕಸಿತ ಚಿಕ್ಕಬಳ್ಳಾಪುರ ನಿರ್ಮಿಸಲಾಗುವುದು. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವುದು ಮಾತ್ರವಲ್ಲದೆ, ಅತ್ಯಧಿಕ ಮತ ಅಂತರ ಪಡೆಯಲು ಶ್ರಮಿಸುವುದಾಗಿ ಎರಡೂ ಪಕ್ಷಗಳ ಮುಖಂಡರು ಡಾ.ಕೆ.ಸುಧಾಕರ್‌ ಅವರಿಗೆ ತಿಳಿಸಿದರು.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್‌, ಏಪ್ರಿಲ್‌ 4ರಂದು ಬಿಜೆಪಿ ಮತ್ತು ಜೆಡಿಎಸ್‌ನ ಎಲ್ಲ ಹಿರಿಯ ನಾಯಕರು, ಮಾಜಿ ಸಚಿವರು, ಶಾಸಕರು, ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಚುನಾವಣಾ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸುತ್ತೇನೆ. 

ಈ ವೇಳೆ ರೋಡ್‌ ಶೋ ಆಯೋಜಿಸಲಾಗಿದೆ. ರೋಡ್ ಶೋಗೆ ಜೆಡಿಎಸ್ ರಾಜ್ಯಾಧ್ಯಕ್ಷ ಶ್ರೀ ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್. ಅಶೋಕ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷ ವಿಜಯೇಂದ್ರ, ಜಿಲ್ಲೆಯ ಎಲ್ಲಾ ಬಿಜೆಪಿ ಶಾಸಕರು, ಮಾಜಿ ಶಾಸಕರು ಸೇರಿದಂತೆ ಎಲ್ಲ ಹಿರಿಯ ನಾಯಕರನ್ನು ಆಹ್ವಾನಿಸುತ್ತೇನೆ ಎಂದು ತಿಳಿಸಿದರು.