ಸಾರಾಂಶ
ಬ್ರೋಕರ್ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಮುಂದಾಗಿದ್ದ ಬಿಜೆಪಿ-ಜೆಡಿಎಸ್ ನಾಯಕರಿಗೆ ಹೈಕೋರ್ಟ್ ತೀರ್ಪಿನಿಂದ ಮುಖಭಂಗವಾಗಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ತಿಳಿಸಿದರು.
ಮೈಸೂರು : ಬ್ರೋಕರ್ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಮುಂದಾಗಿದ್ದ ಬಿಜೆಪಿ-ಜೆಡಿಎಸ್ ನಾಯಕರಿಗೆ ಹೈಕೋರ್ಟ್ ತೀರ್ಪಿನಿಂದ ಮುಖಭಂಗವಾಗಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ತಿಳಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರನ್ನು ತೇಜೋವಧೆ ಮಾಡಬೇಕು. ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯನವರನ್ನು ಸಿಲುಕಿಸಲು ಬಿಜೆಪಿ, ಜೆಡಿಎಸ್ ನಾಯಕರು ಮುಂದಾಗಿದ್ದರು. ಅಂತಿಮವಾಗಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಸಿದ್ದರಾಮಯ್ಯ ಅಭಿಮಾನಿಗಳಿಗೆ ಸತ್ಯಕ್ಕೆ ಜಯ ಸಿಗುತ್ತದೆ ಎಂಬ ನಂಬಿಕೆ ಇತ್ತು. ಸತ್ಯ ಯಾವತ್ತೂ ಜಯಿಸುತ್ತದೆ ಎನ್ನುವುದಕ್ಕೆ ನ್ಯಾಯಾಲಯದ ತೀರ್ಪೇ ಸಾಕ್ಷಿ ಎಂದರು.
ನಾವು ಇದನ್ನು ಎಕ್ಸೆಪ್ಟ್ ಮಾಡಿದ್ವಿ. ಈ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಹಸ್ತಕ್ಷೇಪ ಇಲ್ಲ ಎಂಬುದು ನಮಗೆ ಗೊತ್ತಿತ್ತು. ನಮ್ಮ ಸೈಟ್ ಕಿತ್ತುಕೊಂಡು ನಮಗೆ ಮೋಸ ಮಾಡುವ ಕೆಲಸ ಆಗಿತ್ತು. ಬ್ರೋಕರ್ ಮೂಲಕ ಸೈಟ್ ಕಿತ್ತುಕೊಳ್ಳಲು ಮುಂದಾಗಿದ್ದರು ಎಂದು ದೂರುದಾರ ಸ್ನೇಹಮಯಿ ಕೃಷ್ಣರನ್ನು ಬ್ರೋಕರ್ ಗೆ ಹೋಲಿಸಿದರು.
ಸರ್ಕಾರ ಬೀಳಿಸಬೇಕು, ಸಿದ್ದರಾಮಯ್ಯರನ್ನು ಕೆಳಗಿಳಿಸಬೇಕು ಎನ್ನುವುದೇ ಇವರ ಹಿಡನ್ ಅಜೆಂಡಾ. ಸ್ನೇಹಮಯಿ ಕೃಷ್ಣ ಕೂಲಿಗಾಗಿ ಕೆಲಸ ಮಾಡ್ತಿದ್ದಾರೆ. ಅವರಿಗೆ ಒಂದಿಷ್ಟು ಹಣ ಕೊಟ್ಟಿರ್ತಾರೆ. ಒಂದು ತನಿಖಾ ಸಂಸ್ಥೆಗೆ ಪ್ರಭಾವ ಬೀರಲಿಕ್ಕೆ ಇಡಿ ಮುಂದಾಗಿದೆ. ಸಿದ್ದರಾಮಯ್ಯಗೆ ಕೆಟ್ಟ ಹೆಸರು ತರುವುದು ಇಡಿ ಉದ್ದೇಶ. ಇಡಿ ಅಧಿಕಾರಿಗಳಿಗೆ ಮಾನ ಮರ್ಯಾದೆ ಇದ್ದರೆ ಇಲ್ಲಿಗೇ ತನಿಖೆ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು.
ಸ್ನೇಹಮಯಿ ಕೃಷ್ಣ ಮೇಲ್ ಮಾಡಿದ ತಕ್ಷಣ ಎಫ್ಐಆರ್ ಮಾಡಲಾಗುತ್ತದೆ. ಒಂದು ತನಿಖಾ ಸಂಸ್ಥೆ ತನಿಖೆ ಮಾಡುವಾಗ ಮತ್ತೊಂದು ತನಿಖಾ ಸಂಸ್ಥೆ ತನಿಖೆ ಮಾಡುವಂತಿಲ್ಲ. ಯಾವ ಕಾನೂನಿನಲ್ಲೂ ಇದಕ್ಕೆ ಅವಕಾಶ ಇಲ್ಲ. ಹೈಕೋರ್ಟ್ ನಲ್ಲಿ ದೊಡ್ಡ ದೊಡ್ಡ ವಕೀಲರನ್ನು ಕರೆ ತಂದು ವಾದ ಮಾಡ್ತಿಸ್ತೀರಾ? ಅವರಿಗೆ ಫೀಸ್ ಕೊಡಲು ದುಡ್ಡು ಎಲ್ಲಿಂದ ಬಂತು ಹೇಳಿ?
ಮುಂದಿನ ದಿನಗಳಲ್ಲಿ ಅವರು ಸುಪ್ರೀಂಕೋರ್ಟ್ ಗೆ ಹೋಗ್ತಾರೆ ಅಲ್ಲಿಯೂ ನಾವು ಹೋರಾಟ ಮಾಡುತ್ತೇವೆ ಎಂದರು.
ಕಾಂಗ್ರೆಸ್ ಆಡಳಿತ ರಾಜ್ಯ ಸರ್ಕಾರಗಳನ್ನು ಕೇಂದ್ರ ಸರ್ಕಾರ ಅಸ್ಥಿರಗೊಳಿಸಲು ಮುಂದಾಗ್ತಿದೆ. ಇದು ಕರ್ನಾಟಕ ರಾಜ್ಯದಲ್ಲಿ ನಡೆಯೋದಿಲ್ಲ. ಕಾಂಗ್ರೆಸ್ ಕಾರ್ಯಕರ್ತರು ತುಂಬಾ ತಾಳ್ಮೆಯಿಂದ ಇದ್ದರು. ಹೀಗಾಗಿ, ಕಾಂಗ್ರೆಸ್ ಕಾರ್ಯಕರ್ತರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.
ರಾಜ್ಯ ಸರ್ಕಾರಕ್ಕೆ ಅನುದಾನ ತರುವಂತಹ ನಿಟ್ಟಿನಲ್ಲಿ ಬಿಜೆಪಿ, ಜೆಡಿಎಸ್ ಸಂಸದರು ಮುಂದಾಗಲಿ. ಜನರಿಗೆ ಒಳ್ಳೆಯ ಕೆಲಸ ಮಾಡಲು ಕೈ ಜೋಡಿಸಿ. ಸಿದ್ದರಾಮಯ್ಯನವರನ್ನು ತೆಗೀಬೇಕು ಅನ್ನೋ ಕೆಲಸ ಬಿಡಿ. ಅಮೇರಿಕಾದಿಂದ ಭಾರತೀಯರಿಗೆ ಬೇಡಿ ಹಾಕಿ ಕರೆ ತರಲಾಗುತ್ತಿದೆ. ಭಾರತೀಯರನ್ನು ಕಾಪಾಡುವ ಕೆಲಸ ಮಾಡಿ ಎಂದು ಅವರು ಆಗ್ರಹಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್, ನಗರಾಧ್ಯಕ್ಷ ಆರ್. ಮೂರ್ತಿ, ಮೂಡಾ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್, ಮಾಜಿ ಮೇಯರ್ ಬಿ.ಎಲ್. ಭೈರಪ್ಪ, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು, ಮುಖಂಡರಾದ ಎಂ. ಶಿವಣ್ಣ, ಕೆ. ಮಹೇಶ್ ಮೊದಲಾದವರು ಇದ್ದರು.
ಪ್ರಾಧಿಕಾರದಲ್ಲಿ ತೆಗೆದುಕೊಂಡ ನಿರ್ಧಾರವನ್ನು ಸ್ವತಃ ಸಿಎಂ ಸಿದ್ದರಾಮಯ್ಯ ತೆಗೆದುಕೊಂಡಿದ್ದರು ಎಂದು ಬಿಂಬಿತ ಮಾಡಲಿಕ್ಕೆ ಮುಂದಾಗಿದ್ದರು. ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಮಾಡಿದರು. ಈಗ ನ್ಯಾಯಾಲಯದ ತೀರ್ಪು ಬಂದಿದೆ. ಬಿಜೆಪಿ- ಜೆಡಿಎಸ್ ನಾಯಕರು ನ್ಯಾಯಾಲಯದ ತೀರ್ಪಿನ ಬಳಿಕ, ಪಶ್ಚತ್ತಾಪಕ್ಕಾಗಿ ಬೆಂಗಳೂರಿನಿಂದ ತಿರುಪತಿವರೆಗೆ ಪಾದಯಾತ್ರೆ ಮಾಡಬೇಕು. ಸಿದ್ದರಾಮಯ್ಯ ಮೇಲೆ ಆರೋಪ ಮಾಡಲಿಕ್ಕೆ ಮುಂದಾಗಿದ್ದರು. ರಾಜ್ಯದ ಜನತೆ ಇದನ್ನು ಸಹಿಸೋದಿಲ್ಲ.
- ಎಚ್.ವಿ. ರಾಜೀವ, ಮುಡಾ ಮಾಜಿ ಅಧ್ಯಕ್ಷಕೆಂಗಲ್ ಹನುಮಂತಯ್ಯನವರ ಕಾಲದಿಂದಲೂ ನಾಯಕರನ್ನು ಮುಗಿಸುವ ಕೆಲಸ ಆಗುತ್ತಿದೆ. ಈಗ ಸಿದ್ದರಾಮಯ್ಯ ವಿರುದ್ಧವೂ ಅಂತಹದ್ದೇ ಪಿತೂರಿ ನಡೆಯಿತು. ಇದು ಆರಂಭದ ಗೆಲುವು ಅಂತಿಮ ಗೆಲುವಲ್ಲ. ಸಿಎಂ ತವರು ಜಿಲ್ಲೆಯಲ್ಲೇ ಈ ರೀತಿ ಅವರನ್ನು ಸಿಲುಕಿಸುವ ಕೆಲಸ ಆಗ್ತಿದೆ. ಸಾಮಾನ್ಯರಲ್ಲಿ ಸಾಮಾನ್ಯ ವ್ಯಕ್ತಿಗಳು ತೇಜೋವಧೆ ಮಾಡುವ ಕೆಲಸ ಮಾಡ್ತಿದ್ದಾರೆ. ನಾವೆಲ್ಲರೂ ತುಂಬಾ ತಾಳ್ಮೆಯಿಂದ ಇದ್ದೇವೆ. ಬೇರೆ ಜಿಲ್ಲೆಗಳಲ್ಲಿ ಆಗಿದ್ರೆ ಸ್ನೇಹಮಯಿ ಕೃಷ್ಣ ಓಡಾಟ ಮಾಡೋದು ಕಷ್ಟ ಆಗ್ತಿತ್ತು. ಒಂದು ಗನ್ ಮ್ಯಾನ್ ಇಲ್ಲದೇ ಎಲ್ಲಿ ಬೇಕು ಅಲ್ಲಿ ಓಡಾಡುತ್ತಿದ್ದಾರೆ. ಇನ್ನ ಕೆಲವೇ ದಿನಗಳಲ್ಲಿ ಸಿದ್ದರಾಮಯ್ಯನವರ ಮೇಲಿನ ಎಲ್ಲಾ ಆರೋಪಗಳು ಮುಕ್ತವಾಗಲಿವೆ.
- ಡಾ.ಬಿ.ಜೆ.ವಿಜಯ್ ಕುಮಾರ್, ಜಿಲ್ಲಾಧ್ಯಕ್ಷ, ಕಾಂಗ್ರೆಸ್