ಸಾರಾಂಶ
ಬೆಂಗಳೂರು: ರಾಜ್ಯ ಸರ್ಕಾರಕ್ಕೆ ತಾಕತ್ತಿದ್ದರೆ ಎಫ್ಎಸ್ಎಲ್ ವರದಿ ಬಹಿರಂಗಪಡಿಸಲಿ. ಯಾರನ್ನೋ ರಕ್ಷಣೆ ಮಾಡಲು ಸರ್ಕಾರ ವರದಿಯನ್ನು ಮುಚ್ಚಿಡುವುದು ಬೇಡ ಎಂದು ಪ್ರತಿಪಕ್ಷದ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನದ ಪರ ಜೈಕಾರದ ಸುದ್ದಿ ಮಾಧ್ಯಮಗಳಲ್ಲಿ ಬಂದು ಜನರಿಗೆ ಗೊತ್ತಾದರೂ ಜನರ ಕಣ್ಣಿಗೆ ಮಣ್ಣೆರಚುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಎಫ್ಎಸ್ಎಲ್ ವರದಿ ಪರಿಶೀಲನೆ ಎಂದು ಹೇಳಿ ಯಾವುದೋ ವಾಹಿನಿಯ ವೀಡಿಯೋ ಪಡೆದು ಪರೀಕ್ಷೆ ನಡೆಸಿ ಸುಳ್ಳು ವರದಿ ರೂಪಿಸಲಾಗುತ್ತಿದೆ. ಇದನ್ನು ಮುಚ್ಚಿ ಹಾಕಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ವರದಿಯನ್ನು ತಿರುಚುವುದು ಖಂಡಿತ ಎಂದು ಆಪಾದಿಸಿದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಭಯೋತ್ಪಾದನಾ ಚಟುವಟಿಕೆ ಹೆಚ್ಚಿದೆ. ಮುಸ್ಲಿಂ ಮೂಲಭೂತವಾದಿಗಳು ಗಲಾಟೆ ಮಾಡುತ್ತಿದ್ದಾರೆ. ಪಾಕಿಸ್ತಾನಕ್ಕೆ ಜೈಕಾರ ಹಾಕಿದವರನ್ನು ಬಂಧಿಸಿ ಎಂದು ಆಗ್ರಹಿಸಿದರೆ ಸರ್ಕಾರ ಅವರನ್ನು ಬಿಟ್ಟುಬಿಡಿ ಎಂದು ಪೊಲೀಸರಿಗೆ ಸೂಚಿಸಿದೆ ಎಂದು ಹೇಳಿದರು.
ಹೀಗೆಯೇ ಬಿಟ್ಟರೆ ವಿಧಾನಸೌಧ ಕೂಡ ಭಯೋತ್ಪಾದಕರ ತಾಣವಾಗಲಿದೆ. ಕೆಂಗಲ್ ಹನುಮಂತಯ್ಯ ಅವರು ಕಟ್ಟಿದ ವಿಧಾನಸೌಧವನ್ನು ಉಳಿಸಲು ನಾವು ಹೋರಾಟ ಮಾಡುತ್ತಿದ್ದೇವೆ. ಸರ್ಕಾರದ ಕೆಲಸ ದೇವರ ಕೆಲಸ ಎಂದರೆ, ಈ ಸರ್ಕಾರ ಅದಕ್ಕೆ ಅಪಮಾನ ಮಾಡುತ್ತಿದೆ. ಈ ಪ್ರಕರಣ ಮುಚ್ಚಿಹಾಕಿ ದೇಶದ್ರೋಹಿಗಳಿಗೆ ರಕ್ಷಣೆ ನೀಡುವ ಇವರು ಭಂಡರು ಎಂದರು.ಬಿ.ಕೆ.ಹರಿಪ್ರಸಾದ್ ಅವರು ಪಾಕಿಸ್ತಾನಿಗಳು ಸಹೋದರರು ಎನ್ನುತ್ತಾರೆ. ಕಾಂಗ್ರೆಸ್ ನಾಯಕರ ಮನಸ್ಸಿನ ಪೂರ್ತಿ ಪಾಕಿಸ್ತಾನ ತುಂಬಿಕೊಂಡಿದೆ. ಇದೇ ರೀತಿ ಕುಕ್ಕರ್ ಬಾಂಬ್ ಸ್ಫೋಟಗೊಂಡಾಗ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ನನ್ನ ಬ್ರದರ್ಸ್ ಎಂದಿದ್ದರು ಎಂದು ನೆನಪಿಸಿದರು.