ಸಾರಾಂಶ
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಿರುವುದರಿಂದ ಅದರ ಪ್ರತಿಕೂಲ ಪರಿಣಾಮವಾಗಿ ಸರಕು ಸಾಗಾಣಿಕೆ ಹಾಗೂ ಸಾರಿಗೆ ದರಗಳಲ್ಲಿ ವಿಪರೀತ ಹೆಚ್ಚಳವಾಗಿದೆ.
ಸಂಡೂರು: ಪೆಟ್ರೋಲ್, ಡೀಸೆಲ್ ಮತ್ತಿತರ ವಸ್ತುಗಳ ಬೆಲೆ ಏರಿಸುವ ಮೂಲಕ ಜನ ಸಾಮಾನ್ಯರ ಜೀವನವನ್ನು ಸಂಕಷ್ಟಕ್ಕೆ ದೂಡುತ್ತಿರುವ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ಖಂಡಿಸಿ ಬಿಜೆಪಿ ಸಂಡೂರು ಮಂಡಲದ ಮುಖಂಡರು ಗುರುವಾರ ಪಟ್ಟಣದಲ್ಲಿ ಬಿಜೆಪಿ ಕಚೇರಿಯಿಂದ ತಾಲ್ಲೂಕು ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಜಿ.ಟಿ. ಪಂಪಾಪತಿ, ಸಂಡೂರು ಮಂಡಲ ಅಧ್ಯಕ್ಷ ನಾನಾ ಸಾಹೇಬ್ ನಿಕ್ಕಂ, ಮುಖಂಡರಾದ ಉಡೇದ ಸುರೇಶ್, ಆರ್.ಟಿ. ರಘುನಾಥ್, ವಿ.ಎಸ್. ಶಂಕರ್ ಅವರು ತಾಲ್ಲೂಕು ದಂಡಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿ, ರಾಜ್ಯ ಕಾಂಗ್ರೆಸ್ ಸರ್ಕಾರ ತಮ್ಮ ಅಧಿಕಾರದ ಆಸೆಗಾಗಿ ಮತ್ತು ಜನರಿಗೆ ನೀಡಿದ ಗ್ಯಾರಂಟಿಗಳನ್ನು ಈಡೇರಿಸುವುದಕ್ಕಾಗಿ ಬರಗಾಲದ ಈ ಸಂಕಷ್ಟ ಸಂದರ್ಭದಲ್ಲಿ ಮುದ್ರಾಂಕ ಶುಲ್ಕ, ಆಸ್ತಿ ತೆರಿಗೆ, ಬಸ್ ದರ ಮತ್ತು ದಿನಬಳಕೆ ವಸ್ತುಗಳ ಬೆಲೆ ಏರಿಕೆ ಮಾಡಿ ಜನ ಸಾಮಾನ್ಯರ ಮೇಲೆ ಬರೆ ಹಾಕುತ್ತಿದೆ ಎಂದು ಕಿಡಿಕಾರಿದರು.ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಿರುವುದರಿಂದ ಅದರ ಪ್ರತಿಕೂಲ ಪರಿಣಾಮವಾಗಿ ಸರಕು ಸಾಗಾಣಿಕೆ ಹಾಗೂ ಸಾರಿಗೆ ದರಗಳಲ್ಲಿ ವಿಪರೀತ ಹೆಚ್ಚಳವಾಗಿದೆ. ಇದರಿಂದ ಜನಸಾಮಾನ್ಯರ ದಿನನಿತ್ಯದ ಜೀವನ ಇನ್ನಷ್ಟು ದುಬಾರಿಯಾಗಲಿದೆ. ಆದಷ್ಟು ಬೇಗ ರಾಜ್ಯ ಕಾಂಗ್ರೆಸ್ ಸರ್ಕಾರ ಕೈಗೊಂಡಿರುವ ಬೆಲೆ ಏರಿಕೆ ನಿರ್ಧಾರಗಳನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ಪಕ್ಷದ ಮುಖಂಡರಾದ ಕೆ.ಎಸ್. ದಿವಾಕರ್, ಎಫ್. ಕುಮಾರನಾಯ್ಕ್, ಕೆ. ಯರಿಸ್ವಾಮಿ, ಡಿ. ಪ್ರಹ್ಲಾದ್, ವಾಮಣ್ಣ, ದರೋಜಿ ರಮೇಶ್, ಅಶೋಕ್ ಕುಮಾರ್, ಓ.ಇ ಚಂದ್ರಪ್ಪ, ಯು. ಕಿನ್ನೂರೇಶ್ವರ, ರಾಜಶೇಖರಪಾಟೀಲ್, ಪರುಷೋತ್ತಮ, ಮಲ್ಲಿಕಾರ್ಜುನ, ರವಿಕಾಂತ್ ಭೋಸ್ಲೆ, ನರಸಿಂಹ, ಚಂದ್ರಶೇಖರ್, ಆರ್. ಬಸವರಾಜ, ರಾಮಾಂಜಿನಿ, ಅಡಿವೆಪ್ಪ, ರಮೇಶ್, ದೀಪಾ, ದೇವಿಕಾ, ಗೀತಾ, ಯರಿಯಮ್ಮ, , ವಿಶ್ವನಾಥರೆಡ್ಡಿ, ಕೆ. ಹರೀಶ್ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.