ರಾಜ್ಯ ಸರ್ಕಾರ ಉಚಿತ ಯೋಜನೆಗಳನ್ನು ಘೋಷಣೆ ಮಾಡಿದ್ದು, ಅದರ ಹಣವನ್ನು ಸರಿದೂಗಿಸಲು ಪದೇಪದೇ ಅಗತ್ಯವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಜನಸಾಮಾನ್ಯರ ಬದುಕಿನ ಜೊತೆ ಚೆಲ್ಲಾಟ ಆಡುತ್ತಿದೆ. ಇಂತಹ ಸರ್ಕಾರಕ್ಕೆ ರಾಜ್ಯ ಜನತೆ ತಕ್ಕ ಬುದ್ಧಿ ಕಲಿಸಬೇಕು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಕರ್ನಾಟಕದಲ್ಲಿ ಹಾಲು, ಮೊಸರು ಮತ್ತು ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣ ದರ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಬಿಜೆಪಿ ಜಿಲ್ಲಾ ಯುವ ಮೋರ್ಚಾದ ಪದಾಧಿಕಾರಿಗಳು, ಮುಖಂಡರು ಟಾಂಗಾ ಏರಿ ನಗರದಲ್ಲಿ ವಿನೂತನ ಪ್ರತಿಭಟನೆ ನಡೆಸಿದರು.ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಸಮಾವೇಶಗೊಂಡ ಬಿಜೆಪಿ ಮುಖಂಡರು, ಜಿಲ್ಲಾ ಯುವ ಮೋರ್ಚಾದ ಕೆಲವು ಪದಾಧಿಕಾರಿಗಳು, ಕಾರ್ಯಕರ್ತರು ಕುದುರೆಗಾಡಿ ಏರಿ ತಾಯಿ ಭುವನೇಶ್ವರಿ ವೃತ್ತಕ್ಕೆ ತೆರಳಿ ಅಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ರಸ್ತೆತಡೆ ನಡೆಸಿ, ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ. ರಾಮಚಂದ್ರ ಮಾತನಾಡಿ, ರಾಜ್ಯ ಕಾಂಗ್ರೆಸ್‌ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಾ ಬಂದಿದ್ದು, ನ. 1 ರಿಂದ ಹಾಲು, ಮೊಸರು ದರ ಏರಿಕೆ ಮಾಡಿದ್ದು, ಇಂದಿನಿಂದ ಶೇ. 30ರಿಂದ 40 ರಷ್ಟು ಬಸ್ ಪ್ರಯಾಣ ದರವನ್ನು ಏರಿಕೆ ಮಾಡಿದ್ದು, ಅಕ್ಕಿ, ಆಹಾರ ಪದಾರ್ಥಗಳ ಬೆಲೆಗಳನ್ನು ಹೆಚ್ಚು ಮಾಡಿದ್ದಾರೆ. ಉಚಿತ ಕರೆಂಟ್ ಎಂದು ಹೇಳಿ ವಿದ್ಯುತ್ ದರ ಹೆಚ್ಚಳ ಮಾಡುವ ಮೂಲಕ ಜನಸಾಮಾನ್ಯರಿಗೆ ಹೊರೆಯಾಗುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.

ಪಂಚ ಗ್ಯಾರಂಟಿ ಯೋಜನೆಗಳಿಗೆ ಹಣ ಕೊರತೆಯಿಂದ ಅದನ್ನು ಸರಿದೂಗಿಸುವ ಸಲುವಾಗಿ ರಾಜ್ಯ ಸರ್ಕಾರ ಎಲ್ಲ ಅಗತ್ಯವಸ್ತುಗಳ ಬೆಲೆ ಏರಿಕೆ ಮಾಡಿದೆ. ಮಹಿಳೆಯರಿಗೆ ಉಚಿತ ಸೌಲಭ್ಯ ಕೊಡುವುದಾಗಿ ಘೋಷಿಸಿ ಪುರುಷರಿಗೆ ಎಲ್ಲವನ್ನೂ ಏರಿಕೆ ಮಾಡಿ ಮಹಿಳೆಯರಿಗೆ ಉಚಿತ ಸೌಲಭ್ಯ ಕೊಡುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಬೆಲೆ ಏರಿಕೆ ಖಂಡಿಸಿ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತಿದೆ. ಈ ಕೂಡಲೇ ಕಾಂಗ್ರೆಸ್ ಸರ್ಕಾರ ಹೆಚ್ಚಿಸಿರುವ ಹಾಲು, ಮೊಸರು, ತುಪ್ಪ, ಬಸ್ ಪ್ರಯಾಣ ದರ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಎ.ಆರ್.ಬಾಬು ಮಾತನಾಡಿ, ಕಳೆದ 42 ತಿಂಗಳುಗಳಿಂದ ನೀತಿಗೆಟ್ಟ ರಾಜ್ಯ ಕಾಂಗ್ರೆಸ್‌ ಸರ್ಕಾರ, ಲೂಟಿಕೋರ ಸರ್ಕಾರ ಅಧಿಕಾರಕ್ಕೆ ಬಂದಿದ್ದು. ಸುಮಾರು ಇಲ್ಲಿಯತನಕ ಅನೇಕ ಬಾರಿ ಅಗತ್ಯವಸ್ತುಗಳ ಬೆಲೆ ಏರಿಕೆ ಮಾಡಿ ಜನಸಾಮಾನ್ಯರಿಗೆ ಹೊರೆಯಾಗಿದೆ. ಎಲ್ಲಕ್ಕೂ ಬೆಲೆ ಏರಿಕೆ ಮಾಡಿದ್ದು ಗಾಳಿಯನ್ನು ಮಾತ್ರ ಬಿಟ್ಟಿದೆ. ಇಂತಹ ಬೆಲೆ ಏರಿಕೆ ನೀತಿಗೆಟ್ಟ ಸರ್ಕಾರ ನಮಗೆ ಬೇಕಾ ಎಂದು ಪ್ರಶ್ನಿಸಿದರು.

ಬಿಜೆಪಿ ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಸೂರ್ಯ ಬಾಲರಾಜ್ ಮಾತನಾಡಿ, ರಾಜ್ಯ ಸರ್ಕಾರ ಉಚಿತ ಯೋಜನೆಗಳನ್ನು ಘೋಷಣೆ ಮಾಡಿದ್ದು, ಅದರ ಹಣವನ್ನು ಸರಿದೂಗಿಸಲು ಪದೇಪದೇ ಅಗತ್ಯವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಜನಸಾಮಾನ್ಯರ ಬದುಕಿನ ಜೊತೆ ಚೆಲ್ಲಾಟ ಆಡುತ್ತಿದೆ. ಇಂತಹ ಸರ್ಕಾರಕ್ಕೆ ರಾಜ್ಯ ಜನತೆ ತಕ್ಕ ಬುದ್ಧಿ ಕಲಿಸಬೇಕು ಎಂದರು.

ಪ್ರತಿಭಟನೆಯಲ್ಲಿ ಚೂಡಾ ಮಾಜಿ ಅಧ್ಯಕ್ಷ ಬಾಲಸುಬ್ರಹ್ಮಣ್ಯ, ನಗರಮಂಡಲ ಅಧ್ಯಕ್ಷ ಶಿವರಾಜ್, ಜಿಲ್ಲಾ ಕಾರ್ಯದರ್ಶಿ ಸುಂದರ್ ರಾಜ್, ನಗರಸಭಾ ಮಾಜಿ ಸದಸ್ಯ ಶಿವಣ್ಣ, ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆನಂದ್ ಭಗೀರಥ, ಜಿಲ್ಲಾ ಮೋರ್ಚಾದ ಉಪಾಧ್ಯಕ್ಷ ಮಹದೇವಪ್ರಸಾದ್, ಕೋಟಂಬಳ್ಳಿ, ಫೋಟೋ ಕೃಷ್ಣ, ಮಾಧ್ಯಮ ಮಂಜುನಾಥ್, ಪ್ರವೀಣ್‌ ನಾಯಕ, ಬಂಗಾರನಾಯಕ, ಮಣಿ ನಾಯಕ, ವೀರೇಂದ್ರ, ವೇಣುಗೋಪಾಲ್, ರಾಮಸಮುದ್ರ ಶಿವಕುಮಾರ್, ಮಹೇಶ್, ಬೀರೇಶ್, ಕಿರಣ್, ಮಾರ್ಕೇಟ್ ಕುಮಾರ್. ಮಹೇಶ್, ಪರಶಿವ, ಸಿ.ಡಿ.ಪ್ರಕಾಶ್, ಲೋಕೇಶ್ ಇತರರು ಭಾಗವಹಿಸಿದ್ದರು.