ಶ್ರೀರಾಮುಲು ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದಲೇ ಸ್ಪರ್ಧಿಸಲು ಬಿಜೆಪಿ ಮುಖಂಡರಿಂದ ಮನವಿ

| Published : Jan 29 2025, 01:32 AM IST

ಶ್ರೀರಾಮುಲು ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದಲೇ ಸ್ಪರ್ಧಿಸಲು ಬಿಜೆಪಿ ಮುಖಂಡರಿಂದ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮೀಣ ಕ್ಷೇತ್ರದಿಂದ ದೂರ ಉಳಿದರೆ ಈ ಭಾಗದ ಕಾರ್ಯಕರ್ತರು ಅನಾಥರಾಗುತ್ತಾರೆ. ಶ್ರೀರಾಮುಲು ಅವರು ಮಾತ್ರ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂದು ಮುಖಂಡರು ಆಗ್ರಹಿಸಿದ್ದಾರೆ.

ಬಳ್ಳಾರಿ: ಬಿಜೆಪಿಯ ಹಿರಿಯ ನಾಯಕ ಬಿ. ಶ್ರೀರಾಮುಲು ಅವರು ಬರುವ ವಿಧಾನಸಭಾ ಚುನಾವಣೆಯಲ್ಲಿ ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದಲೇ ಸ್ಪರ್ಧಿಸಬೇಕು ಎಂದು ಗ್ರಾಮೀಣ ಕ್ಷೇತ್ರ ವ್ಯಾಪ್ತಿಯ ಬಿಜೆಪಿ ಮುಖಂಡರಾದ ಶಿವಾರೆಡ್ಡಿ, ದಿವಾಕರಗೌಡ ಹಾಗೂ ಗೌಳಿ ಚಂದ್ರು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬರುವ ವಿಧಾನಸಭಾ ಚುನಾವಣೆಯಲ್ಲಿ ಶ್ರೀರಾಮುಲು ಅವರು ಕೂಡ್ಲಿಗಿಯಿಂದ ಸ್ಪರ್ಧಿಸಲಿದ್ದಾರೆ ಎಂದು ತಿಳಿದು ಬಂದಿದೆ. ಗ್ರಾಮೀಣ ಕ್ಷೇತ್ರದಿಂದ ದೂರ ಉಳಿದರೆ ಈ ಭಾಗದ ಕಾರ್ಯಕರ್ತರು ಅನಾಥರಾಗುತ್ತಾರೆ. ಶ್ರೀರಾಮುಲು ಅವರು ಮಾತ್ರ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸಬಲ್ಲ ಸಮರ್ಥ ನಾಯಕರಾಗಿದ್ದು, ಯಾವುದೇ ಕಾರಣಕ್ಕೂ ಕೂಡ್ಲಿಗಿ ಕ್ಷೇತ್ರಕ್ಕೆ ಹೋಗದೆ ಇಲ್ಲಿಯೇ ಉಳಿಯಬೇಕು ಎಂದು ಒತ್ತಾಯಿಸಿದರು.

ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ರಾಜಕೀಯ ಭವಿಷ್ಯ ಕಂಡುಕೊಂಡಿರುವ ಶ್ರೀರಾಮುಲು ಇದೀಗ ಕೂಡ್ಲಿಗಿಯಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಈ ಕುರಿತು ಅವರೇ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ಹಾಗಾದರೆ ಶ್ರೀರಾಮುಲು ಅವರು ಕೂಡ್ಲಿಗಿಯಿಂದ ಸ್ಪರ್ಧಿಸುವಂತೆ ಪಕ್ಷ ಸೂಚನೆ ನೀಡಿದೆಯಾ? ಹೈಕಮಾಂಡ್ ಅನುಮತಿ ಕೊಟ್ಟಿದೆಯಾ ಎಂದು ಪ್ರಶ್ನಿಸಿದರು.

ಲೋಕಸಭಾ ಚುನಾವಣೆ ಸೋಲಿನ ಬಳಿಕ ಶ್ರೀರಾಮುಲು ಪಕ್ಷದ ಕಾರ್ಯಕರ್ತರ ಸಭೆ ನಡೆಸಲಿಲ್ಲ. ನಿಮ್ಮ ಸಮಸ್ಯೆ ಏನು ಎಂದು ಆಲಿಸಲಿಲ್ಲ. ಶೀಘ್ರದಲ್ಲಿಯೇ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳು ಬರುತ್ತಿವೆ. ಶ್ರೀರಾಮುಲು ಅವರು ಕೂಡ್ಲಿಗಿಗೆ ಹೋದರೆ ಇಲ್ಲಿನ ಪಕ್ಷದ ಕಾರ್ಯಕರ್ತರ ಗತಿ ಏನು? ಜಿಪಂ ಹಾಗೂ ತಾಪಂ ಚುನಾವಣೆಯಲ್ಲಿ ಪಕ್ಷದ ಮುಖಂಡರನ್ನು ಗೆಲ್ಲಿಸಿಕೊಂಡು ಬರುವವರು ಯಾರು? ಸಾಯುವ ತನಕ ಗ್ರಾಮೀಣ ಕ್ಷೇತ್ರ ಬಿಟ್ಟು ಎಲ್ಲಿಗೂ ಹೋಗುವುದಿಲ್ಲ. ಕ್ಷೇತ್ರದ ಜನರ ಜೊತೆಗಿದ್ದು ಜನಪರ ಹೋರಾಟ ರೂಪಿಸುತ್ತೇನೆ. ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಹೇಳಿದ್ದ ಶ್ರೀರಾಮುಲು ಅವರು, ಈಗೇಕೆ ಕೂಡ್ಲಿಗಿ ಕಡೆ ಮುಖ ಮಾಡಿದ್ದಾರೆ ಎಂದು ಕೇಳಿದರು.

ಎರಡೂ ಕಡೆ ಬೇಕಾದರೆ ಸ್ಪರ್ಧಿಸಲಿ

ಶ್ರೀರಾಮುಲು ಅವರು ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸಿದಾಗ ಜನಾರ್ದನ ರೆಡ್ಡಿಯವರೇ ಅಲ್ಲಿಗೆ ಹೋಗಿ ವಾಸ್ತವ್ಯ ಹೂಡಿ ಅವರನ್ನು ಗೆಲ್ಲಿಸಿಕೊಂಡು ಬಂದರು. ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಅವರು ನಮ್ಮ ನಾಯಕರು. ಅವರಿಬ್ಬರ ನಡುವಿನ ಅಸಮಾಧಾನಗಳು ಅವರ ವೈಯುಕ್ತಿಕವಾದದ್ದು. ಆದರೆ, ನಾವು ಪಕ್ಷಕ್ಕಾಗಿ ಶ್ರಮಿಸುತ್ತಿದ್ದೇವೆ. ಪಕ್ಷ ಉಳಿಯಬೇಕು. ಕಾರ್ಯಕರ್ತರು ಉಳಿಯಬೇಕು ಎಂಬುದು ನಮ್ಮ ಒತ್ತಾಸೆ. ಹೀಗಾಗಿಯೇ ಶ್ರೀರಾಮುಲು ಅವರು ಗ್ರಾಮೀಣ ಕ್ಷೇತ್ರ ಬಿಟ್ಟು ಹೋಗಬೇಡಿ ಎಂದು ಮನವಿ ಮಾಡುತ್ತಿದ್ದೇವೆ. ಒಂದು ವೇಳೆ ಅವರು ಕೂಡ್ಲಿಗಿಯಿಂದ ಸ್ಪರ್ಧಿಸಲೇಬೇಕೆಂದಿದ್ದರೆ, ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದಲೂ ಸ್ಪರ್ಧೆ ಮಾಡಲಿ ಎಂದು ಆಗ್ರಹಿಸಿದರು.

ಗ್ರಾಮೀಣ ಕ್ಷೇತ್ರದ ಬಿಜೆಪಿ ಮುಖಂಡರಾದ ಭೀಮರೆಡ್ಡಿ, ಹೊನ್ನಾರೆಡ್ಡಿ, ಶ್ರೀನಿವಾಸ್, ಮಲ್ಲೇಶ್, ಲಿಂಗನಗೌಡ, ಸಂಜುನಾಯಕ್ ಸೇರಿದಂತೆ ಅನೇಕರು ಸುದ್ದಿಗೋಷ್ಠಿಯಲ್ಲಿದ್ದರು.