ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳಿಂದ ಮಹಿಳೆಯರಿಗೆ ಮಾಡುತ್ತಿರುವ ಅವಮಾನ ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾದಿಂದ ನಗರದ ಹಳೆ ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಲಾಯಿತು.ಈ ಸಂದರ್ಭ ಪ್ರತಿಭಟನಾ ನಿರತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಸುದ್ದಿಗಾರರೊಂದಿಗೆ ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯ ಆಸ್ಪತ್ರೆ ಸಮಸ್ಯೆ ಕುರಿತು ಪ್ರಶ್ನೆ ಕೇಳಿದ ಮಹಿಳಾ ಪತ್ರಕರ್ತೆಗೆ ನಿನ್ನ ಹೆರಿಗೆ ಬೇರೆ ಕಡೆ ಮಾಡಿಸುವುದಾಗಿ ಉಡಾಫೆಯ ಉತ್ತರವನ್ನು ಕಾಂಗ್ರೆಸ್‌ನ ಹಿರಿಯ ನಾಯಕ, ಶಾಸಕರಾದ ಆರ್.ವಿ.ದೇಶಪಾಂಡೆ ನೀಡಿದ್ದಾರೆ. ಶಾಸಕರ ಹೇಳಿಕೆಯಿಂದ ಕಾಂಗ್ರೆಸ್ ಪಕ್ಷದಲ್ಲಿ ಮಹಿಳೆಯರ ವಿಚಾರದಲ್ಲಿ ಕಾಂಗ್ರೆಸ್‌ನ ಮಹಿಳಾ ವಿರೋಧಿ ಧೋರಣೆ ವ್ಯಕ್ತವಾಗುತ್ತಿದೆ. ಸ್ತ್ರೀ ಕುಲವನ್ನು ಅವಹೇಳನ ಮಾಡುವ ರೀತಿಯಲ್ಲಿ ಉದ್ಘರಿಸಿರುವ ಅವರ ಮಾತು ನಾಗರಿಕ ಸಮಾಜ ಎಂದಿಗೂ ಒಪ್ಪಲಾಗದು. ಅಸಭ್ಯವಾಗಿ ಉತ್ತರ ನೀಡಿದ ಕಾಂಗ್ರೆಸ್ ಶಾಸಕರು ಈ ಕೂಡಲೇ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ ಅವರು, ತಾಯಿಯ ಗೌರವಕ್ಕೆ ಧಕ್ಕೆ ತರುವಂತಹ ಹೇಳಿಕೆಗಳು ಖಂಡಿತ ಶೋಭೆ ತರುವುದಿಲ್ಲ. ರಾಜಕಾರಣವನ್ನು ಕೆಳದರ್ಜೆಗೆ ಇಳಿಸುವಂತಹ ವರ್ತನೆ ಸಹಿಸಲಾಗದು ಎಂದರು.ಬಿಜೆಪಿ ಜಿಲ್ಲಾಧ್ಯಕ್ಷ ರವಿಕಾಳಪ್ಪ ಮಾತನಾಡಿ, ಭಾರತೀಯ ಸಂಸ್ಕೃತಿಯಂತೆ ನಾವು ತಾಯಿಯ ಪಾದ ಮುಟ್ಟಿ ನಮಸ್ಕರಿಸುತ್ತೇವೆ. ಆದರೆ, ಕಾಂಗ್ರೆಸಿನ ಕೆಲವು ನಾಯಕರು ಮಹಿಳ ಕುಲವನ್ನೇ ಕೀಳು ಮಟ್ಟದಲ್ಲಿ ಕಾಣುತ್ತಿದೆ. ಇದು ಖಂಡನೀಯ. ಬಿಹಾರದ ದರ್ಭಾಂಗದಲ್ಲಿ ರಾಹುಲ್ ಗಾಂಧಿಯವರ ಮತದಾನ ಅಧಿಕಾರ ಯಾತ್ರೆಯ ಸಂದರ್ಭದಲ್ಲಿ ಕಾಂಗ್ರೆಸ್-ಆರ್‌ಜೆಡಿ ವೇದಿಕೆಯಿಂದ ಪ್ರಧಾನಿ ಮೋದಿ ಮತ್ತು ಅವರ ದಿ.ತಾಯಿಯ ಬಗ್ಗೆ ಅಶ್ಲೀಲ ಪದಗಳ ನಿಂದನಾತ್ಮಕ ಘೋಷಣೆಗಳನ್ನು ಕೂಗಿ ಅವಮಾನ ಮಾಡಿದ್ದಾರೆ. ಇದನ್ನು ಪ್ರತಿಯೊಬ್ಬ ಮಹಿಳೆಯು ಖಂಡಿಸುವಂತಾಗಬೇಕು. ಜತೆಗೆ ರಾಹುಲ್ ಗಾಂಧಿ ಹೋಗುವ ದಾರಿಯಲ್ಲಿ ಮಹಿಳೆಯರು ಪ್ರತಿಭಟನೆ ನಡೆಸುವಂತಾಗಬೇಕು ಎಂದರು.ಪ್ರತಿಭಟನೆಯಲ್ಲಿ ಮಹಿಳಾ ಮೋರ್ಚಾದ ನಗರಾಧ್ಯಕ್ಷೆ ಸೌಮ್ಯ, ಸೋಮವಾರಪೇಟೆ ತಾಲೂಕು ಅಧ್ಯಕ್ಷೆ ಕವಿತಾ ವಿರುಪಾಕ್ಷ, ಪ್ರಮುಖರಾದ ತಂಗಮ್ಮ, ಕವಿತಾ ಹಾಗೂ ನಗರಸಭೆ ಸದಸ್ಯರು ಹಾಗೂ ಮಾಜಿ ಅಧ್ಯಕ್ಷ ರಾಭಿನ್ ದೇವಯ್ಯ, ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ವಕ್ತಾರರಾದ ಅರುಣ್ ಕುಮಾರ್ ಹಾಗೂ ಬಿಜೆಪಿ ಕಾರ್ಯಕರ್ತರಿದ್ದರು.