ತಪ್ಪು ಸಂದೇಶ ನೀಡಲು ಬಿಜೆಪಿ ಪಾದಯಾತ್ರೆ: ಡಾ.ಪರಂ

| Published : Jul 29 2024, 12:49 AM IST

ಸಾರಾಂಶ

ರಾಜ್ಯದ ಸಂಪತ್ತನ್ನೇ ಲೂಟಿ ಮಾಡುತ್ತಿದ್ದ, ಅಕ್ರಮ ಗಣಿಗಾರಿಕೆಯಿಂದ ಮೆರೆಯುತ್ತಿದ್ದ ಬಿಜೆಪಿಯವರ ವಿರುದ್ಧ ಕಾಂಗ್ರೆಸ್ ಪಕ್ಷದಿಂದ ಹಿಂದೆ ಪಾದಯಾತ್ರೆ ನಡೆಸಿದ್ದೇವೆ. ಈಗ ಸಿಎಂ ಸಿದ್ದರಾಮಯ್ಯ ವಿರುದ್ಧ ಅದೇ ಬಿಜೆಪಿಯವರು ಅನಗತ್ಯ ಆರೋಪ ಮಾಡಿ, ರಾಜ್ಯದ ಜನರಿಗೆ ತಪ್ಪು ಸಂದೇಶ ನೀಡಲು ಪಾದಯಾತ್ರೆ ಕೈಗೊಳ್ಳಲು ಹೊರಟಿದ್ದಾರೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಹರಿಹಾಯ್ದರು.

- ವಾಲ್ಮೀಕಿ, ಮುಡಾ ಹಗರಣದ ತನಿಖೆಗೆ ಸಿಎಂ ಕ್ರಮ ಕೈಗೊಂಡಿದ್ದಾರೆ: ಗೃಹ ಸಚಿವ ಹೇಳಿಕೆ - - -

ಕನ್ನಡಪ್ರಭ ವಾರ್ತೆ, ದಾವಣಗೆರೆ ರಾಜ್ಯದ ಸಂಪತ್ತನ್ನೇ ಲೂಟಿ ಮಾಡುತ್ತಿದ್ದ, ಅಕ್ರಮ ಗಣಿಗಾರಿಕೆಯಿಂದ ಮೆರೆಯುತ್ತಿದ್ದ ಬಿಜೆಪಿಯವರ ವಿರುದ್ಧ ಕಾಂಗ್ರೆಸ್ ಪಕ್ಷದಿಂದ ಹಿಂದೆ ಪಾದಯಾತ್ರೆ ನಡೆಸಿದ್ದೇವೆ. ಈಗ ಸಿಎಂ ಸಿದ್ದರಾಮಯ್ಯ ವಿರುದ್ಧ ಅದೇ ಬಿಜೆಪಿಯವರು ಅನಗತ್ಯ ಆರೋಪ ಮಾಡಿ, ರಾಜ್ಯದ ಜನರಿಗೆ ತಪ್ಪು ಸಂದೇಶ ನೀಡಲು ಪಾದಯಾತ್ರೆ ಕೈಗೊಳ್ಳಲು ಹೊರಟಿದ್ದಾರೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಹರಿಹಾಯ್ದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ವಿರುದ್ಧ ಹಿಂದೆ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪಾದಯಾತ್ರೆಯಲ್ಲಿ ನಿಜಾಂಶ ಇತ್ತು. ರಾಜ್ಯದ ಸಂಪತ್ತನ್ನು ಉಳಿಸುವ ಸದುದ್ದೇಶದಿಂದ ಕೈಗೊಂಡಿದ್ದ ಪಾದಯಾತ್ರೆ ಅದಾಗಿತ್ತು. ಆದರೆ, ಇಂದು ಸಿದ್ದರಾಮಯ್ಯ ವಿರುದ್ಧ ಅನಗತ್ಯ ಆರೋಪ ಹೊರಿಸಿ, ಪಾದಯಾತ್ರೆ ನಡೆಸಲು ಬಿಜೆಪಿಯವರು ಹೊರಟಿದ್ದಾರೆ ಎಂದರು.

ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ-ಜೆಡಿಎಸ್ ವಿನಾಕಾರಣ ಆರೋಪ ಮಾಡುತ್ತಿವೆ. ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿಲ್ಲ. ಕಾನೂನುಬಾಹಿರ ಕೆಲಸವನ್ನೂ ನಡೆಸಿಲ್ಲ. ಮುಡಾ ಹಗರಣ ಸಂಬಂಧ ಸಿಎಂ ರಾಜೀನಾಮೆ ನೀಡಬೇಕು, ಸಿಬಿಐ ತನಿಖೆಗೆ ಒಪ್ಪಿಸುವಂತೆ ಬಿಜೆಪಿ ಪಾದಯಾತ್ರೆ ನಡೆಸುತ್ತಿರುವುದು ಹಾಸ್ಯಾಸ್ಪದ ಎಂದರು.

ಯಾವುದೇ ರೀತಿಯ ಕಾನೂನುಬಾಹಿರ ಕೆಲಸ ನಡಯದೇ ಇರುವ ಪ್ರಕರಣದ ಬಗ್ಗೆ ಪಾದಯಾತ್ರೆ ಮಾಡುವ ಮೂಲಕ ಜನರಿಗೆ ತಪ್ಪು ಮಾಹಿತಿ, ತಪ್ಪು ಸಂದೇಶ ನೀಡಲು ಬಿಜೆಪಿಯವರು ಪ್ರಯತ್ನಿಸುತ್ತಿದ್ದಾರೆ. ನಾವು ರಾಜ್ಯದ ಜನತೆಗೆ ಬಿಜೆಪಿಯವರ ಪಾದಯಾತ್ರೆಯ ದುರುದ್ದೇಶ ಮತ್ತು ಹಿಂದಿನ ನಮ್ಮ ಪಾದಯಾತ್ರೆಯ ಸದುದ್ದೇಶದ ವ್ಯತ್ಯಾಸವನ್ನು ತಿಳಿಸುವ ಕೆಲಸವನ್ನು ಮಾಡುತ್ತೇವೆ. ತಪ್ಪಿಲ್ಲದ ಕಾರಣಕ್ಕೆ ಧೈರ್ಯದಿಂದಲೇ ವಾಲ್ಮೀಕಿ ಹಗರಣ ಮತ್ತು ಮುಡಾ ಬಗ್ಗೆ ಸರಿಯಾದ ತನಿಖೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಿದ್ದಾರೆ. ಸಮಿತಿ ವರದಿ ಬಂದ ನಂತರ ಜನರಿಗೆ ಸತ್ಯ ತಿಳಿಯುತ್ತದೆ. ತಪ್ಪಿತಸ್ಥರಿಗೆ ಶಿಕ್ಷೆಯೂ ಆಗುತ್ತದೆ ಎಂದು ಗೃಹ ಸಚಿವರು ಹೇಳಿದರು.

ವಾಲ್ಮೀಕಿ ನಿಗಮದ ಭ್ರಷ್ಟಾಚಾರ ಹಗರಣ ಸಮರ್ಥಿಸುತ್ತಿಲ್ಲ. ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದರೆ, ತಪ್ಪು ಮಾಡಿದ್ದರೆ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ವಿಧಿಸುತ್ತೇವೆ. ಸರ್ಕಾರವು ತನಿಖೆಗೆ ಸಿಐಡಿಗೆ ಒಪ್ಪಿಸಿತ್ತು. ತನಿಖೆ ನಡೆಯುತ್ತಿದೆ. ಜೊತೆಗೆ ಸಿಬಿಐ, ಜಾರಿ ನಿರ್ದೇಶನಾಲಯ ತನಿಖೆ ಮಾಡುತ್ತಿದೆ. ವರದಿ ಬಂದ ಬಳಿಕ ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ. ಪೊಲೀಸ್ ಅಧಿಕಾರಿಗಳು ತಪ್ಪು ಮಾಡಿದ್ದರೂ ಶಿಕ್ಷೆಗೊಳಪಡಿಸುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಅಲ್ಲದೇ, ವಾಲ್ಮೀಕಿ ನಿಗಮದ ಹಗರಣ ಕುರಿತಂತೆ ತನಿಖೆ ಮುಗಿಯುವವರೆಗೆ ಯಾರೂ ಊಹಾಪೋಹಗಳನ್ನು ನಂಬುವುದು ಬೇಡ. ಸಚಿವರ ಖಾತೆಗೆ ಹಣ ಹೋಗಿದ್ದರೆ ಕ್ರಮ ತೆಗೆದುಕೊಳ್ಳುತ್ತೇವೆ. ಯಾರ ಬಗ್ಗೆಯೂ, ಯಾವುದೇ ಮುಲಾಜೇನೂ ಇಲ್ಲ. ಎಲ್ಲ ವಿಚಾರಗಳ ಕುರಿತಂತೆಯೂ ತನಿಖೆ ಮಾಡುತ್ತೇವೆ. ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

- - - ಬಾಕ್ಸ್‌-1* ಪೃಥ್ವಿ ವೀಡಿಯೋ ಸೂಕ್ತ ತನಿಖೆ

ಪೃಥ್ವಿ ಹೆಸರಿನ ಯುವಕ ನ್ಯಾಯ ಸಿಗದಿದ್ದರೆ ಭಯೋತ್ಪಾದಕನಾಗಿ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಮಾಡಿರುವ ಬಗ್ಗೆ ಸೂಕ್ತ ತನಿಖೆ ಕೈಗೊಳ್ಳಲಾಗುವುದು. ಇಂತಹ ಆರೋಪಗಳು ಬಂದಾಗ ಯಾವುದೇ ಪೊಲೀಸ್ ಠಾಣೆಯಲ್ಲಿ ಅನಾವಶ್ಯಕ ತೊಂದರೆ ಮಾಡಿದ್ದರೆ ಇಲಾಖೆ ತನಿಖೆ ನಡೆಸುತ್ತದೆ. ಪೊಲೀಸರದ್ದೇ ತಪ್ಪಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ತಪ್ಪು ಕಂಡುಬಂದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವುದೂ ಖಚಿತ ಎಂದು ಸಚಿವ ಪರಮೇಶ್ವರ್‌ ಸ್ಪಷ್ಟಪಡಿಸಿದರು.

- - -

ಬಾಕ್ಸ್‌-2* ನಾಯಿ ಮಾಂಸ ಅಲ್ಲ, ಮೇಕೆ ಮಾಂಸ - ದುರುದ್ದೇಶದಿಂದ ಗಲಾಟೆ ಮಾಡಿದರೆ ಸುಮ್ಮನೆ ಕೂರಲ್ಲ: ಸಚಿವ

ದಾವಣಗೆರೆ: ರಾಜಸ್ಥಾನದಿಂದ ಪ್ರತಿ ವಾರ ಅಥವಾ 15 ದಿನಕ್ಕೊಮ್ಮೆ ಮಾಂಸ ತಂದು ಮಾರಾಟ ಮಾಡುವುದು ಕೆಲವರ ವೃತ್ತಿಯಾಗಿದೆ. ಆದರೆ, ಅನಾವಶ್ಯಕವಾಗಿ ಅದು ನಾಯಿ ಮಾಂಸ ಎಂಬುದಾಗಿ ಆರೋಪವನ್ನು ಕೆಲವರು ಮಾಡಿದ್ದು, ಪ್ರಯೋಗಾಲಯದ ವರದಿಯನ್ವಯ ಅದು ಮೇಕೆ ಮಾಂಸ ಎಂಬುದು ಬಹಿರಂಗಗೊಂಡಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಸ್ಪಷ್ಟಪಡಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೋ ಹೋಗಿ ಅದು ನಾಯಿ ಮಾಂಸ ಅಂತಾ ಹೇಳಿ, ಅನಾವಶ್ಯಕವಾಗಿ ಆರೋಪ ಮಾಡಿ, ಗಲಾಟೆ ಮಾಡಿದ್ದಾರೆ. ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆಯವರು ಮಾಂಸವನ್ನು ಪ್ರಯೋಗಾಲಯಕ್ಕೆ ಕಳಿಸಿದ್ದಾರೆ. ವರದಿ ಸಹ ಬಂದಿದ್ದು, ಅದು ನಾಯಿ ಮಾಂಸ ಅಲ್ಲ, ಮೇಕೆ ಮಾಂಸವೆಂಬುದಾಗಿ ವರದಿಯಲ್ಲಿದೆ ಎಂದು ತಿಳಿದುಬಂದಿದೆ ಎಂದರು.

ಪ್ರಯೋಗಾಲಯ ವರದಿಯಲ್ಲಿ ಅದು ಮೇಕೆ ಮಾಂಸವೆಂಬುದು ಬಹಿರಂಗಗೊಂಡಿದೆ. ಹಾಗಾಗಿ, ಯಾರೇ ಆಗಲಿ ಅನಾವಶ್ಯಕ, ದುರುದ್ದೇಶದಿಂದ ಗಲಾಟೆ ಮಾಡಲು ಮುಂದಾದರೆ ಸುಮ್ಮನೆ ಕೂಡುವುದಕ್ಕೆ ಸಾಧ್ಯವಿಲ್ಲ. ಅದರ ಬಗ್ಗೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂದು ಹಿಂದು ಸಂಘಟನೆಯ ಮುಖಂಡ ಪುನೀತ್ ಕೆರೆಹಳ್ಳಿ ಬಂಧನವನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ ಸಮರ್ಥಿಸಿಕೊಂಡರು.

ತಡವಾಗಾದ್ರೂ ಮಂಜೂರು:

ಬಜೆಟ್‌ನಲ್ಲಿ ಯಾವುದೇ ಇಲಾಖೆಗೆ ನೀಡಿದ ಅನುದಾನ ಸ್ಥಗಿತಗೊಳಿಸುವುದಕ್ಕೆ ಆಗುವುದಿಲ್ಲ. ಸ್ವಲ್ಪ ತಡವಾದರೂ ಆಯಾ ಇಲಾಖೆಗೆ ನೀಡಬೇಕಾದ ಅನುದಾನವನ್ನು ಸರ್ಕಾರವು ಮಂಜೂರು ಮಾಡುತ್ತದೆ ಎಂದು ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಗೆ ಅನುದಾನವನ್ನು ಸರ್ಕಾರ ಹಿಂಪಡೆದ ಕುರಿತ ಪ್ರಶ್ನೆಗೆ ಸಚಿವ ಪರಮೇಶ್ವರ್‌ ಪ್ರತಿಕ್ರಿಯಿಸಿದರು.

- - -

(ಫೋಟೋ: ಪರಮೇಶ್ವರ, ಸಚಿವ)