ಸಾರಾಂಶ
ಶಿವಮೊಗ್ಗ: ಸಮೀಕ್ಷೆಯನ್ನು ವಿರೋಧಿಸುವ ಬಿಜೆಪಿಯವರು ದೇಶದ್ರೋಹಿಗಳು. ಸಮಾನತೆಯನ್ನು ತರುವ ಈ ಪ್ರಯತ್ನಕ್ಕೆ ಅಡ್ಡಿಪಡಿಸುತ್ತಿರುವ ಬಿಜೆಪಿ ಉದ್ದೇಶವೇನು? ಬಡವರು, ತಳವರ್ಗದವರು ಏಕೆ ಮೇಲಕ್ಕೆ ಬರಬಾರದೇ? ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರಶ್ನಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಂವಿಧಾನಬದ್ಧವಾಗಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು ಕೈಗೊಂಡಿದ್ದು, ಇದನ್ನು ವಿರೋಧಿಸುತ್ತಿರುವ ಬಿಜೆಪಿ ವಿರುದ್ಧ ಸುಪ್ರೀಂಕೋರ್ಟ್ ಸುಮೊಟೋ ಕೇಸ್ ದಾಖಲಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಮಾಡಿದರು.ಕೆಳ ವರ್ಗದವರಿಗೆ, ಆರ್ಥಿಕವಾಗಿ ಹಿಂದುಳಿದವರಿಗೆ ಸರ್ಕಾರದ ಸೌಲಭ್ಯಗಳನ್ನು ನೀಡಲು ಈ ಸಮೀಕ್ಷೆ ಅತ್ಯಂತ ಮಹತ್ವಪೂರ್ಣದ್ದಾಗಿದೆ. ಶಾಲಾ ಶಿಕ್ಷಕರು ಇಡೀ ರಾಜ್ಯದಲ್ಲಿ ಬಹಳ ಒಳ್ಳೆಯ ರೀತಿಯಿಂದ ಸಮೀಕ್ಷೆ ನಡೆಸುತ್ತಿದ್ದಾರೆ. ಸಮೀಕ್ಷೆಯ ಯಶಸ್ಸಿಗೆ ಕಾರಣೀಕರ್ತರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಶಿಕ್ಷಕರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ತಿಳಿಸಿದರು.ಮಾಜಿ ಪ್ರಧಾನಿ ನೆಹರೂ ಅವರು ಸಮಾಜದಲ್ಲಿ ಆರ್ಥಿಕ ಸಮಾನತೆ ತರುವ ಹಿನ್ನೆಲೆಯಲ್ಲಿ ಸಂವಿಧಾನ ತಿದ್ದುಪಡಿ ಮಾಡಿದ್ದರು. ಪ್ರತಿ 10 ವರ್ಷಕ್ಕೊಮ್ಮೆ ಜಾತಿಗಣತಿ ಆಗಬೇಕೆಂದು ನಿಯಮವಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಆರ್ಥಿಕ ಅಸಮಾನತೆಯನ್ನು ಹೋಗಲಾಡಿಸಲು ಈಗ ಆರಂಭಿಸಿದ ಸಮೀಕ್ಷೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದ ಅವರು, ಪ್ರಜಾಪ್ರಭುತ್ವದ ಬಗ್ಗೆ ಭಾಷಣ ಮಾಡುವುದು ಮುಖ್ಯವಲ್ಲ, ಆದರೆ ಅದನ್ನು ಅನುಷ್ಠಾನಕ್ಕೆ ತರುವುದು ಬಹಳ ಮುಖ್ಯ ಎಂದು ಬಿಜೆಪಿಗೆ ತಿರುಗೇಟು ನೀಡಿದರು.ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷದ ನಾಯಕ ಆರ್.ಅಶೋಕ್, ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಬಿಜೆಪಿಯ ಇನ್ನಿತರ ನಾಯಕರು ರಾಜ್ಯ ಸರ್ಕಾರ ಕೈಗೊಂಡಿರುವ ಸಮೀಕ್ಷೆಯ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಗೂಬೆಕೂರಿಸಲು ಪ್ರಯತ್ನಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅಂತಹವರೇ ಈ ಸಮೀಕ್ಷೆಯ ಬಗ್ಗೆ ಏನನ್ನೂ ಮಾತನಾಡಿಲ್ಲ. ಹೀಗಿದ್ದಾಗ ಬಿಜೆಪಿಯ ಉಳಿದ ನಾಯಕರು ಏಕೆ ಏನೂ ತಿಳುವಳಿಕೆ ಇಲ್ಲದೆ ಮಾತನಾಡುತ್ತಿದ್ದಾರೆ ಎಂದು ಪ್ರಶ್ನಿಸಿದ ಅವರು, ಬಿ.ವೈ.ವಿಜಯೇಂದ್ರ ಅವರಿಗೆ ಬಡವರ ಬಗ್ಗೆ, ಕೆಳವರ್ಗದವರ ಬಗ್ಗೆ ಕಿಂಚಿತ್ತೂ ತಿಳುವಳಿಕೆ ಇಲ್ಲ. ‘ಅವರಿನ್ನೂ ಬಚ್ಚಾ ಎಂದು ವ್ಯಂಗ್ಯವಾಡಿದರು.ಸಮೀಕ್ಷೆಗೆ ತಾವು ಯಾವ ಮಾಹಿತಿಯನ್ನು ಕೊಡುವುದಿಲ್ಲ ಎಂದು ಹೇಳಿರುವ ಕೇಂದ್ರ ಸಚಿವ ಪ್ರಲ್ಹಾದ್‌ಜೋಶಿ ಅವರು ತಮ್ಮ ಹೇಳಿಕೆಯನ್ನು ವಾಪಸ್ಸು ಪಡೆಯಬೇಕೆಂದು ಒತ್ತಾಯಿಸಿದ ಅವರು, ಸಮೀಕ್ಷೆಗೆ ವಿರೋಧಿಸುತ್ತಿರುವ ಬಿಜೆಪಿಯವರ ದೇಶದ್ರೋಹಿ ನಡವಳಿಕೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಈ ಸಮೀಕ್ಷೆಯ ಯಶಸ್ಸು ಬಿಜೆಪಿಯ ಸೋಲು ಎಂದು ಅರ್ಥೈಸಿದರು.ಸಮೀಕ್ಷೆಗಳ ದತ್ತಾಂಶಗಳ ಸೋರಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಮಧು ಬಂಗಾರಪ್ಪ, ಈ ವಿಷಯದಲ್ಲಿ ರಾಜ್ಯದ ಮಾನ ಹರಾಜು ಹಾಕಿದ್ದೇ ಬಿಜೆಪಿ ಸರ್ಕಾರ. ಕಾಂಗ್ರೆಸ್ ಸರಕಾರ ಎಂದಿಗೂ ಸಂಗ್ರಹಿಸಿದ ದತ್ತಾಂಶಗಳು ಸೂರಿಕೆಯಾಗಲು ಬಿಡುವುದಿಲ್ಲ ಎಂದರಲ್ಲದೆ, ಸಮೀಕ್ಷೆಗೆ ಧರ್ಮ, ಜಾತಿಪಟ್ಟ ಕಟ್ಟುತ್ತಿರುವ ಬಿಜೆಪಿ ನಡೆಯನ್ನು ಕಟುವಾಗಿ ಟೀಕಿಸಿದರು.ಸಂವಿಧಾನ ಎತ್ತಿಹಿಡಿಯುವ ಕೆಲಸ, ಸಮಾಜದಲ್ಲಿ ಸಮಾನತೆ ಸಾಧಿಸುವ ಕೆಲಸ ಮಾಡುವ ಮೂಲಕ ಕಾಂಗ್ರೆಸ್ ಸರ್ವಜನಾಂಗದ ಶಾಂತಿಯ ತೋಟ ಎಂಬ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದೆ ಎಂದು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಂಸದ ಆಯನೂರು ಮಂಜುನಾಥ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್. ಪ್ರಸನ್ನಕುಮಾರ್, ಗ್ಯಾರಂಟಿ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ್, ಪ್ರಮುಖರಾದ ರಮೇಶ್ ಶಂಕರಘಟ್ಟ, ಕಲಗೋಡು ರತ್ನಾಕರ್, ದೇವಿಕುಮಾರ್, ಜಿ.ಡಿ.ಮಂಜುನಾಥ್, ಖಲಿಂಪಾಷಾ, ಎಸ್.ಟಿ.ಹಾಲಪ್ಪ, ರಾಘವೇಂದ್ರ ಮುಡುಬ, ಆದರ್ಶ್, ಸಮಾಜ ಕಲ್ಯಾಣ, ಶಿಕ್ಷಣ ಇಲಾಖೆ ಅಧಿಕಾರಿಗಳು ಇದ್ದರು.
ಗಣತಿ: ಶೇ.54ರಷ್ಟು ಪೂರ್ಣರಾಜ್ಯದ ಸರಾಸರಿ ಶೇ.54 ರಷ್ಟಿದ್ದರೆ, ಶಿವಮೊಗ್ಗ ಜಿಲ್ಲೆಯಲ್ಲಿ ಶೇ.63.46 ರಷ್ಟು ಗಣತಿ ಪೂರ್ಣಗೊಂಡಿದೆ. ಅದರಲ್ಲೂ ಶಿಕಾರಿಪುರದಲ್ಲಿ ಶೇ.70 ಮತ್ತು ಸೊರಬದಲ್ಲಿ ಶೇ.77 ರಷ್ಟು ಮತ್ತು ಶಿವಮೊಗ್ಗ ನಗರ ಶೇ.56, ತೀರ್ಥಹಳ್ಳಿ ಶೇ.57 ಯಶಸ್ವಿಯಾಗಿದೆ ಎಂದು ಸಚಿವ ಮಧುಬಂಗಾರಪ್ಪ ಅಂಕಿಅಂಶ ನೀಡಿದರು.