ಸರ್ಕಾರದ ಗುಲಾಮರು ಎಂದು ಟೀಕೆ ಮಾಡಿದರಲ್ಲದೇ ಕಾಕ್ರೋಚ್ ಎನ್ನುವುದು ವಿದೇಶೀ ಹಣದಿಂದ ನಡೆದಿದೆ.
ಕೊಪ್ಪಳ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ದೆಹಲಿಯಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆ ಬೆಂಬಲಿಸಿ ಕಾಂಗ್ರೆಸ್ ಪ್ರಧಾನಿ ನರೇಂದ್ರ ಮೋದಿ ಮನೆ ಮುಂದೆ ಧರಣಿ ನಡೆಸಿದ್ದನ್ನು ವಿರೋಧಿಸಿ ಗುರುವಾರ ಬಿಜೆಪಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಬಿಜೆಪಿ ಎಂಎಲ್‌ಸಿ ಹೇಮಲತಾ ನಾಯಕ್ ಅವರು ಇಲ್ಲಿನ ಕಾಂಗ್ರೆಸ್ ಕಚೇರಿಗೆ ಸ್ವತಃ ಕಲ್ಲೆಸೆದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಮುಖಂಡರು ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಕಾಂಗ್ರೆಸ್ ಪ್ರತಿಕೃತಿ, ರಾಹುಲ್ ಗಾಂಧಿ ಭಾವಚಿತ್ರ ದಹಿಸಿದ್ದಲ್ಲದೇ ಪ್ರತಿಭಟನಾ ಮೆರವಣಿಗೆ ನಡೆಸುತ್ತಾ ಡಿಸಿ ಕಚೇರಿ ಮುಂದೆ ಆಗಮಿಸಿದರು. ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಆದರೆ ಪೊಲೀಸರು ಮೊದಲೇ ಬ್ಯಾರಿಕೇಡ್ ಹಾಕಿದ್ದರು. ಈ ವೇಳೆ ಹಲವು ಕಾರ್ಯಕರ್ತರು ಏಕಾಏಕಿ ನುಗ್ಗಿ ಬ್ಯಾರಿಕ್ಕೇಡ್ ಕಿತ್ತಾಕಿ ನೇರ ಕಾಂಗ್ರೆಸ್‌ನ ಕಚೇರಿ ಗೇಟ್‌ಗೆ ಮುತ್ತಿಗೆ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಬಿಜೆಪಿ ಎಂಎಲ್‌ಸಿ ಹೇಮಲತಾ ನಾಯಕ್ ಸ್ಥಳದಲ್ಲಿಯೇ ಇದ್ದ ಇಟ್ಟಿಗೆ ಹಿಡಿದು ಕಚೇರಿ ಗ್ಲಾಸ್‌ಗೆ ಹೊಡೆದು ತಮ್ಮ ಆಕ್ರೋಶ ಹೊರಹಾಕಿದರು. ಈ ವೇಳೆ ಅವರೊಟ್ಟಿಗೆ ಇತರೆ ಮಹಿಳೆಯರೂ ಸಹ ಕಲ್ಲು ಎಸೆದು ಕಾಂಗ್ರೆಸ್‌ನ ವಿರುದ್ಧ ತೀವ್ರವಾಗಿ ಗುಡುಗಿದರು. ತಕ್ಷಣ ಎಚ್ಚೆತ್ತ ಪೊಲೀಸರು ಅವರನ್ನು ಬಂಧಿಸಿ ಪೊಲೀಸ್ ಜೀಪು ಹತ್ತಿಸಿದರು.
ಅಸ್ಥಿರತೆ ತರುವ ಕೆಲಸ:ನೀಟ್ ವಿಚಾರದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದರೆ, ಈ ಕಾಂಗ್ರೆಸ್ ನಾಯಕರು ಅದನ್ನು ತಮ್ಮ ರಾಜಕೀಯಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಸ್ಥಿರತೆ ತರುವ ಕೆಲಸ ಮಾಡುತ್ತಿದ್ದಾರೆ. ಇದನ್ನು ಬಿಜೆಪಿ ಎಂದಿಗೂ ಸಹಿಸಲ್ಲ ಎಂದು ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.ದೆಹಲಿಯಲ್ಲಿ ಏಕಾಏಕಿ ಪ್ರಧಾನಿ ಮನೆ ಮುಂದೆ ಪ್ರತಿಭಟನೆ ಮಾಡುವುದು ಸರಿಯಾ ? ಎಂದರಲ್ಲದೇ ಬೆಂಗಳೂರಿನಲ್ಲಿ ಪ್ರತಿಭಟನೆಯ ವೇಳೆ ಬಿಜೆಪಿ ನಾಯಕರಿಗೆ ಇದೇ ಕಾಂಗ್ರೆಸ್‌ನವರು ಮೊಟ್ಟೆ ಹೊಡೆದು ತಮ್ಮ ಸಣ್ಣತನ ತೋರಿದ್ದಾರೆ. ಪೊಲೀಸ್ ಇಲಾಖೆ ಆಗ ಏನು ಮಾಡುತ್ತಿತ್ತು ಎಂದು ಪ್ರಶ್ನೆ ಮಾಡಿದ ಬಿಜೆಪಿ ಎಂಎಲ್‌ಸಿ ಹೇಮಲತಾ ನಾಯಕ್ ರಾಜ್ಯದಲ್ಲಿ ಹಾಗೂ ರಾಷ್ಟ್ರದಲ್ಲಿ ವಿದ್ಯಾರ್ಥಿಗಳಿಗೆ ದಾರಿ ತಪ್ಪಿಸುವ ಕೆಲಸ ಆಗುತ್ತಿದೆ. ಪೊಲೀಸ್ ಇಲಾಖೆಯವರು ನಮ್ಮನ್ನು ಬಂಧಿಸಲು ಬಂದಿದ್ದಾರೆ. ಇವರು ಸರ್ಕಾರದ ಗುಲಾಮರು ಎಂದು ಟೀಕೆ ಮಾಡಿದರಲ್ಲದೇ ಕಾಕ್ರೋಚ್ ಎನ್ನುವುದು ವಿದೇಶೀ ಹಣದಿಂದ ನಡೆದಿದೆ. ಪೀಜಾ ಬರ್ಗರ್ ತಿಂದು ಹೋರಾಟ ಮಾಡುತ್ತಿದೆ ಎಂದು ಆರೋಪಿಸಿದರು.
ಪ್ರತಿಭಟನೆಯ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ್, ಎಂಎಲ್‌ಸಿ ಹೇಮಲತಾ ನಾಯಕ್, ಶಾಸಕ ದೊಡ್ಡನಗೌಡ ಪಾಟೀಲ್, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಮಾಜಿ ಸಂಸದ ಶಿವರಾಮೆಗೌಡ, ರಾಜು ಬಾಕಳೆ, ಎ.ವಿ. ಕಣವಿ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು.