ಸಾರಾಂಶ
ಹುಬ್ಬಳ್ಳಿ:
ಮಹದಾಯಿ ಯೋಜನೆಗೆ ಸಂಬಂಧಿಸಿದಂತೆ ಬಿಜೆಪಿ ಯಾವೊಬ್ಬ ಸಂಸದರು ಸಂಸತ್ತಿನಲ್ಲಿ ಚಕಾರ ಎತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.ಅವರು ಭಾನುವಾರ ನಗರದ ನೆಹರು ಮೈದಾನದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಬಸವಣ್ಣ ಜಯಂತಿ ಅಂಗವಾಗಿ ಹಮ್ಮಿಕೊಂಡ ವಿಶ್ವ ಮಾನವರ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಮಹದಾಯಿ ಯೋಜನೆ ಅನುಷ್ಠಾನ ವಿಚಾರದಲ್ಲಿ ಬಿಜೆಪಿ ಸುಳ್ಳು ಹೇಳುವುದನ್ನು ಬಿಟ್ಟು ಕೇಂದ್ರ ಪರಿಸರ ಇಲಾಖೆ ಪರವಾನಗಿ ಕೊಡಿಸಲಿ. ಯೋಜನೆ ಅನುಷ್ಠಾನಕ್ಕೆ ಎಷ್ಟೇ ವೆಚ್ಚವಾದರೂ ಸರಿ, ರಾಜ್ಯ ಸರ್ಕಾರ ಯೋಜನೆ ಅನುಷ್ಠಾನಗೊಳಿಸಲು ಸಿದ್ಧವಿದೆ. ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಅವರು ಯಾವುದೋ ಒಂದು ಕಾಗದದ ತಂದು ಸುಳ್ಳು ಹೇಳಿ ವೋಟ್ ಪಡೆದರು. ನಾವು ಹಾಗೆ ಮಾಡುವುದಿಲ್ಲ. ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿದರೆ ಸಂಸತ್ತಿನಲ್ಲಿ ನಿಮ್ಮ ಪರವಾಗಿ ಧ್ವನಿ ಎತ್ತುವುದಾಗಿ ಭರವಸೆ ನೀಡಿದರು.ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯವರು 70 ವರ್ಷ ಕಾಂಗ್ರೆಸ್ ಏನು ಮಾಡಿದೆ ಎಂದು ಕೇಳುತ್ತಾರೆ. ಮೋದಿ ಹುಟ್ಟುವ ಪೂರ್ವದಲ್ಲಿಯೇ ಭಾರತಕ್ಕೆ ಸಂವಿಧಾನ ಅನುಷ್ಠಾನಗೊಂಡಿತ್ತು. ಅಣೆಕಟ್ಟುಗಳನ್ನು ನಿರ್ಮಿಸಿದೆ. ಊಳುವನೆ ಒಡೆಯ, ಬ್ಯಾಂಕ್‌ಗಳ ರಾಷ್ಟ್ರೀಕರಣ, ಮೀಸಲಾತಿ, ಗರೀಬಿ ಹಠಾವೋ, ಬಡವರಿಗೆ ಸಾಮಾಜಿಕ ಭದ್ರತೆ ಸೇರಿದಂತೆ ಅನೇಕ ಯೋಜನೆಗಳನ್ನು ನೀಡಿದೆ. ಸದ್ಯ ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆ ಮೂಲಕ ನೇರವಾಗಿ ಅವರ ಖಾತೆಗೆ ಹಣ ಜಮೆ ಮಾಡಲಾಗುತ್ತಿದೆ. ಇದರಿಂದ ಆರ್ಥಿಕ ಸ್ಥಿತಿ ಸುಧಾರಣೆ ಕಂಡಿದೆ. ಮೋದಿಯವರು ಒಂದೇ ಒಂದು ರುಪಾಯಿಯಾದರೂ ಕೊಟ್ಟಿದ್ದಾರೆಯೇ ಎಂದು ಪ್ರಶ್ನಿಸಿದರು.
₹ 63 ಸಾವಿರ ಕೋಟಿ ಆದಾಯ ಹೊಂದಿದ್ದ ಅದಾನಿ 10 ವರ್ಷದಲ್ಲಿ ₹ 1.80 ಲಕ್ಷ ಕೋಟಿ ಆದಾಯ ಗಳಿಸುತ್ತಿದ್ದಾರೆ. ಅಜಿಂ ಪ್ರೇಮಜಿ ಇಲ್ಲಿಯ ವರೆಗೆ ₹2.30 ಲಕ್ಷ ಕೋಟಿ ದೇಶಕ್ಕೆ ದೇಣಿಗೆ ನೀಡಿದ್ದನ್ನು ಯಾಕೆ ಹೇಳುತ್ತಿಲ್ಲ. ಇನ್ನೊಂದೆಡೆ ಬಿಜೆಪಿ ಬಿಎಸ್‌ಎನ್‌ಎಲ್ ಸೇರಿ ಒಟ್ಟು 23 ಸಂಸ್ಥೆಗಳನ್ನು ಖಾಸಗಿಕರಣಗೊಳಿಸಿದೆ. ಸಾವಿರಾರು ಕೋಟಿ ರು.ಗಳ ವ್ಯಾಪಂ ಹಗರಣದಲ್ಲಿ ನೂರಾರು ಸಾಕ್ಷಿಗಳು ಮರಣ ಹೊಂದುವಂತೆ ಮಾಡಲಾಗಿದೆ ಎಂದರು.ಮೋದಿಜಿ ಜನಿಸಿದ ವರ್ಷದಲ್ಲಿ ದೇಶದ ಬಜೆಟ್ ₹190 ಕೋಟಿ ಆಗಿತ್ತು. ಬಿಜೆಪಿ ಅಧಿಕಾರ ವಹಿಸಿಕೊಂಡಿದ್ದ ವೇಳೆ 2.4 ಟ್ರಿಲಿಯನ್ ಡಾಲರ್ ಬಜೆಟ್ ಆಗಿದೆ. ಇದೀಗ 5ನೇ ಆರ್ಥಿಕ ಶಕ್ತಿ ಎಂದು ಹೇಳುತ್ತಾರೆ. ದೇಶದ ಜನಸಂಖ್ಯೆಗೆ ಹೋಲಿಸಿದರೆ ಇದೇನು ಅಲ್ಲ. ಭಾರತದ ಜಿಡಿಪಿ 125ನೇ ಸ್ಥಾನದಲ್ಲಿದೆ ಎಂಬುದನ್ನೂ ಬಿಜೆಪಿಯವರು ಹೇಳಬೇಕು ಎಂದು ಲಾಡ್ ಹೇಳಿದರು.
ಗುಜರಾತ್ ಶಾಸಕ ಜಿಘ್ನೇಶ ಮೇವಾನಿ ಮಾತನಾಡಿ, ಕೆಲ ವರ್ಷಗಳ ಹಿಂದೆ ಬಿಜೆಪಿಯವರು ದಿಲ್ಲಿಯಲ್ಲಿ ಸಂವಿಧಾನದ ಪ್ರತಿ ಸುಟ್ಟಿದ್ದರು. ಆ ವೇಳೆ ಮೋದಿ ತುಟಿ ಬಿಚ್ಚಲಿಲ್ಲ ಏಕೆ. ಸಂಸದ ಅನಂತಕುಮಾರ ಹೆಗಡೆ ಸಂವಿಧಾನ ಬದಲಾವಣೆ ಕುರಿತು ಹೇಳಿಕೆ ನೀಡಿದಾಗಲೂ ಮೌನವಾಗಿಯೇ ಇದ್ದರು. ಇದನ್ನೆಲ್ಲ ಗಮನಿಸಿದರೆ ಬಿಜೆಪಿ ದೃಷ್ಟಿಯಲ್ಲಿ ಪರಿಶಿಷ್ಟ ಸಮುದಾಯ ಬಹಳಷ್ಟು ತುಚ್ಛವಾಗಿದೆ ಎಂಬುದು ಸಾಬೀತಾಗುತ್ತದೆ. ಹೀಗಾಗಿ ಮೋದಿ ಸರ್ಕಾರವನ್ನು ಕಿತ್ತೆಸೆಯುವ ಸಂಕಲ್ಪವನ್ನು ನಾವೆಲ್ಲರೂ ಮಾಡಬೇಕಿದೆ ಎಂದರು.ಶಾಸಕರಾದ ಪ್ರಸಾದ ಅಬ್ಬಯ್ಯ, ಇ. ತುಕಾರಾಮ, ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ, ಶಾಸಕ ಎನ್.ಎಚ್. ಕೋನರಡ್ಡಿ, ಮಾಜಿ ಸಂಸದ ಐ.ಜಿ. ಸನದಿ ಮಾತನಾಡಿದರು. ಅಂಜುಮನ್ ಸಂಸ್ಥೆ ಅಧ್ಯಕ್ಷ ಎ.ಎಂ. ಹಿಡಸಗೇರಿ, ಮೋಹನ ಲಿಂಬಿಕಾಯಿ, ಅನಿಲಕುಮಾರ ಪಾಟೀಲ, ದೀಪಕ ಚಿಂಚೋರೆ, ಇಸ್ಮಾಯಿಲ್ ತಮಟಗಾರ, ಅಲ್ತಾಫ ಹಳ್ಳೂರ, ಕುಸುಮಾವತಿ ಶಿವಳ್ಳಿ, ಮೋಹನ ಹಿರೇಮನಿ, ಮಹೇಂದ್ರ ಸಿಂಘಿ, ಸದಾನಂದ ಡಂಗನವರ, ಬಸವರಾಜ ಗುರಿಕಾರ ಸೇರಿದಂತೆ ಹಲವರಿದ್ದರು.