ಸುರಪುರ ಅಸೆಂಬ್ಲಿ ಚುನಾವಣೆ : ರಾಜೂಗೌಡಗೆ ಬಿಜೆಪಿ ಟಿಕೆಟ್‌

| Published : Mar 27 2024, 01:05 AM IST / Updated: Mar 27 2024, 12:58 PM IST

bjp
ಸುರಪುರ ಅಸೆಂಬ್ಲಿ ಚುನಾವಣೆ : ರಾಜೂಗೌಡಗೆ ಬಿಜೆಪಿ ಟಿಕೆಟ್‌
Share this Article
  • FB
  • TW
  • Linkdin
  • Email

ಸಾರಾಂಶ

ಸುರಪುರ  ಶಾಸಕರಾಗಿದ್ದ, ಕಾಂಗ್ರೆಸ್‌ನ ಹಿರಿಯ ನಾಯಕ ರಾಜಾ ವೆಂಕಟಪ್ಪ ನಾಯಕ್‌ ನಿಧನದಿಂದಾಗಿ ತೆರವಾಗಿರುವ ವಿಧಾನಸಭಾ ಕ್ಷೇತ್ರಕ್ಕೆ ಮೇ7ರಂದು ಉಪ ಚುನಾವಣೆ ನಡೆಯಲಿದ್ದು, ಮಂಗಳವಾರ ಬಿಜೆಪಿ ಹೈಕಮಾಂಡ್‌ ಮಾಜಿ ಸಚಿವ ನರಸಿಂಹ ನಾಯಕ್‌ (ರಾಜೂಗೌಡ)ರನ್ನು ಪಕ್ಷದ ಅಭ್ಯರ್ಥಿ ಎಂದು ಅಧಿಕೃತವಾಗಿ ಘೋಷಿಸಿದೆ.

ಕನ್ನಡಪ್ರಭ ವಾರ್ತೆ ಯಾದಗಿರಿ

ಸುರಪುರ (ಶೋರಾಪುರ) ಶಾಸಕರಾಗಿದ್ದ, ಕಾಂಗ್ರೆಸ್‌ನ ಹಿರಿಯ ನಾಯಕ ರಾಜಾ ವೆಂಕಟಪ್ಪ ನಾಯಕ್‌ ಅವರ ಅಕಾಲಿಕ ನಿಧನದಿಂದಾಗಿ ತೆರವಾಗಿರುವ ವಿಧಾನಸಭಾ ಕ್ಷೇತ್ರಕ್ಕೆ ಮೇ7ರಂದು ಉಪ ಚುನಾವಣೆ ನಡೆಯಲಿದ್ದು, ಮಂಗಳವಾರ ಬಿಜೆಪಿ ಹೈಕಮಾಂಡ್‌ ಮಾಜಿ ಸಚಿವ ನರಸಿಂಹ ನಾಯಕ್‌ (ರಾಜೂಗೌಡ)ರನ್ನು ಪಕ್ಷದ ಅಭ್ಯರ್ಥಿ ಎಂದು ಅಧಿಕೃತವಾಗಿ ಘೋಷಿಸಿದೆ. ಲೋಕಸಭಾ ಕ್ಷೇತ್ರದ ಜೊತೆಗೇ ವಿಧಾನಸಭೆಗೂ ಉಪ ಚುನಾವಣೆ ನಡೆಯಲಿದೆ.

ಶಾಸಕರಾಗಿದ್ದ ದಿ.ರಾಜಾ ವೆಂಕಟಪ್ಪ ನಾಯಕ್‌ (ಆರ್‌ವಿಎನ್‌) ಅವರ ಪುತ್ರ ರಾಜಾ ವೇಣುಗೋಪಾಲ ನಾಯಕ್‌ (ಆರ್‌ವಿಎನ್‌) ಅವರನ್ನು ಕಾಂಗ್ರೆಸ್‌, ಪಕ್ಷದ ಅಭ್ಯರ್ಥಿಯನ್ನಾಗಿ ಈಗಾಗಲೇ ಘೋಷಿಸಿದೆ.

ಬಿಜೆಪಿ ಅಭ್ಯರ್ಥಿಯಾಗಿರುವ ರಾಜೂಗೌಡರು ಮೂರು ಬಾರಿ (2004, 2009 ಹಾಗೂ 2018) ಶಾಸಕರಾಗಿದ್ದವರು. 2023ರ ವಿಧಾನಸಭೆ ಚುನಾವಣೆಯಲ್ಲಿ ರಾಜಾ ವೆಂಕಟಪ್ಪ ನಾಯಕ್‌ ಅವರು ರಾಜೂಗೌಡರನ್ನು 25 ಸಾವಿರ ಮತಗಳ ಅಂತರದಿಂದ ಸೋಲುಣಿಸಿದ್ದರು.

ಆಗ ಗುರು, ಈಗ ಗುರುವಿನ ಪುತ್ರ ಎದುರಾಳಿ!

ಮಾಜಿ ಸಚಿವ ರಾಜೂಗೌಡರು ಕಾಂಗ್ರೆಸ್‌ ಮೂಲದವರು, ಅದರಲ್ಲೂ ಶಾಸಕರಾಗಿದ್ದ ದಿ. ರಾಜಾ ವೆಂಕಟಪ್ಪ ನಾಯಕ್‌ರ ಗರಡಿಯಲ್ಲೇ ರಾಜಕೀಯ ಪಟ್ಟುಗಳನ್ನು ಕಲಿತವರು. 

46 ವರ್ಷಗಳ ವಯಸ್ಸಿನ ರಾಜೂಗೌಡರು ತಮ್ಮ 21ನೇ ವಯಸ್ಸಿಗೆ ಕೊಡೇಕಲ್‌ ಜಿಪಂ ಕ್ಷೇತ್ರದಿಂದ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಪ್ರವೇಶಿಸಿದವರು. ಆಗ ಇವರಿಗೆ ಗುರುವಾಗಿದ್ದವರು ರಾಜಾ ವೆಂಕಟಪ್ಪ ನಾಯಕ್‌.

ಬದಲಾದ ರಾಜಕೀಯ ಸನ್ನಿವೇಶಗಳಿಂದಾಗಿ, 25ನೇ ವಯಸ್ಸಿನಲ್ಲಿ 2004ರಲ್ಲಿ ಸುರಪುರ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರವಾಗಿ ಸ್ಪರ್ಧಿಸಿ, (ಕನ್ನಡನಾಡು ಪಕ್ಷದಿಂದ) ಆಯ್ಕೆಯಾದ ಏಕೈಕ ಶಾಸಕರೆಂಬ ಹೆಗ್ಗಳಿಕೆ ಪಡೆದವರು. 

ಅವರ ರಾಜಕೀಯ ಗುರು, ರಾಜಾ ವೆಂಕಟಪ್ಪ ನಾಯಕ್‌ ಆಗ ಇವರ ಎದುರಾಳಿಯಾಗಿದ್ದರು. ಅಂದಿನಿಂದ ಇಂದಿನವರೆಗೂ ನಾಯಕ್‌ರ ನಡುವಿನ ಈ ರಾಜಕೀಯ ಜಿದ್ದಾಜಿದ್ದಿ ಮುಂದುವರೆದಿದೆ.

ಈಗ, ಸುರಪುರ ಮತಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ರಾಜಾ ವೆಂಕಟಪ್ಪ ನಾಯಕ್‌ರ ಪುತ್ರ 42 ವರ್ಷ ವಯಸ್ಸಿನ ರಾಜಾ ವೇಣುಗೋಪಾಲ ನಾಯಕ್‌ ಹಾಗೂ 47 ವರ್ಷ ವಯಸ್ಸಿನ ರಾಜೂಗೌಡರ ಮಧ್ಯೆ ಚುನಾವಣಾ ಕದನ ಕುತೂಹಲ ಕೆರಳಿಸಿದೆ. 

ಈ ಹಿಂದೆ, ಹುಣಸಗಿ ಜಿಪಂ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ರಾಜಾ ವೇಣುಗೋಪಾಲ ನಾಯಕರಿಗೆ ಈ ವಿಧಾನಸಭೆ ಚುನಾವಣೆ ಸ್ಪರ್ಧೆ ಮೊದಲು ಹಾಗೂ ಅನಿವಾರ್ಯತೆಯ ಸೃಷ್ಟಿ. 

ಹೀಗಾಗಿ, ತಂದೆ (ದಿ. ರಾಜಾ ವೆಂಕಟಪ್ಪ ನಾಯಕ್‌) ದೊಡ್ಡಪ್ಪ (ಮಾಜಿ ಸಂಸದ ದಿ. ರಾಜಾ ರಂಗಪ್ಪ ನಾಯಕ್‌) ಹಾಗೂ ತಾತ (ಮಾಜಿ ಶಾಸಕ ದಿ. ರಾಜಾ ರಾಮಪ್ಪ ನಾಯಕ್) ಅವರುಗಳ ಸುದೀರ್ಘ ರಾಜಕೀಯ ಪಟ್ಟುಗಳು ಸಹಕಾರಿ ಅನ್ನೋ ಮಾತುಗಳಿವೆ. 

ಜೊತೆಗೆ, ಕೇವಲ 9 ತಿಂಗಳ ಅಂತರದಲ್ಲಿ ಶಾಸಕರ ಅಕಾಲಿಕ ಸಾವಿನಿಂದಾಗಿ ಕ್ಷೇತ್ರದಲ್ಲಿ ಅನುಕಂಪದ ಅಲೆ, ಜಾತಿ ಲೆಕ್ಕಾಚಾರ ಜೊತೆಗೆ ರಾಜ್ಯ ಸರ್ಕಾರದ ಗ್ಯಾರಂಟಿಗಳು ತಮ್ಮ ಕೈ ಹಿಡಿಯಬಹುದು ಎಂಬುದು ಕಾಂಗ್ರೆಸ್‌ ಲೆಕ್ಕಾಚಾರ.

ಆದರೆ, ಪ್ರಧಾನಿ ಮೋದಿ ಅಲೆ, ಬಿಜೆಪಿ ಸರ್ಕಾರವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳು ತಮಗೆ ಫಲಪ್ರದವಾಗಲಿದೆ ಅನ್ನೋದು ಬಿಜೆಪಿ ಲೆಕ್ಕಾಚಾರ.