ಅಂಬಾರಗೊಪ್ಪ ಬಳಿ ಟೋಲ್‌ಗೇಟ್ ವಿರೋಧಿಸದ ಬಿಜೆಪಿ: ಕಾಂಗ್ರೆಸ್‌

| Published : Mar 05 2024, 01:30 AM IST

ಅಂಬಾರಗೊಪ್ಪ ಬಳಿ ಟೋಲ್‌ಗೇಟ್ ವಿರೋಧಿಸದ ಬಿಜೆಪಿ: ಕಾಂಗ್ರೆಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಶಿಕಾರಿಪುರ ತಾಲೂಕಿನ ಅಂಬಾರಗೊಪ್ಪ ಕ್ರಾಸ್ ಬಳಿ ನೂತನ ಟೋಲ್ ಗೇಟ್ ಬೊಮ್ಮಾಯಿ ಸಿಎಂ ಅವಧಿಯಲ್ಲಿ ಅನುಮೋದನೆ ದೊರೆತು, ಇದೀಗ ಪೂರ್ಣಗೊಂಡಿದೆ. ಆದರೆ, ರಾಜ್ಯದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಾಗಿ ಹಣ ಕ್ರೋಢೀಕರಿಸಲು ಆರಂಭಿಸಿದೆ ಎಂದು ಸುಳ್ಳು ಹೇಳಿ, ಜನರಲ್ಲಿ ಸರ್ಕಾರದ ವಿರುದ್ಧ ಬಿಜೆಪಿ ಮುಖಂಡರು ವ್ಯವಸ್ಥಿತ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಭಂಡಾರಿ ಮಾಲತೇಶ್ ಶಿಕಾರಿಪುರದಲ್ಲಿ ಆರೋಪಿಸಿದ್ದಾರೆ.

ಶಿಕಾರಿಪುರ: ತಾಲೂಕಿನ ಅಂಬಾರಗೊಪ್ಪ ಕ್ರಾಸ್ ಬಳಿ ನೂತನ ಟೋಲ್ ಗೇಟ್ ಬೊಮ್ಮಾಯಿ ಸಿಎಂ ಅವಧಿಯಲ್ಲಿ ಅನುಮೋದನೆ ದೊರೆತು, ಇದೀಗ ಪೂರ್ಣಗೊಂಡಿದೆ. ಆದರೆ, ರಾಜ್ಯದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಾಗಿ ಹಣ ಕ್ರೋಢೀಕರಿಸಲು ಆರಂಭಿಸಿದೆ ಎಂದು ಸುಳ್ಳು ಹೇಳಿ, ಜನರಲ್ಲಿ ಸರ್ಕಾರದ ವಿರುದ್ಧ ಬಿಜೆಪಿ ಮುಖಂಡರು ವ್ಯವಸ್ಥಿತ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಭಂಡಾರಿ ಮಾಲತೇಶ್ ಆರೋಪಿಸಿದರು.

ಸೋಮವಾರ ಪಟ್ಟಣದ ಸುದ್ದಿಮನೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ದಾಖಲೆ ಬಿಡುಗಡೆಗೊಳಿಸಿದ ಅವರು, ನಿತ್ಯ ಅತಿ ಹೆಚ್ಚಿನ ರೈತರು, ಕೂಲಿ ಕಾರ್ಮಿಕರು, ಜನಸಾಮಾನ್ಯರು ಸಂಚರಿಸುವ ಈ ರಸ್ತೆಯಲ್ಲಿ ಟೋಲ್ ಸಂಗ್ರಹಿಸಲು ಬಸವರಾಜ ಬೊಮ್ಮಾಯಿ ಸಿಎಂ ಅವಧಿಯಲ್ಲಿ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್, ಸಂಸದ ರಾಘವೇಂದ್ರ ಹಾಗೂ ಕ್ಷೇತ್ರದ ಶಾಸಕರಾಗಿದ್ದ ಯಡಿಯೂರಪ್ಪ ಅವರು ಅಧಿಸೂಚನೆ ಸಂಖ್ಯೆ KRDCL/IFB/2022-23/09 ಜುಲೈ 6, 2022ರಂದು ಟೆಂಡರ್ ಆಹ್ವಾನಿಸಿದ್ದರು. ವಿನಯ್ ಲಾಡ್ ಎಂಟರ್ ಪ್ರೈಸಸ್‌ಗೆ ವಹಿಸಿಕೊಡಲಾಗಿದೆ ಎಂದು ತಿಳಿಸಿದರು.

ಸಾರ್ವಜನಿಕ ವೇದಿಕೆಯಲ್ಲಿ ಜನಪರ ಎಂದು ಮೊಸಳೆ ಕಣ್ಣೀರು ಸುರಿಸುವ ಅಪ್ಪ- ಮಕ್ಕಳು ಟೋಲ್ ಗೇಟ್ ನಿರ್ಮಾಣದ ಟೆಂಡರ್ ಅನುಮತಿ ಸಂದರ್ಭ ವಿರೋಧಿಸಿಲ್ಲ. ಇದೀಗ ಕಾಂಗ್ರೆಸ್ ಸರ್ಕಾರ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಇಂತಹ ನೀಚ ರಾಜಕಾರಣಕ್ಕೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.

ಕೆಪಿಸಿಸಿ ಸದಸ್ಯ ಗೋಣಿ ಮಾಲತೇಶ ಮಾತನಾಡಿ, ಸಿದ್ದರಾಮಯ್ಯ ಸರ್ಕಾರ ಗ್ಯಾರಂಟಿ ಯೋಜನೆಗಾಗಿ ₹57 ಸಾವಿರ ಕೋಟಿ ಬಜೆಟ್‌ನಲ್ಲಿ ಮೀಸಲಿಟ್ಟಿದ್ದಾರೆ. ಆ ಮೂಲಕ ಲೋಕಸಭಾ ಚುನಾವಣೆ ನಂತರದಲ್ಲಿ ಯೋಜನೆ ರದ್ದುಗೊಳಿಸಲಾಗುವುದು ಎಂದು ಅಪಪ್ರಚಾರ ಮಾಡಿದ್ದವರಿಗೆ ಸೂಕ್ತ ಉತ್ತರ ನೀಡಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ಟೋಲ್ ಸಂಗ್ರಹಕ್ಕೆ ನೀಡಲಾದ ಆದೇಶದ ಪ್ರತಿಯನ್ನು ಬಿಡುಗಡೆಗೊಳಿಸಲಾಯಿತು. ಮುಖಂಡ ಮಹೇಂದ್ರ ಜೈನ್, ಚರಣ ಬನ್ನೂರು, ಕಿರಣ್ ಆಚಾರ್, ಪಚ್ಚಿ ಸಂದೀಪ, ಕೌಜಲಗಿ, ಶಿವು, ರವಿ ಬಗನಕಟ್ಟೆ,ಶಿವರಾಜ್ ಮತ್ತಿತರರು ಉಪಸ್ಥಿತರಿದ್ದರು.