ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಡಿವೈಎಫ್ಐ ಸಂಘಟನೆ ತನ್ನ ಸಮಾವೇಶ ಪ್ರಚಾರದ ಫ್ಲೆಕ್ಸ್‌ನಲ್ಲಿ ಕೋಟಿ ಚೆನ್ನಯ, ನಾರಾಯಣ ಗುರುಗಳ ಚಿತ್ರ ಹಾಕಿರುವುದಕ್ಕೆ ಮಂಗಳೂರು ಮಂಡಲ ಬಿಜೆಪಿ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಡಿವೈಎಫ್ಐ ಫ್ಲೆಕ್ಸ್‌ನಲ್ಲಿ ಹಾಕಿರುವ ಕೋಟಿ ಚೆನ್ನಯ, ನಾರಾಯಣಗುರುಗಳ ಚಿತ್ರವನ್ನು ತೆರವುಗೊಳಿಸದೇ ಇದ್ದಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಮಂಗಳೂರು ಮಂಡಲದ ಬಿಜೆಪಿ ಮಾಜಿ ಅಧ್ಯಕ್ಷ ಚಂದ್ರಹಾಸ್ ಪಂಡಿತ್‌ಹೌಸ್ ಎಚ್ಚರಿಕೆ ನೀಡಿದ್ದಾರೆ. ಮಂಗಳೂರು ನಗರ ಸೇರಿದಂತೆ ಉಳ್ಳಾಲ ಭಾಗದ ಹಲವಡೆ ಡಿವೈಎಫ್‌ಐ ತನ್ನ ಸಮಾವೇಶ ಸಲುವಾಗಿ ಫ್ಲೈಕ್ಸ್ ಅಳವಡಿಸಿತ್ತು. ಅದರಲ್ಲಿ ಹಲವು ಕ್ರಾಂತಿಕಾರಿಗಳು, ವಿಚಾರವಾದಿಗಳು, ಚಿಂತಕರ ಫೋಟೋ ಬಳಸಲಾಗಿತ್ತು.
ಹರೇಕಳ ಗ್ರಾಮದಲ್ಲಿ ಕೋಟಿ ಚೆನ್ನಯ, ನಾರಾಯಣಗುರುಗಳ ಚಿತ್ರ ಬಳಕೆ ಮಾಡಿದ್ದು, ಇದು ಬಿಜೆಪಿ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಕೊಣಾಜೆ ಠಾಣಾಧಿಕಾರಿಗೆ ಚಂದ್ರಹಾಸ್ ಪಂಡಿತ್‌ಹೌಸ್ ಮೌಖಿಕ ದೂರು ನೀಡಿದ್ದಾರೆ.ರಾಜಕೀಯಕ್ಕಾಗಿ ಕಾರಣಿಕ ಪುರುಷರ ಚಿತ್ರ ಬಳಸಿರುವುದರಿಂದ ಕೋಮು ಸೌಹಾರ್ದಕ್ಕೆ ಧಕ್ಕೆಯಾಗುತ್ತದೆ. ಇದರಿಂದ ಕಾನೂನು ಸುವ್ಯವಸ್ಥೆಗೆ ತೊಂದರೆಯಾಗುವ ಪರಿಸ್ಥಿತಿ ಇದೆ. ಆದ್ದರಿಂದ ಫ್ಲೈಕ್ಸನ್ನು ಕೂಡಲೇ ತೆರವುಗೊಳಿಸಬೇಕು. ಇಂತಹ ಫ್ಲೆಕ್ಸ್‌ಗಳಿಂದ ನಮ್ಮ ಧಾರ್ಮಿಕ ಭಾವನೆಗಳಿಗೆ ನೋವುಂಟಾಗಿದೆ. ತೆರವುಗೊಳಿಸದೇ ಇದ್ದಲ್ಲಿ ಉಗ್ರಪ್ರತಿಭಟನೆ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಹರೇಕಳ ಗ್ರಾ.ಪಂ ಪಿಡಿಒಗೂ ಸ್ಥಳೀಯ ಬಿಲ್ಲವ ನಾಯಕರು ಲಿಖಿತ ದೂರು ನೀಡಿದ್ದಾರೆ.