ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) 27 ವಾರ್ಡ್‌ಗಳಿಗೆ ಸೀಮಿತವಾಗಿ ರಾಜ್ಯ ಚುನಾವಣಾ ಆಯೋಗವು ಮತದಾರರಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಗೆ(ಎಸ್ಐಆರ್) ಮುಂದಾಗಿರುವುದರ ವಿರುದ್ಧ ರಾಜ್ಯ ಬಿಜೆಪಿ ನಾಯಕರ ನಿಯೋಗವು ಗುರುವಾರ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದೆ.
ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) 27 ವಾರ್ಡ್‌ಗಳಿಗೆ ಸೀಮಿತವಾಗಿ ರಾಜ್ಯ ಚುನಾವಣಾ ಆಯೋಗವು ಮತದಾರರಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಗೆ(ಎಸ್ಐಆರ್) ಮುಂದಾಗಿರುವುದರ ವಿರುದ್ಧ ರಾಜ್ಯ ಬಿಜೆಪಿ ನಾಯಕರ ನಿಯೋಗವು ಗುರುವಾರ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದೆ. ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ ಬಿಜೆಪಿ ನಾಯಕರ ನಿಯೋಗವು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್ ಅವರನ್ನು ಭೇಟಿಯಾಗಿ ಈ ದೂರು ಸಲ್ಲಿಸಿದೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ರಾಜ್ಯ ಚುನಾವಣಾ ಆಯೋಗವು ರಾಜ್ಯ ಕಾಂಗ್ರೆಸ್ ಸರ್ಕಾರದ ಕೈಗೊಂಬೆಯಾಗಿದೆ. ಕಾನೂನು ಬಾಹಿರವಾಗಿ ಬೆಂಗಳೂರಿನ 27 ವಾರ್ಡ್‍ಗಳಲ್ಲಿ ಎಸ್‍ಐಆರ್ ನಡೆಸುತ್ತಿದೆ. ಈಗಾಗಲೇ ಕೇಂದ್ರ ಚುನಾವಣಾ ಆಯೋಗವು ರಾಜ್ಯದಲ್ಲಿ ಎಸ್‍ಐಆರ್ ನಡೆಸುತ್ತಿದೆ. ಆದರೆ ಇದಕ್ಕೆ ಸಮಾನಾಂತರವಾಗಿ ರಾಜ್ಯ ಚುನಾವಣಾ ಆಯೋಗವು ಎಸ್‍ಐಆರ್ ನಡೆಸುತ್ತಿದೆ. ಇದು ತಪ್ಪು. ಹೀಗಾಗಿ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದ್ದೇವೆ ಎಂದು ಹೇಳಿದರು.
ತಮಗೆ ಬೇಕಾದ ಹೆಸರು ಉಳಿಸಲು ಎಸ್‌ಐಆರ್:
ಅನಧಿಕೃತವಾಗಿ ಈ ರೀತಿ ಎಸ್‍ಐಆರ್ ನಡೆಸುವುದು ಸಂಘರ್ಷಕ್ಕೆ ಎಡೆ ಮಾಡಿಕೊಡುತ್ತದೆ. ಒಬ್ಬರ ಹೆಸರು ಬೇರೆ ಬೇರೆ ಕ್ಷೇತ್ರಗಳಲ್ಲಿ ಇದ್ದರೆ ಅದನ್ನು ಎಸ್‍ಐಆರ್‌ನಲ್ಲಿ ತೆಗೆಯಲಾಗುತ್ತದೆ. ಇಲ್ಲಿ ಪಕ್ಷಗಳ ಪ್ರಶ್ನೆ ಬರುವುದಿಲ್ಲ, ವ್ಯಕ್ತಿ ಮುಖ್ಯವಾಗುವುದಿಲ್ಲ. ಒಬ್ಬರ ಹೆಸರು ಒಂದೇ ಕಡೆ ಇರಬೇಕು ಎಂಬುದೇ ಇದರ ಪ್ರಮುಖ ಉದ್ದೇಶ. ಹೀಗಾಗಿ ಕೇಂದ್ರ ಚುನಾವಣಾ ಆಯೋಗವು ಕಾನೂನು ಪ್ರಕಾರ ಎಸ್‍ಐಆರ್ ನಡೆಸುತ್ತಿದೆ. ಆದರೆ ತಮಗೆ ಬೇಕಾದವರ ಹೆಸರು ಉಳಿಸಲು ಬೆಂಗಳೂರಿನ 27 ವಾರ್ಡ್‌ಗಳಲ್ಲಿ ರಾಜ್ಯ ಚುನಾವಣಾ ಆಯೋಗವು ಎಸ್‍ಐಆರ್ ನಡೆಸುತ್ತಿದೆ ಎಂದು ದೂರಿದರು.
ಸಮನಾಂತರ ಎಸ್‌ಐಆರ್‌ನಿಂದ ಜನರಲ್ಲಿ ಆತಂಕ:
ಕೇಂದ್ರ ಚುನಾವಣಾ ಆಯೋಗದ ಅನುಮತಿ ಇಲ್ಲದೆ ಮತ್ತೊಂದು ಎಸ್‍ಐಆರ್ ಅನ್ನು ರಾಜ್ಯ ಚುನಾವಣಾ ಆಯೋಗ ಮಾಡುವಂತಿಲ್ಲ. ಆದರೆ ಇಲ್ಲಿ ಕಾಂಗ್ರೆಸ್ ಸರ್ಕಾರ ಮಾಡಿಸುತ್ತಿದೆ. ತಕ್ಷಣ ಇದನ್ನು ಕೈಬಿಡಬೇಕು. ರಾಜ್ಯ ಚುನಾವಣಾ ಆಯೋಗವು ಕೇಂದ್ರ ಚುನಾವಣಾ ಆಯೋಗದ ಅಧೀನದಲ್ಲಿ ಕೆಲಸ ಮಾಡಬೇಕು. ಯಾವುದೇ ರಾಜ್ಯ ಸರ್ಕಾರದ ಅಧೀನದಲ್ಲಿ ಅಲ್ಲ. ಇಂತಹ ಸಮಾನಾಂತರ ಎಸ್‌ಐಆರ್‌ನಿಂದ ಜನರಲ್ಲಿ ಅನಗತ್ಯ ಆತಂಕ ಉಂಟಾಗುತ್ತಿದೆ. ಇಂತಹ ಎಸ್‍ಐಆರ್ ವಿರುದ್ಧ ಕಾನೂನು ಕ್ರಮವಾಗಬೇಕು ಎಂದು ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು.

