ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ ನೇತೃತ್ವದ ಬಿಜೆಪಿ ನಿಯೋಗ ಶುಕ್ರವಾರ ಬೆಳಗಾವಿ ಜಿಲ್ಲೆಯ ಅತಿವೃಷ್ಟಿಪೀಡಿತ ಪ್ರದೇಶಗಳ ಸಮೀಕ್ಷೆ ಕೈಗೊಂಡಿತು. ಜಿಲ್ಲೆಯ ಬೈಲಹೊಂಗಲ, ಕಾಗವಾಡ ಮತ್ತು ಚಿಕ್ಕೋಡಿ ತಾಲೂಕುಗಳಿಗೆ ಭೇಟಿ ನೀಡಿ, ಪರಿಸ್ಥಿತಿಯ ಅವಲೋಕನ ನಡೆಸಿತು. ಮಳೆ, ನೆರೆಯಿಂದ ಹಾನಿಗೀಡಾದ ಬೆಳೆಗಳ ಸಮೀಕ್ಷೆ ನಡೆಸಿತು. ಜತೆಗೆ, ರೈತರೊಂದಿಗೆ ಸಂವಾದ ನಡೆಸಿ, ಅವರಿಂದ ಮಾಹಿತಿ ಪಡೆದುಕೊಂಡಿತು.ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ. ಎನ್.ರವಿಕುಮಾರ, ಸಂಸದ ರಮೇಶ ಜಿಗಜಿಣಗಿ ನೇತೃತ್ವದ ನಿಯೋಗ ಬೈಲಹೊಂಗಲ ತಾಲೂಕಿನ ನೇಸರಗಿ, ನಾಗನೂರ, ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಮತ್ತು ತಾರಿಹಾಳ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಹಾಗೂ ಚಿಕ್ಕೋಡಿ, ಕಾಗವಾಡ ಮತ್ತು ಅಥಣಿ ತಾಲೂಕಿನಲ್ಲಿ ಬೆಳೆಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿತು.
ಬೈಲಹೊಂಗಲ ತಾಲೂಕಿನ ನೇಸರಗಿಯಲ್ಲಿ ಈರಣ್ಣಗೌಡ ಮೀಸಿಪಾಟೀಲ್ ಎಂಬುವರ ಜಮೀನಿಗೆ ಆಗಮಿಸಿದ ನಿಯೋಗ, ಗದ್ದೆಯಲ್ಲಿ ಹಾಳಾದ ಗಜ್ಜರಿ ಬೆಳೆ ಹಾನಿ ಕುರಿತು ರೈತರಿಂದ ಮಾಹಿತಿ ಪಡೆಯಿತು. ರಾಜ್ಯ ಬಿಜೆಪಿ ನಾಯಕರಿಗೆ ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ಸಾಥ್ ನೀಡಿದರು. ಆದರೆ, ರೈತರ ಜಮೀನಿಗೆ ಭೇಟಿ ನೀಡಿದರೂ, ಪರಿಸ್ಥಿತಿ ಅವಲೋಕಿಸದೆ ರಮೇಶ್ ಜಾರಕಿಹೊಳಿ ತೆರಳಿದರು.ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಸಂಸದ ರಮೇಶ ಜಿಗಜಿಣಗಿ, ಶಾಸಕರಾದ ಶಶಿಕಲಾ ಜೊಲ್ಲೆ, ಸಿದ್ದು ಸವದಿ, ದುರ್ಯೋಧನ ಐಹೊಳಿ, ಮಾಜಿ ಶಾಸಕರಾದ ಮಹಾಂತೇಶ ದೊಡ್ಡಗೌಡ್ರ, ಸಂಜಯ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ ಸೇರಿದಂತೆ ಮೊದಲಾದವರು ನಿಯೋಗದಲ್ಲಿದ್ದರು.
ಎನ್‌ಡಿಆರ್‌ಎಫ್ ಹಣ ಗ್ಯಾರಂಟಿಗೆ ಬಳಕೆ:ಈ ಮಧ್ಯೆ, ಕಾಗವಾಡ ತಾಲೂಕಿನ ಜುಗೂಳ ಗ್ರಾಮಕ್ಕೆ ಬೆಳೆ ಹಾನಿ ವೀಕ್ಷಣೆಗೆ ಹೋಗುತ್ತಿರುವ ಮಾರ್ಗ ಮಧ್ಯೆ ಚಿಕ್ಕೋಡಿ ಪ್ರವಾಸಿ ಮಂದಿರದಲ್ಲಿ ಆರ್.ಅಶೋಕ್ ಸುದ್ದಿಗೋಷ್ಠಿ ನಡೆಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ. ಪ್ರತಿ ನಾಲ್ಕು ತಿಂಗಳಿಗೊಮ್ಮೆ ಕೇಂದ್ರದಿಂದ ಬರುವ ಎನ್‌ಡಿಆರ್‌ಎಫ್ ಹಣವನ್ನೇ ಸರ್ಕಾರ ಗ್ಯಾರಂಟಿಗೆ ಬಳಸಿಕೊಳ್ಳುತ್ತಿದ್ದು, ಅಭಿವೃದ್ಧಿ ಮರೀಚಿಕೆಯಾಗಿದೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.
ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಗ್ಯಾರಂಟಿಗೆ ಎನ್‌ಡಿಆರ್‌ಎಫ್ ಹಣ ಬಳಸಿಕೊಳ್ಳುತ್ತಿರಲಿಲ್ಲ. ಆದರೆ, ಇವರಿಗೆ ಮರ್ಯಾದೇನೇ ಇಲ್ಲ ಎಂದು ಕಿಡಿಕಾರಿದರು.ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಬೆಲೆ ಏರಿಕೆಯಿಂದ ರಾಜ್ಯದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅತಿವೃಷ್ಟಿ, ಅನಾವೃಷ್ಟಿಯಿಂದ ಬೆಳಗಾವಿ, ವಿಜಯಪುರ, ರಾಯಚೂರು, ಬೀದರ್, ಕಲಬುರಗಿ ಜಿಲ್ಲೆಗಳಲ್ಲಿ ಅಪಾರವಾದ ಬೆಳೆ ಹಾನಿಯಾಗಿದೆ. ಈ ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಸಿಲುಕಿ ರೈತರು ಕಂಗಾಲಾಗಿದ್ದಾರೆ. ಲಕ್ಷಾಂತರ ರು.ಮೌಲ್ಯದ ಬೆಳೆ ಹಾನಿಯಾಗಿದೆ. ಆದರೆ, ಬಹುತೇಕ ಜಿಲ್ಲೆಗಳಲ್ಲಿ ಸರ್ಕಾರ ಮತ್ತು ಮಂತ್ರಿಗಳು ಸಂವೇದನೆ ಕಳೆದುಕೊಂಡಿದ್ದಾರೆ ಎಂದು ದೂಷಿಸಿದರು.
ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸ್ಥಳೀಯ ಚುನಾವಣೆಯ ಪ್ರತಿಷ್ಠೆಯೇ ಮುಖ್ಯವಾಗಿದೆ. ಎರಡು ತಿಂಗಳಿಂದ ಸಚಿವರು ಚುನಾವಣೆಯಲ್ಲಿ ಬ್ಯುಸಿ ಆಗಿದ್ದರು. ಅವರಿಗೆ ಚುನಾವಣೆಗೆ ದೊಡ್ಡದ್ದಾಗಿದೆ. ಸಂಕಷ್ಟದಲ್ಲಿರುವ ಜನರ ಸಮಸ್ಯೆ ಆಲಿಸುವ ಸಂವೇದನೆ ಅವರಿಗಿಲ್ಲ. ಈಗಲಾದರೂ ಜಿಲ್ಲೆಯ ಸಚಿವರು ಸಂವೇದನೆ ತೋರಿಸಬೇಕು. ಜನರ ಕಷ್ಟಗಳಿಗೆ ಸ್ಪಂದಿಸಬೇಕು. ರೈತರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಬೇಕು. ರೈತರ ಸಂಕಷ್ಟಕ್ಕೆ ಸ್ಪಂದಿಸುವುದಕ್ಕಿಂತ ಚುನಾವಣೆಯ ಗೆಲುವಿನ ಬಗ್ಗೆ ಸಂಭ್ರಮಿಸುವುದೇ ನಿಮಗೆ ಮುಖ್ಯವಾಗಿದೆಯೇ ಎಂದು ಕಿಡಿಕಾರಿದರು.