ಕಾಂಗ್ರೆಸ್ ಜಿಲ್ಲಾ ಘಟಕದ ವತಿಯಿಂದ ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು.

ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ವಿರುದ್ಧ ಘೋಷಣೆ

ಕನ್ನಡಪ್ರಭ ವಾರ್ತೆ ಶಿರಸಿ

ನ್ಯಾಶನಲ್ ಹೆರಾಲ್ಡ್ ಪತ್ರಿಕೆಯ ಆಸ್ತಿ ಮತ್ತು ಹಣ ವರ್ಗಾವಣೆಯಾಗಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸ್ವಾಯತ್ತ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ರಾಷ್ಟ್ರೀಯ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ವಿರುದ್ಧ ಆರೋಪ ಮಾಡುತ್ತಿರುವುದನ್ನು ಖಂಡಿಸಿ, ಕಾಂಗ್ರೆಸ್ ಜಿಲ್ಲಾ ಘಟಕದ ವತಿಯಿಂದ ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು.

ನಗರದ ಕಾಂಗ್ರೆಸ್ ಜಿಲ್ಲಾ ಕಾರ್ಯಾಲಯದಿಂದ ಬಿಜೆಪಿ ಕಚೇರಿ ವರೆಗೆ ಪಾದಯಾತ್ರೆ ಮೂಲಕ ಆಗಮಿಸಿದ ನೂರಾರು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿಸಿ, ಕಾರ್ಯಾಲಯ ಒಳಗಡೆ ಪ್ರವೇಶಿಸಲು ಪ್ರಯತ್ನಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸಾಯಿ ಗಾಂವಕರ ಮಾತನಾಡಿ, ಕೇಂದ್ರದ ಬಿಜೆಪಿ ಸರ್ಕಾರ ಮತ್ತು ಬಿಜೆಪಿಯು ಅಮಾಯಕರ ಮೇಲೆ ಮೊಕದ್ದಮೆ ಮತ್ತು ವಿರೋಧ ಪಕ್ಷದ ನಾಯಕರನ್ನು ಗುರಿ ಮಾಡಿ ಪ್ರಕರಣ ದಾಖಲಿಸುತ್ತಿದೆ. ನ್ಯಾಶನಲ್ ಹೆರಾಲ್ಡ್ ಪತ್ರಿಕೆಯ ಯಾವುದೇ ಹಣ ಹಾಗೂ ಆಸ್ತಿಯನ್ನು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ದುರುಪಯೋಗಪಡಿಸಿಕೊಂಡಿಲ್ಲ ಎಂದು ನ್ಯಾಯಾಲಯವು ಕಾಂಗ್ರೆಸ್ ಪರ ತೀರ್ಪು ನೀಡಿದೆ. 1937ರಲ್ಲಿ ಜವಾಹಲಾಲ್ ನೆಹರು ಬ್ರಿಟಿಷರ್ ವಿರುದ್ಧ ದೇಶದ ಸ್ವಾತಂತ್ರ್ಯಕ್ಕಾಗಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಬಿಡುಗಡೆ ಮಾಡಿದ್ದರು. ಆನಂತರ ಅದನ್ನು ಯಂಗ್ ಇಂಡಿಯಾ ಸಂಸ್ಥೆ ನಡೆಸಲು ಪ್ರಾರಂಭಿಸಿತು. ಸೋನಿಯಾ, ರಾಹುಲ್‌ ಗಾಂಧಿ, ಆಸ್ಕರ್‌ ಫರ್ನಾಂಡಿಸ್ ವಿರುದ್ಧ ಸುಬ್ರಮಣಿಯನ್‌ ಸ್ವಾಮಿ ಇಡಿ ಮೂಲಕ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಇದರಲ್ಲಿ ಅಪರಾಧ ನಡೆದಿಲ್ಲ. ಅಲ್ಲದೇ ಹಣ ದುರುಪಯೋಗ ಆಗಿಲ್ಲ ಎಂದು ಹೇಳಿದೆ. ಬಿಜೆಪಿ ನಾಯಕರು ಕೇಂದ್ರ ಸರ್ಕಾರದ ಅಧಿಕಾರ ಬಳಸಿಕೊಂಡು ಕಾಂಗ್ರೆಸ್ ನಾಯಕರ ವ್ಯಕ್ತಿತ್ವದ ತೇಜೋವಧೆ ಮಾಡುತ್ತಿರುವುದು ಸ್ಪಷ್ಟವಾಗಿದೆ ಎಂದರು.

ಕಾಂಗ್ರೆಸ್ ಜಿಲ್ಲಾ ವಕ್ತಾರ ಶಂಭು ಶೆಟ್ಟಿ ಮಾತನಾಡಿ, ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಕೇಂದ್ರ ಸರ್ಕಾರವು ಇಡಿ, ಸಿಬಿಐ, ಚುನಾವಣೆ ಆಯೋಗವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಮಹಿಳಾ ಮುಖಂಡೆ ಜ್ಯೋತಿ ಪಾಟೀಲ ಮಾತನಾಡಿದರು. ಪ್ರತಿಭಟನೆಯಲ್ಲಿ ಹಿಂದುಳಿದ ವರ್ಗದ ಜಿಲ್ಲಾಧ್ಯಕ್ಷ ಬಾಲಚಂದ್ರ ನಾಯ್ಕ, ಜಿಲ್ಲಾ ಉಪಾಧ್ಯಕ್ಷ ವಿ.ಎಲ್. ನಾಯ್ಕ ಬೇಡ್ಕಣಿ, ಶಿರಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ ಗೌಡ, ಹಳಿಯಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ, ಮುಂಡಗೋಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ಯಲ್ಲಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಸ್. ಭಟ್ಟ, ನಗರಸಭೆ ಮಾಜಿ ಸದಸ್ಯರಾದ ಪ್ರದೀಪ ಶೆಟ್ಟಿ, ಖಾದರ್ ಆನವಟ್ಟಿ, ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಜಿಲ್ಲಾಧ್ಯಕ್ಷ ಪ್ರಸನ್ನ ಶೆಟ್ಟಿ, ಯೂಥ್ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಸಂತೋಷ ಶೆಟ್ಟಿ ಗಿಡಮಾವಿನಕಟ್ಟೆ, ಭೈರುಂಬೆ ಗ್ರಾಪಂ ಉಪಾಧ್ಯಕ್ಷ ರಾಘವೇಂದ್ರ ನಾಯ್ಕ, ಪ್ರಮುಖರಾದ ಎಸ್‌.ಕೆ. ಭಾಗ್ವತ್‌, ಗಣೇಶ ದಾವಣಗೆರೆ, ಮಧುಕರ ಬಿಲ್ಲವ, ಲುಕ್ಕು ಫರ್ನಾಂಡಿಸ್, ಶ್ರೀಧರ ಮೊಗೇರ, ಮಲ್ಲೇಶಪ್ಪ ಗೊರವರ, ಬಸವರಾಜ ದೊಡ್ಮನಿ, ರೂಪಾ ನಾಯ್ಕ, ಮಂಜೇಶ್ವರ ನಾಯಕ, ವಿನೋದ ನಾಯ್ಕ, ಶಾರದಾ ರಾಠೋಡ, ಜಾಫಿ ಪೀಟರ್‌ ಇದ್ದರು.