ನಿಷ್ಠೆ ಮತ್ತು ಬದ್ಧತೆಯಿಂದ ನಿರ್ಲಿಪ್ತವಾಗಿ ಸೇವೆಯಲ್ಲಿ ತೊಡಗಿಸಿದವರು ಪಕ್ಷದಲ್ಲಿ ಗುರುತಿಸಲ್ಪಡುತ್ತಾರೆ. ಪಕ್ಷ ನನ್ನ ಪ್ರಾಮಾಣಿಕ ಸೇವೆಯನ್ನು ಗುರುತಿಸಿ ರಾಷ್ಟ್ರೀಯ ಉಪಾಧ್ಯಕ್ಷ ಜವಾಬ್ದಾರಿಯನ್ನು ನೀಡಿರುವುದು ಸಾಮಾನ್ಯ ಕಾರ್ಯಕರ್ತನಿಗೆ ಸಂದ ಗೌರವ. ಪ್ರಾಮಾಣಿಕ ಕಾರ್ಯಕರ್ತರನ್ನು ಗುರುತಿಸುವ ಪಕ್ಷ ಅದು ಭಾರತೀಯ ಜನತಾ ಪಾರ್ಟಿ ಎಂದು ಬಿಜೆಪಿಯ ನೂತನ ರಾಷ್ಟ್ರೀಯ ಉಪಾಧ್ಯಕ್ಷ ಪ್ರೊ. ಎಮ್. ನಾಗರಾಜ್ ಹೇಳಿದರು.

ಉಡುಪಿ: ನಿಷ್ಠೆ ಮತ್ತು ಬದ್ಧತೆಯಿಂದ ನಿರ್ಲಿಪ್ತವಾಗಿ ಸೇವೆಯಲ್ಲಿ ತೊಡಗಿಸಿದವರು ಪಕ್ಷದಲ್ಲಿ ಗುರುತಿಸಲ್ಪಡುತ್ತಾರೆ. ಪಕ್ಷ ನನ್ನ ಪ್ರಾಮಾಣಿಕ ಸೇವೆಯನ್ನು ಗುರುತಿಸಿ ರಾಷ್ಟ್ರೀಯ ಉಪಾಧ್ಯಕ್ಷ ಜವಾಬ್ದಾರಿಯನ್ನು ನೀಡಿರುವುದು ಸಾಮಾನ್ಯ ಕಾರ್ಯಕರ್ತನಿಗೆ ಸಂದ ಗೌರವ. ಪ್ರಾಮಾಣಿಕ ಕಾರ್ಯಕರ್ತರನ್ನು ಗುರುತಿಸುವ ಪಕ್ಷ ಅದು ಭಾರತೀಯ ಜನತಾ ಪಾರ್ಟಿ ಎಂದು ಬಿಜೆಪಿಯ ನೂತನ ರಾಷ್ಟ್ರೀಯ ಉಪಾಧ್ಯಕ್ಷ ಪ್ರೊ. ಎಮ್. ನಾಗರಾಜ್ ಹೇಳಿದರು.

ಅವರು ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಜಿಲ್ಲಾ ಕಾರ್ಯತಂಡದ ಸಭೆಯಲ್ಲಿ ನೀಡಲಾದ ಗೌರವ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.ಬಿಜೆಪಿಯ ಯಶಸ್ವಿ ಆಡಳಿತವನ್ನು ಜೀರ್ಣಸಿಕೊಳ್ಳಲಾಗದ ವಿರೋಧ ಪಕ್ಷಗಳ ಷಡ್ಯಂತ್ರದ ವಿರುದ್ಧ ಪರಿಣಾಮಕಾರಿ ಹೋರಾಟ ರೂಪಿಸಬೇಕಾಗಿದೆ. ಕಾಂಗ್ರೆಸ್‌ನಿಂದ ರಾಷ್ಟ್ರದ ಸ್ವಾಭಿಮಾನದ ಸಂಕೇತ ವಂದೇ ಮಾತರಂಗೆ ಅಗೌರವ, ಹಣ ಲೂಟಿ, ಅಲ್ಪಸಂಖ್ಯಾತ ತುಷ್ಟೀಕರಣದಿಂದಾಗಿ, ರಾಜ್ಯದಲ್ಲಿ ಬಿಜೆಪಿ ಪರ ವಾತಾವರಣವಿದೆ. 2028ರಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕು. ಆದ್ದರಿಂದ ಮೋದಿ ಅವರ ಸುಧೀರ್ಘ 25 ವರ್ಷಗಳ ಸೇವೆಯ ಪ್ರಯುಕ್ತ ದೇಶಾದ್ಯಂತ ನಡೆಯುವ ಸೇವಾ ಸಂಕಲ್ಪ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.

ವೇದಿಕೆಯಲ್ಲಿ ಎಸ್ಐಆರ್ ಮಂಗಳೂರು ವಿಭಾಗ ಸಂಚಾಲಕ ಕೆ.ಉದಯ ಕುಮಾರ್ ಶೆಟ್ಟಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಮಟ್ಟಾರ್ ರತ್ನಾಕರ ಹೆಗ್ಡೆ, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಮಾಜಿ ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್, ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್ ಉಪಸ್ಥಿತರಿದ್ದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಕಾಂತ್ ನಾಯಕ್ ಸ್ವಾಗತಿಸಿ, ದಿನಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ ವಂದಿಸಿದರು.