ಸಾರಾಂಶ
ಬಿಜೆಪಿ ಜಾತಿ, ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತದೆ.
ಮೋದಿಯಿಂದ ದೇಶದ ಸಾಲ ಹೆಚ್ಚಳ । ಸಂಗಣ್ಣ ಕರಡಿ ಕಾಂಗ್ರೆಸ್ ಸೇರುವ ನಿರೀಕ್ಷೆ ಗಟ್ಟಿ । ಸಿಎಂ ಆರ್ಥಿಕ ಸಲಹೆಗಾರ ಹೇಳಿಕೆ
ಕನ್ನಡಪ್ರಭ ವಾರ್ತೆ ಕುಕನೂರುಬಿಜೆಪಿ ಜಾತಿ, ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತದೆ ಎಂದು ಸಿಎಂ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.
ತಾಲೂಕಿನ ಇಟಗಿ ಗ್ರಾಮದಲ್ಲಿ ಕೊಪ್ಪಳ ಲೋಕಸಭಾ ಚುನಾವಣೆ ಪ್ರಚಾರದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವದ ಸ್ಥಾಪನೆಗೆ ಕಾಂಗ್ರೆಸ್ ಶ್ರಮಿಸಿದೆ. ಕಾಂಗ್ರೆಸ್ ನೇತೃತ್ವದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಭಾರತಕ್ಕೆ ಸಂವಿಧಾನ ನೀಡಿದರು. ಅಂದು ಅವರು ನೀಡಿದ ಸಂವಿಧಾನದ ಕೊಡುಗೆಯಿಂದಲೇ ಭಾರತದಲ್ಲಿ ಪ್ರಜಾಪ್ರಭುತ್ವ ಸದೃಢ ಆಗಿದೆ. ಮೋದಿ ಸಹ ಪ್ರಧಾನ ಮಂತ್ರಿ ಆಗಲು ಕಾರಣವಾಗಿದೆ. ಕಾಂಗ್ರೆಸ್ ರಾಷ್ಟ್ರದ ಹಿತಕ್ಕೆ ಶ್ರಮಿಸುತ್ತಾ ಬಂದಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಯಾವೊಂದು ಸೌಲಭ್ಯ ಇರಲಿಲ್ಲ. ಕರೆಂಟ್, ಶಾಲೆ, ರಸ್ತೆ, ಆಹಾರ ಹೀಗೆ ಮೂಲಭೂತ ಸೌಲಭ್ಯ ಇರಲಿಲ್ಲ. ಕಾಂಗ್ರೆಸ್ ಇವುಗಳೆನ್ನೆಲ್ಲಾ ನೀಡಿದೆ. ಆದರೆ ಬಿಜೆಪಿ ಜಾತಿ, ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಾ ಪ್ರಜಾಪ್ರಭುತ್ವ ವ್ಯವಸ್ಥೆ ಹಾಳು ಮಾಡುತ್ತಿದೆ. ಹಿಂದೂ-ಮುಸ್ಲಿಮರ ನಡುವೆ ಜಗಳ ಹಚ್ಚುತ್ತದೆ. ಜಾತಿ ವ್ಯವಸ್ಥೆಯನ್ನು ಹೆಚ್ಚಿಸುತ್ತಿದೆ. ಒಡಕು ತರುವ ಕೆಲಸ ಮಾಡುತ್ತದೆ. ಭ್ರಷ್ಟಾಚಾರಿಗಳ ತಾಣ ಬಿಜೆಪಿ ಆಗಿದೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.1952ರಿಂದ 2014ರ ವರೆಗೆ ಭಾರತದ್ದು ₹52 ಸಾವಿರ ಕೋಟಿ ಸಾಲ ಮಾತ್ರ ಇತ್ತು. ಆದರೆ ನರೇಂದ್ರ ಮೋದಿ ಪ್ರಧಾನಿ ಆದ ನಂತರ ಅದು ದುಪ್ಪಟ್ಟು ಆಗಿದೆ. ಆರ್ಥಿಕ ವ್ಯವಸ್ಥೆಯ ಅರ್ಥ ಅರಿಯದೆ ಮೋದಿ ದೇಶ ಹಾಳು ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಡ್ಯಾಂ, ರೈಲ್ವೆ, ರಸ್ತೆಗಳ ನಿರ್ಮಾಣವಾದವು. ಮೋದಿ ಪ್ರಧಾನಿ ಆದ ಮೇಲೆ ಒಂದು ಡ್ಯಾಂ ಕಟ್ಟಿದ್ದಾರಾ? ಒಂದು ಎಕರೆನಾದ್ರೂ ನೀರಾವರಿ ಮಾಡಿದ್ದಾರಾ ಹೇಳಲಿ ಎಂದರು.
ಈ ಸಲ ಬಜೆಟ್‌ನಲ್ಲಿ ರಾಜ್ಯದ 74 ಆದರ್ಶ ಶಾಲೆಗಳನ್ನು ಪಿಯುಸಿ ಕಾಮರ್ಸ್, ಸೈನ್ಸ್ ಕಾಲೇಜುಗಳನ್ನಾಗಿ ಮೇಲ್ದರ್ಜೆಗೇರಿಸಿದ್ದೇವೆ. ಯಲಬುರ್ಗಾ ಕ್ಷೇತ್ರಕ್ಕೆ 38 ಕೆರೆ ತುಂಬಿಸಲು ₹970 ಕೋಟಿ ಅನುದಾನ ಬಂದಿದೆ. ಈ ಹಿಂದೆ 26 ಕೆರೆ ತುಂಬಿಸಿದ್ದೇನೆ. 14 ಬಸ್ ಸ್ಟ್ಯಾಂಡ್, ಪಿಯು ಕಾಲೇಜ್, ಹೈಸ್ಕೂಲ್ ಹೀಗೆ ಹತ್ತು ತಿಂಗಳಿನಲ್ಲಿ ಹಲವಾರು ಅಭಿವೃದ್ಧಿ ಕಾರ್ಯ ಮಾಡಿದ್ದೇನೆ ಎಂದರು.ಸಂಗಣ್ಣ ಕೈನತ್ತ:
ಸಂಸದ ಸಂಗಣ್ಣ ಕರಡಿ ಅವರಿಗೆ ಬಿಜೆಪಿಯವರು ಮೋಸ ಮಾಡಿದ್ದಾರೆ. ಕರಡಿ ಕೈನತ್ತ ಬರುವ ವಿಶ್ವಾಸವಿದೆ. ಬಿಜೆಪಿಯಿಂದ ಸಂಗಣ್ಣ ಅವರಿಗೆ ಅನ್ಯಾಯವಾಗಿದೆ ಎಂದರು.ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಗೌಡ ಚಂಡೂರು, ಪ್ರಮುಖರಾದ ಯಂಕಣ್ಣ ಯರಾಶಿ, ಶರಣಪ್ಪ ಗಾಂಜಿ, ಮಹೇಶ ಗಾವರಾಳ, ಮಹೇಶ ದೊಡ್ಮನಿ, ರೆಹಮಾನಸಾಬ್, ಸಂಗಮೇಶ ಗುತ್ತಿ ಇತರರಿದ್ದರು.