ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ತುರ್ತು ಪರಿಸ್ಥಿತಿ ವಿರುದ್ಧ ಬಿಜೆಪಿ ಜಿಲ್ಲಾ ಯುವಮೋರ್ಚಾ ವತಿಯಿಂದ ನಗರದ ಕ್ಲಾಕ್ ಟವರ್ ಬಳಿ ಸೋಮವಾರ ಪೋಸ್ಟರ್ ಅಭಿಯಾನ ನಡೆಯಿತು.ಈ ವೇಳೆ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ದೇಶದಲ್ಲಿ ಇಂದಿರಾ ಗಾಂಧಿ ಕಾಲದಲ್ಲಿ ಕಾಂಗ್ರೆಸ್ ತುರ್ತು ಪರಿಸ್ಥಿತಿ ಹೇರಿ ದೇಶದ ಜನತೆಗೆ ಅನ್ಯಾಯ ಎಸಗಿತ್ತು. ಪತ್ರಿಕಾ ಸ್ವಾತಂತ್ರ್ಯವನ್ನು ಕಸಿದು, ಪ್ರತಿಪಕ್ಷಗಳ ಮುಖಂಡರನ್ನು ಬಂಧಿಸಲಾಗಿತ್ತು. ಸಂವಿಧಾನದ ಆಶಯ ಉಲ್ಲಂಘನೆ ಮಾಡಲಾಗಿತ್ತು. ಈಗ ಅದೇ ಕಾಂಗ್ರೆಸ್ ಪಕ್ಷ ಬಿಜೆಪಿಯನ್ನು ಸಂವಿಧಾನ ವಿರೋಧಿ ಎನ್ನುತ್ತಿದೆ. ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿ, ಅವರ ಅಂತ್ಯಕ್ರಿಯೆ ಸಂದರ್ಭದಲ್ಲೂ ಅವಮಾನಿಸಿದ ಕಾಂಗ್ರೆಸ್ ಪಕ್ಷ ಬಿಜೆಪಿಯನ್ನು ಸಂವಿಧಾನ ವಿರೋಧಿ ಎನ್ನುವುದರಲ್ಲಿ ಅರ್ಥವಿಲ್ಲ ಎಂದರು.ಶಾಸಕ, ಯುವಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಪೂಂಜ ಮಾತನಾಡಿ, ಕಾಂಗ್ರೆಸ್ ಪಕ್ಷದವರು ಸಂವಿಧಾನದ ರಕ್ಷಕರು ಎಂದು ಹೇಳಿಕೊಂಡು ತುರ್ತು ಪರಿಸ್ಥಿತಿ ಹೇರಿ ಜನತೆಗೆ ದ್ರೋಹ ಮಾಡಿದ್ದಾರೆ. ಅಂಬೇಡ್ಕರ್ ಹಿತೈಷಿಗಳು ಎನ್ನುತ್ತಾ ಸಂವಿಧಾನಕ್ಕೆ ಮೊದಲ ತಿದ್ದುಪಡಿ ತಂದಿರುವುದು, ತುರ್ತು ಪರಿಸ್ಥಿತಿ ಹೇರಿ ಸರ್ವಾಧಿಕಾರಿ ವರ್ತನೆ ತೋರಿರುವುದು ಕಾಂಗ್ರೆಸ್. ನಾವು ಸಂವಿಧಾನದ ರಕ್ಷಕರು ಎಂದು ಪದೇ ಪದೇ ಹೇಳುವ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಪ್ರಿಯಾಂಕ್ ಖರ್ಗೆ ಜನತೆಯ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭರತ್ ರಾಜ್ ಕೃಷ್ಣಾಪುರ, ಯುಮೋರ್ಚಾ ಕಾರ್ಯಕರ್ತರು ಭಾಗವಹಿಸಿದ್ದರು. ಬಳಿಕ ತುರ್ತು ಪರಿಸ್ಥಿತಿ ಹೇರಿದ್ದ ಕಾಂಗ್ರೆಸ್ ವಿರುದ್ಧ ಕ್ಲಾಕ್ ಟವರ್ ಪರಿಸರದಲ್ಲಿ ಪೋಸ್ಟರ್ ಅಂಟಿಸಲಾಯಿತು.