ಸಾರಾಂಶ
ಕುಷ್ಟಗಿ: ಬಿಜೆಪಿಯವರು ಮತಗಳ್ಳತನದ ಮೂಲಕ ಅಧಿಕಾರ ಹಿಡಿದಿದ್ದಾರೆ. ಈ ಕುರಿತು ಯುವ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು ಎಂದು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಮಂಜುನಾಥಗೌಡ ಹೇಳಿದರು.
ಪಟ್ಟಣದ ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪುರ ನಿವಾಸದ ಆವರಣದಲ್ಲಿ ಯುವ ಕಾಂಗ್ರೆಸ್ ಸಮಿತಿಯಿಂದ ನಡೆದ ಯುವ ಸಮ್ಮೇಳನ ಹಾಗೂ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು, ಪ್ರತಿಯೊಬ್ಬ ಯುವಕರು ಮನೆ ಮನೆಗೆ ತೆರಳಿ ಮತಗಳ ಮಾಹಿತಿ ಪಡೆಯಬೇಕು, ಮತಗಳ್ಳತನ ಜಾಗೃತಿ ಮೂಡಿಸಿ ಸಹಿ ಸಂಗ್ರಹಣೆ ಮಾಡಬೇಕು ಎಂದರು.ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಲಕ್ಷ ಕೋಟಿಗೂ ಹೆಚ್ಚು ಹಣ ಖರ್ಚು ಮಾಡುವ ಮೂಲಕ ನೆಮ್ಮದಿಯ ಜೀವನ ಕಲ್ಪಿಸಿಕೊಟ್ಟಿದೆ ಎಂದ ಅವರು, ಪಂಚ ಗ್ಯಾರಂಟಿ ಯೋಜನೆಗಳ ಕುರಿತು ಜನರಲ್ಲಿ ತಿಳಿಸಬೇಕು ಎಂದರು.
ಯುವಕರು ಪಕ್ಷ ಸಂಘಟನೆ ಮಾಡುವ ಮೂಲಕ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಟಿಕೆಟ್ ಪಡೆದುಕೊಂಡು ಸ್ಪರ್ಧೆ ಮಾಡಬೇಕು, ಅದೇ ರೀತಿ 2028ರ ವಿಧಾನಸಭಾ ಚುನಾವಣೆಯಲ್ಲಿ ಕುಷ್ಟಗಿಯಲ್ಲಿ ಕಾಂಗ್ರೆಸ್ ಗೆಲ್ಲಿಸಬೇಕು ಎಂದರು.ರಾಜ್ಯ ಉಸ್ತುವಾರಿ ನಿಗಮ್ ಭಂಡಾರಿ ಮಾತನಾಡಿ, ಯುವಕರು ಗ್ರಾಮೀಣ ಭಾಗದಲ್ಲಿ ಪಕ್ಷ ಸಂಘಟನೆ ಮಾಡಬೇಕು, ನಮ್ಮ ಯುವ ನೇತಾರ ರಾಹುಲ್ ಗಾಂಧಿ ಯುವಕರಿಗೆ ಹೆಚ್ಚು ಆದ್ಯತೆ ನೀಡಲು ತಿಳಿಸಿದ್ದಾರೆ. ಯುವ ರಾಜಕಾರಣಿಗಳು ಕಾಂಗ್ರೆಸ್ ಪಕ್ಷದಲ್ಲಿ ಬರಬೇಕು. ಪ್ರತಿಯೊಬ್ಬರು ಸೌಲಭ್ಯ ವಂಚಿತರಿಗೆ ಸೌಲಭ್ಯ ಕೊಡಿಸುವ ಕೆಲಸ ಮಾಡಬೇಕು ಎಂದರು.
ದಿಶಾ ಸಮಿತಿಯ ಸದಸ್ಯ ದೊಡ್ಡಬಸನಗೌಡ ಪಾಟೀಲ ಬಯ್ಯಾಪುರ ಮಾತನಾಡಿ, ಯುವ ಕಾಂಗ್ರೆಸ್ ಪದಾಧಿಕಾರಿಗಳು ಪಕ್ಷ ಬಲಪಡಿಸುವ ನಿಟ್ಟಿನಲ್ಲಿ ಕಾರ್ಯ ಮಾಡಬೇಕು, ಮುಂದಿನ ದಿನಗಳಲ್ಲಿ ಚುನಾವಣೆಗಳು ಬರುತ್ತಿದ್ದು, ಎಲ್ಲರೂ ಜಾಗೃತರಾಗಿ ಕಾರ್ಯ ಮಾಡಬೇಕು ಕಾಂಗ್ರೆಸ್ ಸರ್ಕಾರದ ಯೋಜನೆ ಜನರಲ್ಲಿ ತಿಳಿಸಬೇಕು ಎಂದರು.ರಾಜ್ಯ ಉಪಾಧ್ಯಕ್ಷೆ ದೀಪಿಕಾ ರೆಡ್ಡಿ ಮಾತನಾಡಿ, ದೇಶ ಬಲಿಷ್ಠವಾಗಿ ಬೆಳೆಯಲು ಕಾಂಗ್ರೆಸ್ ಕೊಡುಗೆ ಅಪಾರವಾಗಿದೆ, ಬಿಜೆಪಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ಮತಗಳ್ಳತನದ ಮೂಲಕ ಅಧಿಕಾರಕ್ಕೆ ಬಂದಿದೆ, ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಜನಪರ ಆಡಳಿತ ನೀಡುತ್ತಿದೆ ಮಾತು ಕೊಟ್ಟಂತೆ ಗ್ಯಾರಂಟಿ ಯೋಜನೆ ಜಾರಿಗೆ ತರಲಾಗಿದೆ ಎಂದರು.
ಕಾಂಗ್ರೆಸ್ ಮುಖಂಡ ಲಾಡ್ಲೇಮಷಾಕ ದೋಟಿಹಾಳ,ಇಲಾಹಿ ಸಿಕಂದರ,ಅಬ್ದುಲ್ ದೇಸಾಯಿ ಸೇರಿದಂತೆ ಅನೇಕರು ಮಾತನಾಡಿದರು.ಇದೆ ವೇಳೆ ಯುವಸಮಿತಿಯ ಪದಾಧಿಕಾರಿಗಳಿಗೆ ಗುರುತೀನ ಚೀಟಿ ವಿತರಿಸಲಾಯಿತು. ಈರಣ್ಣ ಬಾದಾಮಿ, ದೀಪಕ್‌ಗೌಡ, ಶ್ರೀಧರ ಜಾಧವ, ಲಿಂಗೇಶ ಕಲ್ಗುಡಿ, ಬಾಹುಬಲಿ ರಾಜೂರು, ಗವಿಸಿದ್ದಪ್ಪ ಗೌಡ, ಸಲೀಂ ಅಳವಂಡಿ, ಚಂದ್ರು ನಾಲತವಾಡ, ಫಾರುಖ್ ಡಾಲಾಯತ, ಲಕ್ಷ್ಮಣ ಆಚಾರ, ಅಯ್ಯಪ್ಪ ಹವಾಲ್ದಾರ , ನಂಜುಂಡಪ್ಪ ಪಟ್ಟಣಶೆಟ್ಟಿ, ಬಸವರಾಜ ಮಲ್ನಾಡದ, ಶಿವುಕುಮಾರ ಪೂಜಾರ, ಅರ್ಜುನ ಪಾಟೀಲ, ಕಲ್ಲಪ್ಪ ತಳವಾರ, ವಿಜಯ ನಾಯಕ, ಅಮರೇಶ ಗಾಂಜಿ, ಶಾರದಾ ಕಟ್ಟಿಮನಿ, ರವಿಕುಮಾರ ನಾಯಕ ಸೇರಿದಂತೆ ಅನೇಕರು ಇದ್ದರು.ಕೇದಾರನಾಥ ತುರಕಾಣಿ ನಿರೂಪಿಸಿದರು, ಬಸವರಾಜ ಕುಂಬಾರ ಗಣ್ಯರನ್ನು ಸ್ವಾಗತಿಸಿದರು.