ಪುತ್ತೂರು: ಪುತ್ತೂರು ತಾಲೂಕಿನ ಕಳೆದ ೧೫ ದಿನಗಳಿಂದ ಗ್ರಾಮೀಣ ಮತ್ತು ನಗರ ಭಾಗದಲ್ಲಿ ನಿರಂತರ ವಿದ್ಯುತ್ ಕಡಿತ ಆಗುತ್ತಿದ್ದು, ಜನ ಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ. ತಕ್ಷಣ ಸಮಸ್ಯೆಯನ್ನು ಬಗೆಹರಿಸಬೇಕೆಂದು ಆಗ್ರಹಿಸಿ ಬುಧವಾರ ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಸಂಜೀವ ಮಠಂದೂರು ನೇತೃತ್ವದಲ್ಲಿ ಪುತ್ತೂರು ಬಿಜೆಪಿಯ ಪ್ರಮುಖರು ಕಾರ್ಯಕರ್ತರು ಬನ್ನೂರು ಮೆಸ್ಕಾಂ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಮಾಜಿ ಶಾಸಕ ಸಂಜೀವ ಮಠಂದೂರು ಅವರು ಮೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ರಾಮಚಂದ್ರ ಎ. ಅವರಲ್ಲಿ ಸಮಸ್ಯೆಯನ್ನು ಮುಂದಿಟ್ಟರು. ಮಳೆಗಾಲ ಆರಂಭ ಆಗುವ ಮುನ್ನವೇ ಪುತ್ತೂರು ತಾಲೂಕಿನ ಬಹುತೇಕ ಕಡೆ ವಿದ್ಯುತ್ ವಾರಗಟ್ಟಲೆ ಕಡಿತ ಆಗಿ ಜನ ಸಾಮಾನ್ಯರು ಕುಡಿಯುವ ನೀರಿಗೆ ಬವಣೆ ಪಡುವಂತೆ ಆಗಿದೆ. ಮಳೆಗಾದಲ್ಲಿ ಸಹಜವಾಗಿ ವಿದ್ಯುತ್ ಕಡಿತವಾಗುತ್ತದೆ. ಆದರೆ ಈ ಭಾರಿ ಗಾಳಿ, ಮಳೆ, ಸಿಡಿಲು ಇಲ್ಲದೇ ಇದ್ದರೂ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಉಪ್ಪಿನಂಗಡಿ ಮತ್ತು ಕಬಕದಲ್ಲಿ ವಿದ್ಯುತ್ ಕಡಿತದಿಂದ ಜನ ಆಕ್ರೋಶಗೊಂಡಿದ್ದಾರೆ. ಪುತ್ತೂರಿನಲ್ಲಿ ಪವರ್ ಮ್ಯಾನ್‌ಗಳ ವರ್ಗಾವಣೆ ಮಾಡುತ್ತಿರುವ ಪರಿಣಾಮ ಇವತ್ತು ಪುತ್ತೂರಿನಲ್ಲಿ ಯಾವುದೇ ದುರಸ್ಥಿ ಕಾರ್ಯ ಆಗುತ್ತಿಲ್ಲ. ಮಳೆಗಾಲ ಬರುವ ಮೊದಲು ಮರಗಳ ರೆಂಬೆ, ಕೊಂಬೆ ತುಂಡರಿಸುವ ಕೆಲಸ ಆಗಿಲ್ಲ. ಅಪಾಯಕಾರಿ ಮರಗಳು ವಿದ್ಯುತ್ ಲೈನ್‌ಗೆ ಬೀಳುವ ಸಂಭವ ಇದ್ದರೂ ಅದನ್ನು ತೆರವು ಮಾಡಿಲ್ಲ. ಇದರ ಪರಿಣಾಮ ವಿದ್ಯುತ್ ಕಡಿತವಾಗುತ್ತಿದೆ. ಮತ್ತೊಂದು ಕಡೆ ಗುತ್ತಿಗೆಯನ್ನು ಯಾರೋ ಹೊರ ಜಿಲ್ಲೆಯವರಿಗೆ ಕೊಡುವುದರಿಂದ ಸ್ಥಳೀಯ ಗುತ್ತಿಗೆದಾರರು ಸಣ್ಣ ಪುಟ್ಟ ಕೆಲಸ ಮಾಡಲು ಮುಂದೆ ಬರುತ್ತಿಲ್ಲ. ಹಾಗಾಗಿ ತಕ್ಷಣ ಪವರ್‌ಮ್ಯಾನ್‌ಗಳ ನೇಮಕ, ಪರಿವರ್ತಕಗಳ ದುರಸ್ತಿ, ವಿದ್ಯುತ್ ಲೈನ್‌ಗಳು ಹಾದು ಹೋದಲ್ಲಿ ಮರಗಳ ಕೊಂಬೆ ರೆಂಬೆ ಕತ್ತರಿಸುವ ಕೆಲಸ ಮತ್ತು ೨೪/೭ ಮೆಸ್ಕಾಂ ಸಹಾಯವಾಣಿ ಕೇಂದ್ರ ಮಾಡುವಂತೆ ಅವರು ಆಗ್ರಹಿಸಿದರು. ಒಂದು ವಾರದಲ್ಲಿ ವಿದ್ಯುತ್ ಸಮಸ್ಯೆ ಬಗೆಹರಿಸದಿದ್ದರೆ ಮೆಸ್ಕಾಂ ಕಚೇರಿ ಮುಂದೆ ಬಿಜೆಪಿಯಿಂದ ಉಗ್ರ ಹೋರಾಟ ಮಾಡಲಿದ್ದೇವೆ ಎಂದು ಎಚ್ಚರಿಸಿದರು.ಪುತ್ತೂರು ಕಾರ್ಯನಿರ್ವಾಹಕ ಇಂಜಿನಿಯರ್ ಮೆಸ್ಕಾಂ ರಾಮಚಂದ್ರ ಅವರು ಸಮಸ್ಯೆಗಳ ಬಗ್ಗೆ ತಿಳಿಸಿ, ಪವರ್‌ಮ್ಯಾನ್‌ಗಳು ಬೇಕಾಗಿತ್ತು. ಆದರೆ ೨೯/೪ ವರ್ಕಿಂಗ್‌ನಲ್ಲಿದ್ದಾರೆ. ಹಾಗೆಂದು ಹೊರ ಗುತ್ತಿಗೆಯಿಂದ ಜನರನ್ನು ಪಡೆದರೆ ಅವರನ್ನು ಕಂಬ ಹತ್ತಿಸಲು ಆಗುವುದಿಲ್ಲ. ಅವರನ್ನು ಸಹಾಯಕರಾಗಿ ಪಡೆಯಬಹುದು. ನಿನ್ನೆ ಉಪ್ಪಿನಂಗಡಿಯಲ್ಲಿ ೩೦ರಿಂದ ೪೦ ವಿದ್ಯುತ್ ಕಂಬ ತುಂಡಾಗಿದೆ. ಮೊನ್ನೆ ಪುತ್ತೂರು ಪೇಟೆಯಲ್ಲೇ ಕಂಬಗಳು ತುಂಡಾಗಿತ್ತು. ಕಬಕದಲ್ಲಿ ರಾತ್ರಿ ವಿದ್ಯುತ್ ಕಂಬ ತುಂಡಾಗಿತ್ತು. ಆದರೂ ರಾತ್ರಿಯೇ ವಿದ್ಯುತ್ ಸಮಸ್ಯೆಗೆ ಪರಿಹಾರ ನೀಡಿದ್ದೇವೆ. ಈ ನಡುವೆ ಜೊತೆಗೆ ಸುಮಾರು ೪೦ ಮಂದಿ ಪವರ್ ಮ್ಯಾನ್‌ಗಳಿಗೆ ವರ್ಗಾವಣೆ ಆದೇಶ ಆಗಿದೆ. ಆದರೂ ಅವರನ್ನು ನಾವು ಇಲ್ಲಿಗೆ ಬೇರೆ ಬದಲಿ ಜನ ಬಾರದೆ ರೀಲಿವ್ ಮಾಡಿಲ್ಲ. ಪ್ರತಿ ವರ್ಷದಂತೆ ಏಪ್ರಿಲ್ ಆರಂಭದಲ್ಲೇ ೫೮ ಜನ ಬ್ಯಾಚ್ ಮಾಡಿ ಎಲ್ಲ ಸೆಕ್ಷನ್‌ಗಳಿಗೂ ತೆಗೆದು ಕೊಂಡಿದ್ದೇವೆ. ಈಗಾಗಲೇ ನಮ್ಮಲ್ಲಿ ೮ ವಾಹನ ೨೪/೭ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದರು. ಪುತ್ತೂರು ನಗರಸಭೆ ನಗರಸಭೆ ಮಾಜಿ ಅಧ್ಯಕ್ಷ ಕೆ. ಜೀವಂಧರ್ ಜೈನ್, ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಗೌರಿ ಬನ್ನೂರು ಅವರು ವಿದ್ಯುತ್ ಸ್ಥಗಿತಗೊಳಿಸಿದಲ್ಲಿ ಜನರಿಗೆ ಕುಡಿಯುವ ನೀರು ಸರಬರಾಜು ನಡೆಸಲು ಆಗುವ ತೊಂದರೆಗಳ ಬಗ್ಗೆ ಮನವರಿಕೆ ಮಾಡಿ ವಿದ್ಯುತ್ ಸಮಸ್ಯೆಯನ್ನು ತಕ್ಷಣ ಬಗೆಹರಿಸುವಂತೆ ಆಗ್ರಹಿಸಿದರು. ಈ ಸಂದರ್ಭ ನಗರಸಭೆ ನಿಕಟಪೂರ್ವ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ನಿಕಟಪೂರ್ವ ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಶಿವಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಯೋಗೀಶ್ ಬಾಳಿಗ, ಗ್ರಾಮಾಂತರ ಮಂಡಲದ ಉಪಾಧ್ಯಕ್ಷ ಹರಿಪ್ರಸಾದ್ ಯಾದವ್, ಲೋಕೇಶ್ ಹೆಗ್ಡೆ, ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ರಾಜೇಶ್ ಬನ್ನೂರು, ವಿಶ್ವನಾಥ ಗೌಡ ಬನ್ನೂರು, ಸತೀಶ್ ನಾಕ್, ವಿದ್ಯಾಧರ್ ಜೈನ್, ನಗರಸಭೆ ಮಾಜಿ ಸದಸ್ಯೆ ಮೋಹಿನಿ ವಿಶ್ವನಾಥ ಗೌಡ, ಮಹೇಶ್ ಕೆರಿ, ನಿತೀಶ್ ಕುಮಾರ್ ಶಾಂತಿವನ, ನಿತಿನ್ ಕಲ್ಲೇಗ, ನಿರಂಜನ ಮತ್ತಿತರರು ಉಪಸ್ಥಿತರಿದ್ದರು.
ವಿದ್ಯುತ್ ಸಮಸ್ಯೆ ಪರಿಹರಿಸುವಂತೆ ಬಿಜೆಪಿ ಆಗ್ರಹ
ಪುತ್ತೂರು ತಾಲೂಕಿನ ಕಳೆದ ೧೫ ದಿನಗಳಿಂದ ಗ್ರಾಮೀಣ ಮತ್ತು ನಗರ ಭಾಗದಲ್ಲಿ ನಿರಂತರ ವಿದ್ಯುತ್ ಕಡಿತ ಆಗುತ್ತಿದ್ದು, ಜನ ಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ. ತಕ್ಷಣ ಸಮಸ್ಯೆಯನ್ನು ಬಗೆಹರಿಸಬೇಕೆಂದು ಆಗ್ರಹಿಸಿ ಬುಧವಾರ ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಸಂಜೀವ ಮಠಂದೂರು ನೇತೃತ್ವದಲ್ಲಿ ಪುತ್ತೂರು ಬಿಜೆಪಿಯ ಪ್ರಮುಖರು ಕಾರ್ಯಕರ್ತರು ಬನ್ನೂರು ಮೆಸ್ಕಾಂ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.