ಸಾರಾಂಶ
ದಾವಣಗೆರೆಯಲ್ಲಿ ಬಿಜೆಪಿ ಮುಖಂಡರಾದ ಬಿ.ಎಂ.ಸತೀಶ, ಬಿ.ಜಿ.ಅಜಯಕುಮಾರ, ಲೋಕಿಕೆರೆ ನಾಗರಾಜ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ದಾವಣಗೆರೆ
ವಕ್ಫ್ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ ಬಿಜೆಪಿಯಿಂದ ನಮ್ಮ ಭೂಮಿ-ನಮ್ಮ ಹಕ್ಕು ಜನಜಾಗೃತಿ ಆಂದೋಲನ, ಹೋರಾಟವನ್ನು ನ.22ರಂದು ನಗರದ ಉಪವಿಭಾಗಾಧಿಕಾರಿ ಕಚೇರಿ ಹಮ್ಮಿಕೊಳ್ಳಲಾಗಿದೆ. ಸ್ಥಳದಲ್ಲೇ ಸಾರ್ವಜನಿಕರ ಅಹವಾಲು ಆಲಿಸಲಾಗುವುದು ಬಿಜೆಪಿ ಹಿರಿಯ ಮುಖಂಡ ಬಿ.ಎಂ.ಸತೀಶ ಕೊಳೇನಹಳ್ಳಿ ಹೇಳಿದರು.ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ವಿಧಾನ ಪರಿಷತ್ತು ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ನೇತೃತ್ವದಲ್ಲಿ ದಾವಣಗೆರೆಯಲ್ಲಿ ಬಿಜೆಪಿ ವಕ್ಫ್ ವಿರುದ್ಧ ಹೋರಾಟ ಕೈಗೊಳ್ಳಲಾಗಿದೆ ಎಂದರು.
ಜಿಲ್ಲಾದ್ಯಂತ ರೈತರು, ಜನರು, ಸರ್ಕಾರಿ ಆಸ್ತಿ, ದೇವಸ್ಥಾನಗಳ 100 ಎಕರೆಗೂ ಅಧಿಕ ಆಸ್ತಿಗಳು ವಕ್ಫ್ ಆಸ್ತಿಯಾಗಿ ದಾಖಲಾಗಿವೆ. ಇನ್ನಷ್ಟು ದಾಖಲೆಗಳನ್ನು ಕಲೆ ಹಾಕುತ್ತಿದ್ದೇವೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ರಾಜ್ಯಾದ್ಯಂತ ವಕ್ಫ್ ಬಾದಿತ ಜನರ ಸಮಸ್ಯೆ ಆಲಿಸಲು ಮೂರು ತಂಡಗಳ ಪ್ರಕಟಿಸಿದ್ದಾರೆ. ಪ್ರತಿ ಜಿಲ್ಲೆ, ಹೋಬಳಿ, ಪಂಚಾಯಿತಿ ಮಟ್ಟದಲ್ಲಿ ವಕ್ಫ್ ಸಮಸ್ಯೆ ಆಲಿಸುತ್ತಿದ್ದೇವೆ. ದಾವಣಗೆರೆಯಲ್ಲಿ ಛಲವಾದಿ ನಾರಾಯಣ ಸ್ವಾಮಿ ತಂಡ ಇಲ್ಲಿಗೆ ಬರಲಿದೆ ಎಂದು ಹೇಳಿದರು.ಮೂರು ತಂಡಗಳು ರಾಜ್ಯವ್ಯಾಪಿ ಸಂಗ್ರಹವಾಗುವ ಜನರ ಅಹವಾಲನ್ನು ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುವ ಅಧಿವೇಶನದಲ್ಲಿ ಪ್ರಸ್ತಾಪಿಸಲಿವೆ. ವಕ್ಫ್ ಆಸ್ತಿ ಸಂಬಂಧ ಇಡೀ ರಾಜ್ಯದ ಲ್ಲಿ ಉಂಟಾಗಿರುವ ಸಮಸ್ಯೆಗೆ ತಾರ್ಕಿಕ ಅಂತ್ಯ ಹಾಡುವ ನಿಟ್ಟಿನಲ್ಲಿ ಪ್ರತಿ ಜಿಲ್ಲೆಯಲ್ಲೂ ಓರ್ವ ವಕೀಲರನ್ನು ಒಳಗೊಂಡ ಐವರು ತಂಡ ರಚಿಸಲಾಗಿದೆ. ಕಾನೂನಾತ್ಮಕ ಹೋರಾಟಕ್ಕೆ ಶಕ್ತಿ ತುಂಬಲು ತಂಡ ರಚಿಸಲಾಗಿದೆ. ಪ್ರತಿ ಜಿಲ್ಲೆಯಲ್ಲಿ ಮಠಾಧೀಶರು ಸೇರಿದಂತೆ ಪ್ರಮುಖರನ್ನು ಒಳಗೊಂಡಂತೆ ಎಲ್ಲರನ್ನೂ ಭೇಟಿ ಮಾಡುವ ಮೂಲಕ ಜನಜಾಗೃತಿ ಮೂಡಿಸಲಿದ್ದೇವೆ. ರೈತರು, ಸಾರ್ವಜನಿಕರು ತಮ್ಮ ತಮ್ಮ ಜಾಗಗಳ ಪಹಣಿ ಪರಿಶೀಲಿಸಿಕೊಳ್ಳಬೇಕು ಎಂದು ಬಿ.ಎಂ.ಸತೀಶ ಮನವಿ ಮಾಡಿದರು.
ಇದೇ ವೇಳೆ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ, ಪಾಲಿಕೆ 17ನೇ ವಾರ್ಡ್ ಸದಸ್ಯ, ಮಾಜಿ ಮೇಯರ್ ಬಿ.ಜಿ.ಅಜಯಕುಮಾರ ಮಾತನಾಡಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿಲಕುಮಾರ ನಾಯ್ಕ, ಮುಖಂಡರಾದ ಕೊಟ್ರೇಶ ನಾಯ್ಕ, ಎಚ್.ಪಿ.ವಿಶ್ವಾಸ್, ಎಚ್.ಬಿ.ನವೀನಕುಮಾರ ಇತರರು ಇದ್ದರು.