ಹಿಂದು ಕಾರ್ಯಕರ್ತನ ಬಂಧನ ಖಂಡಿಸಿ ಬಿಜೆಪಿ ಪ್ರತಿಭಟನೆ

| Published : Jan 04 2024, 01:45 AM IST

ಸಾರಾಂಶ

ಹುಬ್ಬಳ್ಳಿಯಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದು ಕಾರ್ಯಕರ್ತ ಶ್ರೀಕಾಂತ್ ಪೂಜಾರಿಯ ಬಂಧನ ಖಂಡಿಸಿ ಬುಧವಾರ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸದ ನಂತರ ಹುಬ್ಬಳ್ಳಿಯಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದು ಕಾರ್ಯಕರ್ತ ಶ್ರೀಕಾಂತ್ ಪೂಜಾರಿಯ ಬಂಧನ ಖಂಡಿಸಿ ಬುಧವಾರ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ರಾಣಿ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನಾ ರ್‍ಯಾಲಿ ನಡೆಸಿದ ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರ, ಸಿಎಂ ಸಿದ್ದರಾಮಯ್ಯ ವಿರುದ್ಧ ಧಿಕ್ಕಾರದ ಘೋಷಣೆ ಮೊಳಗಿಸಿದರು. 5 ಶತಮಾನದ ಬಳಿಕ ಅಯೋಧ್ಯೆ ರಾಮಜನ್ಮಭೂಮಿ ಪ್ರಕರಣ ಇತ್ಯಾರ್ಥವಾಗಿ ದೇಶವೆ ರಾಮಮಂದಿರ ಉದ್ಘಾಟನೆಯ ಅಮೃತ ಘಳಿಗೆಗಾಗಿ ಎದುರು ನೋಡುತ್ತಿರುವ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರ 3 ದಶಕಗಳ ಹಿಂದಿನ ರಾಮಜನ್ಮಭೂಮಿ ಹೊರಾಟಗಾರರ ಹಿಂದೂ ಕಾರ್ಯಕರ್ತರ ಪ್ರಕರಣಗಳನ್ನು ಹೆಕ್ಕಿ ಸಮಾಜದಲ್ಲಿ ಕೊಮುಗಲಭೆಗೆ ಪ್ರಚೋದನೆ ಮಾಡುತ್ತಿರುವ ಸಿದ್ದರಾಮಯ್ಯನವರ ಸರ್ಕಾರದ ಕ್ರಮ ಖಂಡನೀಯ. ರಾಜ್ಯದಲ್ಲಿ ಗಂಭೀರ ಸ್ವರೂಪದ ಡಿಜೆಹಳ್ಳಿ, ಕೆಜೆ ಹಳ್ಳಿ ಪ್ರಕರಣದಲ್ಲಿ ಪೋಲಿಸ್ ಠಾಣೆಗೆ ನುಗ್ಗಿ, ಶಾಸಕರ‌ ಮನೆಗೆ ಬೆಂಕಿ ಇಟ್ಟವರು ಅಮಾಯಕರು ಎಂತ ಹೇಳಿ ಪ್ರಕರಣ ಹಿಂಪಡೆಯುವ ನೀಚ ಬುದ್ದಿಯ ಈ ಸರ್ಕಾರಕ್ಕೆ ತಾವುಗಳು ನಿರ್ದೇಶನ ನೀಡಿ ಹಿಂದೂ ಕಾರ್ಯಕರ್ತರ ಎಲ್ಲ ಪ್ರಕರಣಗಳನ್ನ ಹಿಂಪಡೆಯುವಂತೆ ಮಾರ್ಗದರ್ಶನ ಮಾಡಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಶ್ರೀರಾಮ ಮಂದಿರ ನಿರ್ಮಾಣದ ಬಗ್ಗೆ ಅಸಂತುಷ್ಟರಾಗಿರುವ ಕಾಂಗ್ರೆಸ್ ನಾಯಕರ ಮನಸ್ಥಿತಿ ನೋಡಿದರೇ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಸಂಪೂರ್ಣವಾಗಿ ನಿಷ್ಕ್ರೀಯವಾಗಿದ್ದು ತಮ್ಮ ಸರ್ಕಾರದ ವಿಫಲತೆಗಳನ್ನು ಮುಚ್ಚಿಕೊಳ್ಳಲು ಇಂತಹ ದುಸ್ಸಾಹಸಕ್ಕೆ ಕೈ ಹಾಕುತ್ತಿದೆ. ಅಲ್ಪಸಂಖ್ಯಾತರನ್ನ ಹಾಗೂ ತಮ್ಮ ಹೈ ಕಮಾಂಡ್ ಮೆಚ್ಚಿಸಲು ಕರ ಸೇವಕರ ಮೇಲಿನ ಮೊಕದ್ದಮೆಗಳನ್ನು ಮೂನ್ನೆಲೆಗೆ ತಂದು ಭಡಾಯ ಕೊಚ್ಚಿಕೊಳ್ಳುತ್ತಿರುವ ಸರ್ಕಾರಕ್ಕೆ ನಿರ್ದೇಶನ ನೀಡಿ ರಾಜ್ಯದಲ್ಲಿ ಸೌಹಾರ್ದತೆ ಕಾಪಾಡಬೇಕು. ರಾಮ ಜನ್ಮ ಭೂಮಿಯ ವಿವಾದವನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದ ಮುಸ್ಲಿಂ ನಾಯಕರೆ ಮೋದಿಯವರನ್ನ ಸ್ವಾಗತಿಸಿ ರಾಮ ಮಂದಿರ ಉದ್ಘಾಟನೆಗೆ ಪಾಲ್ಗೊಳ್ಳಲು ತುದಿಗಾಲಿನಲ್ಲಿ ನಿಂತಾಗ ರಾಜ್ಯ ಸರ್ಕಾರದ ಕಾರ್ಯ ಜನರಲ್ಲಿ ಹೆಸಿತನ‌ ಮೂಡಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸರ್ಕಾರದ ಈ ಕ್ರಮವನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ. ಇಂತಹ ಘಟನೆ ಮತ್ತೊಮ್ಮೆ ರಾಜ್ಯದಲ್ಲಿ ಘಟಿಸಬಾರದು. ರಾಮ ಮಂದಿರ ಉದ್ಘಾಟನೆಯ ಈ ಐತಿಹಾಸಿಕ ಕ್ಷಣಗಳಿಗೆ ಯಾವುದೇ ಅಡ್ಡಿಯಾಗದಂತರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ವಿನಂತಿಸಿದರು. ಇಂತಹ ಪ್ರಚೋಧನಕಾರಿ ಕ್ರಮಕೈಗೊಳ್ಳುವ ಸಚಿವರ ಹೆಡಮುರಿ ಕಟ್ಟಬೇಕೆಂದು ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ಸಂಸದೆ ಮಂಗಲ ಅಂಗಡಿ, 31 ವರ್ಷದ ಹಿಂದಿನ ಕೇಸ್ ಈಗ ತೆಗೆದು ಹಿಂದೂ ಕಾರ್ಯಕರ್ತರು ಮತ್ತು ರಾಮನ ಭಕ್ತರ ಮೇಲೆ ಕಾಂಗ್ರೆಸ್ ಸರ್ಕಾರ ದೌರ್ಜನ್ಯ ಮಾಡುತ್ತಿರುವುದು ಖಂಡನೀಯ. ಎಲ್ಲರೂ ರಾಮನ ಭಕ್ತರು. ಹಾಗಾಗಿ, ಸರ್ಕಾರ ಈ ರೀತಿ ಪೊಲೀಸರನ್ನು ದುರ್ಬಳಕೆ ಮಾಡಿಕೊಂಡು ಹಿಂದೂ ಕಾರ್ಯಕರ್ತರನ್ನು ಬಂಧಿಸಿರುವುದು ಸರಿಯಲ್ಲ ಎಂದು ಕಿಡಿಕಾರಿದರು.

ಪ್ರತಿಭಟನೆಯಲ್ಲಿ ಶಾಸಕ ವಿಠಲ ಹಲಗೇಕರ್, ಮುಖಂಡರಾದ ಸದಾನಂದ ಗುಂಟೆಪ್ಪನವರ, ಮುರುಘೇಂದ್ರಗೌಡ ಪಾಟೀಲ, ದಾದಾಗೌಡ ಬಿರಾದರ, ಎಫ್.ಎಸ್.ಸಿದ್ದನಗೌಡರ, ಪ್ರಮೋದ ಕೊಚೇರಿ, ಡಾ. ಸೋನಾಲಿ ಸರ್ನೋಬತ್ ಸೇರಿದಂತೆ ಮೊದಲಾದವರು ಭಾಗವಹಿಸಿದ್ದರು.