ಸಾರಾಂಶ
ಕೊಪ್ಪಳ: ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡಿದ್ದ ಮಲ್ಲಪ್ಪ ಉದ್ದಾರ ಎನ್ನುವ ಯುವಕನ ಅಂಗಾಂಗಳನ್ನು ಕುಟುಂಬಸ್ಥರು ದಾನ ಮಾಡುವ ಮೂಲಕ ನೋವಿನಲ್ಲಿಯೂ ಮಾನವೀಯತೆ ಮೆರೆದಿದ್ದಾರೆ. ಮೃತ ಯುವಕನ ಪಾರ್ಥಿವ ಶರೀರವನ್ನು ಗ್ರಾಮಸ್ಥರು ಅದ್ಧೂರಿಯಾಗಿ ಮೆರವಣಿಗೆ ಮಾಡುವ ಮೂಲಕ ಕೊಂಡಾಡಿದ್ದಾರೆ.ತಾಲೂಕಿನ ಕಿನ್ನಾಳ ಗ್ರಾಮದ ನಿವಾಸಿ 36 ವರ್ಷದ ಯುವಕ ಡಿ.24 ರಂದು ವೀರಾಪುರ ಗ್ರಾಮದ ಬಳಿ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡಿತ್ತು.ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತಾದರೂ ಪ್ರಯೋಜನವಾಗಲಿಲ್ಲ. ಮೆದುಳು ನಿಷ್ಕ್ರಿಯಗೊಂಡಿರುವುದನ್ನು ವೈದ್ಯರು ಕುಟುಂಬಸ್ಥರಿಗೆ ತಿಳಿಸಿದ್ದರು. ಕುಟುಂಬಸ್ಥರು ಮತ್ತು ಯುವಕನ ಸ್ನೇಹಿತರು ಆತನ ಅಂಗಾಂಗ ದಾನ ಮಾಡಲು ನಿರ್ಧರಿಸಿದರು.ಮಲ್ಲಪ್ಪ ಉದ್ದಾರ ಅವರ ಸಹೋದರರಾದ ಮಂಜುನಾಥ, ಶೇಖರಪ್ಪ ಅವರು ಕುಟುಂಬದವರೊಂದಿಗೆ ಮತ್ತು ಗ್ರಾಮದವರೊಂದಿಗೆ ಚರ್ಚೆ ಮಾಡಿ, ಈ ಮಹತ್ವದ ನಿರ್ಧಾರ ಮಾಡಿದ್ದಾರೆ. ಮೃತ ಯುವಕನ ಕಿಡ್ನಿ, ಲೀವರ್, ಹೃದಯ ಸೇರಿದಂತೆ ಅಷ್ಟೂ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಮಾನವೀಯತೆ ಮೆರೆದರು. ಸುಮಾರು ನಾಲ್ಕಾರು ಜನರಿಗೆ ಮರುಜೀವನ ನೀಡಲಾಯಿತು.ಈ ವಿಷಯ ಗ್ರಾಮದಲ್ಲಿ ಹಬ್ಬಿತು. ನಮ್ಮೂರ ಯುವಕ ಅಪಘಾತದಲ್ಲಿ ಗಾಯಗೊಂಡು, ಮೆದುಳು ನಿಷ್ಕ್ರಿಯಗೊಂಡಿದ್ದರಿಂದ ಕುಟುಂಬಸ್ಥರು ಅಂಗಾಂಗ ದಾನ ಮಾಡಿದ್ದಾರೆ ಎನ್ನುವ ಬಗ್ಗೆ ಕೊಂಡಾಡಿದರಲ್ಲದೆ ಪಾರ್ಥಿವ ಶರೀರವನ್ನು ಮೆರವಣಿಗೆ ಮಾಡಲು ನಿರ್ಧರಿಸಿದರು.ಸಂಜೆ ಗ್ರಾಮಕ್ಕೆ ಮಲ್ಲಪ್ಪ ಉದ್ದಾರನ ಪಾರ್ಥಿವ ಶರೀರ ಆಗಮಿಸುತ್ತಿದ್ದಂತೆ ಇಡೀ ಗ್ರಾಮಸ್ಥರು ಮೆರವಣಿಗೆ ನಡೆಸಿದರು. ಘೋಷಣೆಗಳನ್ನು ಕೂಗುತ್ತಾ, ಸ್ಮಶಾನದವರೆಗೂ ಮೆರವಣಿಗೆ ಮಾಡಿದರು.ಮಲ್ಲಪ್ಪ ಉದ್ದಾರ ಬದುಕಿದ್ದರೆ ಇನ್ನು ಒಂದೂವರೆ ತಿಂಗಳಲ್ಲಿ ಮದುವೆಯಾಗುತ್ತಿದ್ದ. ಮದುವೆ ನಿಶ್ಚಯವಾಗಿದ್ದು, ಇನ್ನೇನು ಮದುವೆ ದಿನಾಂಕ ನಿಗದಿ ಮಾಡಿ, ಮದುವೆ ಮಾಡುವ ಸಂಭ್ರಮದಲ್ಲಿ ಮನೆಯವರು ಇದ್ದರು. ಆದರೆ, ವಿಧಿಯಾಟದಲ್ಲಿ ಮೆದುಳು ನಿಷ್ಕ್ರಿಯಗೊಂಡಿದ್ದರಿಂದ ಅಂಗಾಂಗ ದಾನ ಮಾಡಿದ್ದಾರೆ.ನಮ್ಮ ಸ್ನೇಹಿತನೇ ಆಗಿದ್ದ ಮಲ್ಲಪ್ಪ ಈಗ ಮನೆಯವರ ನಿರ್ಧಾರದಿಂದ ಸಾವಿನಲ್ಲಿಯೂ ಸಾರ್ಥಕತೆ ಮೆರೆದಿದ್ದಾನೆ. ಅವರ ಕುಟುಂಬದವರು ತೆಗೆದುಕೊಂಡ ನಿರ್ಧಾರ ಅನೇಕರ ಬದುಕಿನಲ್ಲಿ ಮಲ್ಲಪ್ಪ ಬೆಳಗುವಂತೆ ಮಾಡಿದೆ ಎನ್ನುತ್ತಾರೆ ಮೃತನ ಸ್ನೇಹಿತ ಮಂಜುನಾಥ ಸಿರಿಗೇರಿ.