ಸಾರಾಂಶ
. 7ರಂದು ಬೆಳಗ್ಗೆ 6 ಗಂಟೆಗೆ ಹೊಸ ಕೋರ್ಟ್‌ನಿಂದ ಓಟ ಆರಂಭವಾಗಲಿದ್ದು, ಚೇತನ ಕಾಲೇಜು ರಸ್ತೆ, ಗಾಂಧಿನಗರ ರಸ್ತೆಯನ್ನು ನೇರವಾಗಿ ಕ್ರಾಸ್ ಮಾಡಿ ಸಾಲಿಮಠ ಕಟ್ಟಡದಿಂದ ಗೋಕುಲ ರಸ್ತೆ ತಲುಪಿ ವಿವಿಧ ಮಾರ್ಗಗಳಲ್ಲಿ ಹಾದು ಮರಳಿ ಹೊಸ್ ಕೋರ್ಟ್‌ಗೆ ಬಂದು ಮುಕ್ತಾಯವಾಗಲಿದೆ
- ಧಾರವಾಡ ಜಿಲ್ಲಾ ಅಥ್ಲೆಟಿಕ್ ಅಸೋಶಿಯೇಶನ್ ಕಾರ್ಯದರ್ಶಿ ವಿಲಾಸ ಮಾಹಿತಿ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಧಾರವಾಡ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಶನ್ ವತಿಯಿಂದ ಜ. 7ರಂದು 58ನೇ ಕರ್ನಾಟಕ ರಾಜ್ಯ ಕ್ರಾಸ್ ಕಂಟ್ರಿ ಓಟ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ಅಸೋಸಿಯೇಶನ್ ಕಾರ್ಯದರ್ಶಿ ವಿಲಾಸ ನೀಲಗುಂದ ಹೇಳಿದರು.ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಗ್ಗೆ 6 ಗಂಟೆಗೆ ಹೊಸ ಕೋರ್ಟ್‌ನಿಂದ ಓಟ ಆರಂಭವಾಗಲಿದ್ದು, ಚೇತನ ಕಾಲೇಜು ರಸ್ತೆ, ಗಾಂಧಿನಗರ ರಸ್ತೆಯನ್ನು ನೇರವಾಗಿ ಕ್ರಾಸ್ ಮಾಡಿ ಸಾಲಿಮಠ ಕಟ್ಟಡದಿಂದ ಗೋಕುಲ ರಸ್ತೆ ತಲುಪಿ ವಿವಿಧ ಮಾರ್ಗಗಳಲ್ಲಿ ಹಾದು ಮರಳಿ ಹೊಸ್ ಕೋರ್ಟ್‌ಗೆ ಬಂದು ಮುಕ್ತಾಯವಾಗಲಿದೆ ಎಂದರು.
ಕ್ರಾಸ್ ಕಂಟ್ರಿ ಓಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ರಾಜ್ಯದ 800ರಿಂದ ಸಾವಿರಕ್ಕೂ ಅಧಿಕ ಕ್ರೀಡಾಪಟುಗಳಿಗೆ ಹಾಗೂ ತಾಂತ್ರಿಕ ಅಧಿಕಾರಿಗಳಿಗೆ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಓಟದ ಸ್ಪರ್ಧೆಗೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಅಥ್ಲೆಟ್‌ಗಳು ಸ್ಪರ್ಧಿಸುವರು. ಇದೇ ಸಮಯದಲ್ಲಿ ಕರ್ನಾಟಕ ರಾಜ್ಯ ತಂಡವನ್ನು ಆಯ್ಕೆ ಮಾಡಲಾಗುವುದು. ಈ ಓಟದಲ್ಲಿ ವಿವಿಧ ಗುಂಪಿನಲ್ಲಿ ಪುರುಷ ಮತ್ತು ಮಹಿಳೆಯರ, ಬಾಲಕ, ಬಾಲಕಿಯರ ವಿವಿಧ ಗುಂಪಿನಲ್ಲಿ ಸ್ಪರ್ಧೆಗಳು ನಡೆಯಲಿವೆ ಎಂದರು.ಪುರುಷರಿಗಾಗಿ 10 ಕಿ.ಮೀ., 20 ವರ್ಷದೊಳಗಿನ ಬಾಲಕರಿಗೆ 8 ಕಿ.ಮೀ., 18 ವರ್ಷದೊಳಗಿನ ಬಾಲಕರಿಗೆ 6 ಕಿ.ಮೀ., 16 ವರ್ಷದ ಬಾಲಕರಿಗೆ 2 ಕಿ.ಮೀ., ಮಹಿಳೆಯರಿಗಾಗಿ 10 ಕಿ.ಮೀ., 20 ವರ್ಷದೊಳಗಿನ ಬಾಲಕಿಯರಿಗೆ 6 ಕಿ.ಮೀ., 18 ವರ್ಷದೊಳಗಿನ ಬಾಲಕಿಯರಿಗೆ 4 ಕಿ.ಮೀ. ಓಟದ ಸ್ಪರ್ಧೆಗಳು ನಡೆಯಲಿವೆ. ನಂತರ ಬೆಳಗ್ಗೆ 10ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ ಎಂದರು.
ಪ್ರಶಸ್ತಿ ಪ್ರದಾನ ಸಮಾರಂಭವನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಉದ್ಘಾಟಿಸುವರು. ಅತಿಥಿಗಳಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಶಾಸಕ ಮಹೇಶ ಟೆಂಗಿನಕಾಯಿ, ಕೆಪಿಸಿಸಿ ಕಾರ್ಯದರ್ಶಿ ಸದಾನಂದ ಡಂಗನವರ ಸೇರಿದಂತೆ ಹಲವರು ಪಾಲ್ಗೊಳ್ಳುವರು. ರಾಜ್ಯ ತಂಡಕ್ಕೆ ಆಯ್ಕೆಯಾದ ಕ್ರೀಡಾಪಟುಗಳು ಜ. 15ರಂದು ಬಿಹಾರದ ಗಯಾದಲ್ಲಿ ನಡೆಯುವ ರಾಷ್ಟ್ರ ಮಟ್ಟದ ಕ್ರಾಸ್ ಕಂಟ್ರಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವರು ಎಂದರು.ಈ ವೇಳೆ ಕಿರಣ ಮುನವಳ್ಳಿ, ಹರೀಶ ಎಸ್.ಜಿ, ಉಮೇಶ ಭಟ್, ಪಿ. ಮಂಜುನಾಥ, ಮಹಾಂತೇಶ ಬಳ್ಳಾರಿ, ಬಸವರಾಜ ಸೇರಿದಂತೆ ಹಲವರಿದ್ದರು.