ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು/ಉಡುಪಿ
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಬುಧವಾರ ಬಹುತೇಕ ಕಡೆ ಅಕಾಲಿಕವಾಗಿ ಸಾಧಾರಣ ಮಳೆಯಾಗಿದೆ. ಇಡೀ ದಿನ ಮೋಡ ಕವಿದ ವಾತಾವರಣವಿತ್ತು.ಬೆಳಗ್ಗೆ ಹಾಗೂ ಸಂಜೆ ವೇಳೆ ವಿವಿಧೆಡೆ ಮಳೆಯಾಗಿದೆ. ಮಂಗಳೂರು, ಉಳ್ಳಾಲ, ಸುರತ್ಕಲ್, ಮೂಡುಬಿದಿರೆ, ಬಂಟ್ವಾಳದಲ್ಲಿ ಸಾಧಾರಣ ಮಳೆ ಸುರಿದರೆ ಬೆಳ್ತಂಗಡಿ, ಪುತ್ತೂರಿನ ಹಲವೆಡೆ ಗುಡುಗು ಸಹಿತ ಉತ್ತಮ ಮಳೆಯಾಗಿದೆ.
ಅಂಡಮಾನ್ ಕರಾವಳಿಯಲ್ಲಿ ಉಂಟಾಗುತ್ತಿರುವ ವಾಯುಭಾರ ಕುಸಿತದಿಂದ ಮುಂದಿನ 48 ಗಂಟೆಯಲ್ಲಿ ಕರಾವಳಿ ಭಾಗದಲ್ಲಿ ಮೋಡ, ಮಳೆಯ ಮುನ್ಸೂಚನೆ ಇದೆ. ಜ.6ರವರೆಗೆ ಮಳೆ ಸುರಿಯುವ ಸಾಧ್ಯತೆಯನ್ನು ಹವಾಮಾನ ಇಲಾಖೆ ತಿಳಿಸಿದೆ.ಉಡುಪಿ ಜಿಲ್ಲೆಯ ಅಲ್ಲಲ್ಲಿ ಲಘು ಮಳೆ-
ಉಡುಪಿ ಮತ್ತು ಸುತ್ತಮುತ್ತ ಬುಧವಾರ ಮುಂಜಾನೆ ಸಾಧಾರಣ ಮಳೆಯಾಗಿದೆ. ದಿನವಿಡೀ ಮೋಡಕವಿದ ವಾತಾವರಣ ಇದ್ದು, ಗುರುವಾರವೂ ಮಳೆಯಾಗುವ ಸಾಧ್ಯತೆ ಇದೆ. ಬಾರತೀಯ ಹವಾಮಾನ ಇಲಾಖೆ ಬುಧವಾರದಿಂದ 3 ದಿನಗಳ ಕಾಲ ಕರಾವಳಿಯಲ್ಲಿ ಮಳೆಯಾಗುವ ಬಗ್ಗೆ ಮುನ್ಸೂಚನೆ ನೀಡಿತ್ತು.ಬುಧವಾರ ಮುಂಜಾನೆ ಜಿಲ್ಲೆಯಲ್ಲಿ ಸರಾಸರಿ 0.30 ಮಿ.ಮೀ. ಮಳೆಯಾಗಿದೆ. ಉಡುಪಿ ತಾಲೂಕಿನಲ್ಲಿ 1.30, ಕಾರ್ಕಳ ತಾಲೂಕಿನಲ್ಲಿ 0.30, ಬ್ರಹ್ಮಾವರ 0.10 ಮತ್ತು ಕಾಪು ತಾಲೂಕಿನಲ್ಲಿ 0.40 ಮಿ.ಮೀ ಮಳೆಯಾಗಿದೆ.ಈ ಮಳೆಗೆ ಪರ್ಕಳ - ಹೆರ್ಗ ರಸ್ತೆಯ ಪಕ್ಕದಲ್ಲಿದ್ದ ಬೃಹತ್ ಗೋಳಿಮರ ಬುಡ ಸಮೇತ ಉರುಳಿದೆ. ಇದರಿಂದ ಯಾವುದೇ ಹಾನಿಯಾಗಿಲ್ಲ. ಆದರೆ ಅದನ್ನು ತೆರವುಗೊಳಿಸದ ಬಗ್ಗೆ ನಗರಸಭೆ ವಿರುದ್ಧ ಸ್ತಳೀಯರು ಆಸಮಾಧಾನ ವ್ಯಕ್ತಪಡಿಸಿದ್ದಾರೆ.ಬೆಳ್ತಂಗಡಿ: ಅಕಾಲಿಕ ಮಳೆಯಿಂದಾಗಿ ಹೆದ್ದಾರಿ ಸಂಚಾರ ಅಸ್ತವ್ಯಸ್ತ-
ಬೆಳ್ತಂಗಡಿ: ಬುಧವಾರ ತಾಲೂಕಿನಲ್ಲಿ ಸುರಿದ ಅಕಾಲಿಕ ಮಳೆಯಿಂದ ಹೆದ್ದಾರಿ ಸಂಚಾರ ಅಸ್ತವ್ಯಸ್ತವಾಯಿತು. ಕಳೆದ ಎರಡು ದಿನಗಳಿಂದ ಮೋಡ ಕವಿದ ವಾತಾವರಣವಿದ್ದು ಬುಧವಾರ ಮುಂಜಾನೆಯೇ ಕೆಲವು ಗ್ರಾಮಗಳಲ್ಲಿ ತುಂತುರು ಹಾಗೂ ಉಳಿದೆಡೆ ಸಾಮಾನ್ಯ ಮಳೆ ಸುರಿಯಿತು.ಪುಂಜಾಲಕಟ್ಟೆಯಿಂದ ಚಾರ್ಮಾಡಿ ತನಕ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಭರದಿಂದ ಸಾಗುತ್ತಿದ್ದು ಅಲ್ಲಲ್ಲಿ ರಸ್ತೆ ಅಗಲೀಕರಣಕ್ಕೆ ಮಣ್ಣು ತೆಗೆದು ಹಾಕಲಾಗಿದೆ. ಅಕಾಲಿಕ ಮಳೆಯಿಂದ ಮಳೆ ನೀರು ರಸ್ತೆಯಲ್ಲೆಲ್ಲ ಹರಿದು ಬದಿಗಳಲ್ಲಿ ಹಾಕಲಾಗಿದ್ದ ಮಣ್ಣು ರಸ್ತೆಗೆ ಬಂದು ಕೆಸರು ತುಂಬಿ ವಾಹನ ಸವಾರರು ಪರದಾಡುವಂತಾಯಿತು.
ಕಳೆದ ಕೆಲವು ದಿನಗಳಿಂದ ಧೂಳಿನಿಂದ ಆವೃತವಾದ ಹೆದ್ದಾರಿಯಲ್ಲಿ ಸಾಗುತ್ತಿದ್ದ ಜನರಿಗೆ ಮಳೆ ಬಂದ ಕಾರಣ ಜಾರುವ ರಸ್ತೆಯಲ್ಲಿ ಸಾಗುವಂತಾಗಿದೆ. ಮಳೆಯಿಂದಾಗಿ ವಾತಾವರಣ ತಂಪಾಗಿ ಆಹ್ಲಾದಕರವಾಗಿತ್ತುಹಲವಾರು ಹಳೆ ಮನೆಗಳ ದುರಸ್ತಿಗೆ ಛಾವಣಿಗಳನ್ನು ಬಿಚ್ಚಿದ್ದು ಅಕಾಲಿಕ ಮಳೆಯಿಂದ ಸಮಸ್ಯೆ ಎದುರಿಸಿದರು. ಹೆಚ್ಚಿನ ಕೃಷಿಕರು ಅಂಗಳದಲ್ಲಿ ಒಣಗಲು ಹಾಕಿದ್ದ ಕೊಯ್ಲಿನ ಅಡಕೆಯೂ ಒದ್ದೆಯಾದವು.