ಮಹಿಳಾ ಶಿಕ್ಷಣದ ಬಗ್ಗೆ ಜಗತ್ತಿಗೆ ಸಾರಿದ್ದು ಸಾವಿತ್ರಿಬಾಯಿ ಫುಲೆ: ಪದ್ಮನಾಭ್

| Published : Jan 04 2024, 01:45 AM IST / Updated: Jan 05 2024, 11:50 AM IST

ಮಹಿಳಾ ಶಿಕ್ಷಣದ ಬಗ್ಗೆ ಜಗತ್ತಿಗೆ ಸಾರಿದ್ದು ಸಾವಿತ್ರಿಬಾಯಿ ಫುಲೆ: ಪದ್ಮನಾಭ್
Share this Article
  • FB
  • TW
  • Linkdin
  • Email

ಸಾರಾಂಶ

ಅಕ್ಷರದವ್ವ ತಾಯಿ ಸಾವಿತ್ರಿಬಾಯಿ ಫುಲೆ ಅವರ 193 ನೇ ಜಯಂತಿ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಕೊರಟಗೆರೆ

ಮಹಿಳಾ ಶಿಕ್ಷಣದ ಮಹತ್ವವನ್ನು ಜಗತ್ತಿಗೆ ಸಾರಿ ಹೆಣ್ಣು ಮಕ್ಕಳು ಸ್ವಾಭಿಮಾನದಿಂದ ತಲೆ ಎತ್ತಿ ಬದುಕಲು ಅರಿವು ಮೂಡಿಸಿದ ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಸಾಧನೆ ಸಮಾಜದ ಎಲ್ಲಾ ಸುಮುದಾಯದವರಿಗೂ ಮಾರ್ಗದರ್ಶನವಾಗಿದೆ ಎಂದು ಕೊರಟಗೆರೆ ತಾಲೂಕು ಬಲಿಜ ಸಂಘದ ಅಧ್ಯಕ್ಷ ಎನ್. ಪದ್ಮನಾಭ್ ತಿಳಿಸಿದರು.

ಪಟ್ಟಣದಲ್ಲಿ ತಾಲೂಕು ಬಲಿಜ ಮಹಿಳಾ ಸಂಘ ಏರ್ಪಡಿಸಿದ್ದ ಅಕ್ಷರದವ್ವ ತಾಯಿ ಸಾವಿತ್ರಿಬಾಯಿ ಫುಲೆ ಅವರ 193 ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಹೆಣ್ಣು ಮಕ್ಕಳಿಗೆ ಅಕ್ಷರವನ್ನು ಕಲಿಯಲು ನಿರಾಕರಿಸಿದ ಅಂದಿನ ದಿನಮಾನಗಳಲ್ಲಿ ಸಮಾಜಕ್ಕೆ ಎದುರಾಗಿ ಅನೇಕ ತರಹದ ನೋವು, ಆಪತ್ತು, ಅವಮಾನವನ್ನು ಮೆಟ್ಟಿ ನಿಂತು ಹೆಣ್ಣು ಮಕ್ಕಳಿಗಾಗಿಯೇ ಶಾಲೆ ತೆರೆದು ಅಕ್ಷರದ ಜ್ಞಾನವನ್ನು ಉಣಬಡಿಸಿದ ದೇಶದ ಪ್ರಥಮ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರು ಇಂದಿನ ಮಹಿಳೆಯರಿಗೆ ಆದರ್ಶರಾಗಿದ್ದಾರೆ ಎಂದರು.

ಇಂದು ಶಿಕ್ಷಣ ಮತ್ತು ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರು ಸಮಾನ ಹಕ್ಕು ಪಡೆಯಲು ತಾಯಿ ಸಾವಿತ್ರಿಬಾಯಿ ಫುಲೆ ಅವರೇ ಕಾರಣ, ಇಂದು ಹೆಣ್ಣು ಮಕ್ಕಳಿಗೆ ಶಿಕ್ಷಣ ದೊರಕುತ್ತಿರುವುದು ಸಾವಿತ್ರಿಬಾಯಿ ಫುಲೆ ಅವರ ಹೋರಾಟದ ಫಲ ಹಾಗಾಗಿ ಸಾವಿತ್ರಿಬಾಯಿ ಅವರಿಗೆ ಇಂದಿನ ಮಹಿಳೆಯರು ಎಂದೆಂದಿಗೂ ಚಿರೆಋಣಿಯಾಗಿರಬೇಕೆಂದು ತಿಳಿಸಿದರು.

ತಾಲೂಕು ಬಲಿಜ ಮಹಿಳಾ ಸಂಘದ ಅಧ್ಯಕ್ಷ ಗಿರಿಜಮ್ಮ ಕೃಷ್ಣಪ್ಪ ಮಾತನಾಡಿ, ಸಾವಿತ್ರಿಬಾಯಿ ಫುಲೆ ಅವರು ಅಂದಿನ ಕಾಲದ ಸಮಾಜದಲ್ಲಿ ತುಂಬಿರುವ ಮೌಢ್ಯತೆ, ಕಂದಾಚಾರ, ಅಂಧಶ್ರದ್ಧೆ, ಶೋಷಣೆಯಂತಹ ಸಮಸ್ಯೆಗಳ ವಿರುದ್ಧ ತಮ್ಮ ಪತಿ ಜ್ಯೋತಿ ಬಾ ಫುಲೆ ಜೊತೆಗೂಡಿ ಜೀವನದುದ್ದಕ್ಕೂ ಹೋರಾಟ ಮಾಡಿ ಸಮಾಜದ ಕೆಂಗಣ್ಣಿಗೆ ಗುರಿಯಾಗಿ ನೋವು ಅವಮಾನಗಳನ್ನು ಮೆಟ್ಟಿ ನಿಂತು ಶತ ಶತಮಾನಗಳಿಂದ ಶಿಕ್ಷಣದಿಂದ ವಂಚಿತರಾದ ಹೆಣ್ಣು ಮಕ್ಕಳಿಗೆ ಉಚಿತವಾಗಿ ಶಾಲೆ ಪ್ರಾರಂಭಿಸಿ ಅಕ್ಷರ ಕಲಿಸಿದ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಸಮಾಜದ ಸುಧಾರಣೆಗಾಗಿ ಶ್ರಮಿಸಿ ಮಹಾನ್ ವ್ಯಕ್ತಿಯಾಗಿ ಶಿಕ್ಷಣದ ಕ್ರಾಂತಿಯನ್ನು ಸೃಷ್ಠಿಸಿ ದೇಶದ ಮಹಿಳೆ ಗೌರವದಿಂದ ಬಾಳಲು ದಾರಿ ದೀಪವಾದ ಅವರು ದೇಶದ ಪ್ರತಿಯೊಬ್ಬ ಮಹಿಳೆಯರು ಸಾವಿತ್ರಿಬಾಯಿ ಫುಲೆ ಅವರ ಆದರ್ಶದಂತೆ ಬಾಳಬೇಕು ಆಗ ಮಾತ್ರ ಅವರ ಹೋರಾಟಕ್ಕೆ ಆರ್ಥ ದೊರೆತಂತಾಗುತ್ತದೆ ಎಂದು ತಿಳಿಸಿದರು.

ತಾಲೂಕು ಮಹಿಳಾ ಬಲಿಜ ಸಂಘದ ಗೌರಾವಾದ್ಯಕ್ಷೇ ಮಂಜುಳಾ ಗೋವಿಂದರಾಜು ಮಾತನಾಡಿ, ಭಾರತ ಸರ್ಕಾರವು ಜನವರಿ 3 ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಮಾತ್ರ ಸಾವಿತ್ರಿಬಾಯಿ ಫುಲೆ ಅವರ ಜಯಂತಿಯನ್ನು ಆಚರಿಸುವಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ ಆದರೆ ದೇಶದ ಎಲ್ಲಾ ಹೆಣ್ಣು ಮಕ್ಕಳ ಶಿಕ್ಷಣಕ್ಕಾ ಹೋರಾಟಮಾಡಿ ಹೆಣ್ಣು ಮಕ್ಕಳು ಕೇವಲ ಶಿಕ್ಷಣ ಕ್ಷೇತ್ರದಲ್ಲದೆ ಚಿಕ್ಕ ವಯಸ್ಸಿನಲ್ಲಿ ವಿವಾಹವಾಗಿ ವಿಧವೆಯಾದ, ಅತ್ಯಾಚಾರಕ್ಕೆ ಒಳಗಾದ ಹೆಣ್ಣು ಮಕ್ಕಳಿಗೆ ಪುನರ್ವಸತಿಕೇಂದ್ರ ಸ್ಥಾಪನೆ, ವಿವಾಹೇತರ ಸಂಬಂಧದಿಂದ ಜನಿಸಿದ ಮಕ್ಕಳಿಗೆ ಶಿಶುಕೇಂದ್ರಗಳನ್ನು ಸ್ಥಾಪಿಸಿದ ತಲಸಮುದಾಯಗಳ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಬೆಳವಣಿಗೆಗಳು ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಸೇವೆ ಸಲ್ಲಿಸಿದ ಅವರ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಮಾಡಲು ಆದೇಶ ಮಾಡಬೇಕೆಂದು ಸಭೆಯಲ್ಲಿ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ತಾಲೂಕು ಮಹಿಳಾ ಬಲಿಜ ಸಂಘದ ಉಪಾಧ್ಯಕ್ಷೆ ಕಲ್ಪನಾಲೋಕೇಶ್, ಕಾರ್ಯದರ್ಶಿ ಗೀತಾಚಂದ್ರಶೇಖರ್, ಸದಸ್ಯರಾದ ಯಶೋಧಾ ಪುರುಷೋತ್ತಮ್, ನಾಗಮಣಿ ಪದ್ಮನಾಭ್, ಲತಾರಮೇಶ್, ರೋಹಿಣಿಚಂದ್ರಶೇಖರ್, ತುಳಸಿವೆಂಕಟೇಶ್, ಲಕ್ಷ್ಮೀಕಾಮರಾಜು, ಲಕ್ಷ್ಮೀದಿಲೀಪ್, ಮಂಜುಳಾಸಂಜಯ್, ಕಾತ್ಯಾಯಿನಿಶಿವು, ಸರಸ್ವತಿ ಶ್ರೀನಿವಾಸ್ ಸೇರಿದಂತೆ ಇನ್ನಿತರ ಸದಸ್ಯರು ಭಾಗವಹಿಸಿದ್ದರು.