ಸಾರಾಂಶ
ಸರಳಾತಿ ಸರಳ ಜೀವನ ಮತ್ತು ಅರ್ಥಪೂರ್ಣ ಬೋಧನೆಗಳ ಮೂಲಕವೇ ಜನಮನಗೆದ್ದಿದ್ದ ಶ್ರೀಗಳ ಒಂದೊಂದು ಮಾತು ಮಾಣಿಕ್ಯ
ಶಿರಹಟ್ಟಿ: ಅತ್ಯಂತ ಸರಳವಾಗಿ ಜೀವನ ನಡೆಸಿದ ಲಿಂಗೈಕ್ಯ ಶ್ರೀ ಸಿದ್ದೇಶ್ವರ ಸ್ವಾಮಿಗಳು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಎಲ್ಲ ಜಾತಿ, ಜನಾಂಗ, ಧರ್ಮದ ಭಕ್ತರ ಮನದಲ್ಲಿ ದೇವರಾಗಿ ನೆಲೆಸಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತ ತಾಲೂಕು ಘಟಕದ ಅಧ್ಯಕ್ಷ ಎಸ್.ಬಿ. ಹೊಸೂರ ಹೇಳಿದರು.
ಮಂಗಳವಾರ ಪಟ್ಟಣದ ದೇವರಾಜ ಅರಸು ಬಾಲಕರ ವಸತಿ ನಿಲಯದಲ್ಲಿ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮಿಗಳ ಪ್ರಥಮ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಶತಮಾನದ ಸಂತ ದೇಶ ಕಂಡ ಎರಡನೇ ವಿವೇಕಾನಂದ ಎಂದೇ ಪೂಜಿಸಲ್ಪಡುವ ಸಿದ್ದೇಶ್ವರ ಶ್ರೀಗಳು ನಡೆದಾಡುವ ದೇವರು ಎಂದರು.
ಸರಳಾತಿ ಸರಳ ಜೀವನ ಮತ್ತು ಅರ್ಥಪೂರ್ಣ ಬೋಧನೆಗಳ ಮೂಲಕವೇ ಜನಮನಗೆದ್ದಿದ್ದ ಶ್ರೀಗಳ ಒಂದೊಂದು ಮಾತು ಮಾಣಿಕ್ಯ ಎಂದು ತಿಳಿಸಿದರು. ರಾಜಕೀಯ, ಸಂಘ ಸಂಸ್ಥೆ ಮತ್ತು ಪ್ರಚಾರದಿಂದ ಅಂತರ ಕಾಯ್ದುಕೊಂಡಿದ್ದ ಅವರು ಬಸವ ತತ್ವ ಅನುಯಾಯಿಗಳಾಗಿದ್ದರು.ಅವರು ಹುಟ್ಟಿದ ನಡೆದಾಡಿದ ಈ ನಾಡಿನಲ್ಲಿ ಹುಟ್ಟಿದ ನಾವೆಲ್ಲರೂ ಧನ್ಯರು, ಭಾಗ್ಯವಂತರು ಎಂದು ಹೇಳಿದರು.ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ವಿಜಯಪುರದ ಜೀವಂತ ದೇವರು ಎಂದು ಪ್ರಸಿದ್ದರಾದವರು. ದೈವಭಕ್ತಿ ಎಂಬ ನೈಜ ಮತ್ತು ನೇರ ಉದಾಹರಣೆಯಾಗಿದೆ. ಅವರ ಭಾಷಣಗಳು ಪ್ರತಿಯೊಬ್ಬರ ಜೀವನದಲ್ಲಿ ಅದ್ಭುತ ರೂಪಾಂತರ ತರುತ್ತವೆ ಮತ್ತು ಅಂತಿಮವಾಗಿ ಶಾಂತಿಯುತ ಮತ್ತು ಸಂತೋಷದ ಜೀವನಕ್ಕೆ ಕಾರಣವಾಗುತ್ತದೆ ಎಂದು ತಿಳಿಸಿದರು.
ಶ್ರೀಗಳು ತೋರಿದ ನಿಸ್ವಾರ್ಥ ಸೇವೆ, ಸರಳ ಬದುಕನ್ನು ನಮ್ಮ ಬದುಕಿನಲ್ಲಿ ಪ್ರಾಮಾಣಿಕವಾಗಿ ಅಳವಡಿಸಿಕೊಂಡರೆ ಸುಂದರ ಸಮಾಜದ ನಿರ್ಮಾಣ ಮಾಡಬಹುದು ಎಂದು ಕರೆ ನೀಡಿದರು.ಶಿಕ್ಷಕ ಸುರೇಶ ಸರ್ಜಾಪೂರ ಹಾಗೂ ದೇವರಾಜ ಅರಸು ವಸತಿ ನಿಲಯದ ನೂರಾರು ವಿದ್ಯಾರ್ಥಿಗಳು ಇದ್ದರು.