ರಾಜ್ಯ ಸರ್ಕಾರ ರೈತರ ಮರೆತಿದೆ: ಕನಕಂಚೇನಹಳ್ಳಿ ಪ್ರಸನ್ನಕುಮಾರ್ ಬೇಸರ

| Published : Jan 04 2024, 01:45 AM IST

ಸಾರಾಂಶ

ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ನೆರವಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಬರಬೇಕು. ಆದರೆ ರಾಜ್ಯ ಸರ್ಕಾರ ರೈತರನ್ನು ಮರೆತಿದೆ ಎಂದು ರೈತ ಸಂಘದ ರಾಜ್ಯ ಸಂಚಾಲಕ ಕನಕಂಚೇನಹಳ್ಳಿ ಪ್ರಸನ್ನಕುಮಾರ್ ಬೇಸರ ವ್ಯಕ್ತಪಡಿಸಿದರು. ಅರಸೀಕೆರೆಯ ನಡೆದ ವಿಶ್ವ ರೈತ ದಿನಾಚರಣೆಯಲ್ಲಿ ಮಾತನಾಡಿದರು.

ವಿಶ್ವ ರೈತ ದಿನಾಚರಣೆ । ಭರವಸೆಗಳ ಈಡೇರಿಕೆಯಲ್ಲಿ ಮಗ್ನವಾಗಿದೆ । ಅನ್ನದಾತನಿಗೆ ನೆರವಾಗಬೇಕುಕನ್ನಡಪ್ರಭ ವಾರ್ತೆ ಅರಸೀಕೆರೆ

ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ನೆರವಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಬರಬೇಕು. ಆದರೆ ರಾಜ್ಯ ಸರ್ಕಾರ ರೈತರನ್ನು ಮರೆತಿದೆ ಎಂದು ರೈತ ಸಂಘದ ರಾಜ್ಯ ಸಂಚಾಲಕ ಕನಕಂಚೇನಹಳ್ಳಿ ಪ್ರಸನ್ನಕುಮಾರ್ ಬೇಸರ ವ್ಯಕ್ತಪಡಿಸಿದರು.

ತಾಲೂಕಿನ ಕನಕಂಚೇನಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಶ್ರೀರಂಗನಾಥಸ್ವಾಮಿ ದೇಗುಲದ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವ ರೈತ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಬರಗಾಲದಿಂದ ರೈತ ತನ್ನಲ್ಲಿದ್ದ ಹಣವನ್ನು ಬೀಜ ಗೊಬ್ಬರ ಹಾಕಿ ಎಲ್ಲವನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾನೆ ಇಂತಹ ಸಂದರ್ಭಗಳಲ್ಲಿ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕಾದ ರಾಜ್ಯ ಸರ್ಕಾರ ಚುನಾವಣೆಯ ಬರವಸೆಗಳನ್ನು ಈಡೇರಿಸುವ ಗುಂಗಿನಲ್ಲಿ ತೇಲಾಡುತ್ತಿದ್ದು ರೈತರನ್ನು ಮರೆತಿದ್ದಾರೆ ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಕೂಡ ಕಣ್ಮುಚ್ಚಿ ಕೊಳುತ್ತಿರುವುದು ರೈತರನ್ನು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು

ಬರಗಾಲ ಎಂದು ಘೋಷಣೆ ಮಾಡಿದರೆ ಸಾಲದು ಬರಗಾಲದಿಂದ ಸಾಲದ ಕೂಪಕ್ಕೆ ಸಿಲುಕಿರುವ ರೈತನನ್ನು ಕಾಪಾಡಬೇಕು. ಅದಕ್ಕೆ ಬೇಕಾದ ಅಗತ್ಯ ನೆರವುಗಳನ್ನು ಒದಗಿಸಬೇಕು ಜಾನುವಾರಿಗೆ ಮೇವು ಮತ್ತು ನೀರನ್ನು ಒದಗಿಸಬೇಕು. ಗೋಶಾಲೆಗಳನ್ನು ತೆರೆಯಬೇಕು. ಇಷ್ಟೆಲ್ಲ ಮಾಡಬೇಕಾದ ಸರ್ಕಾರ ವ್ಯರ್ಥ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿದ್ದು ತಕ್ಷಣವೇ ಎಚ್ಚೆತ್ತುಕೊಳ್ಳದಿದ್ದಲ್ಲಿ ಇದಕ್ಕೆ ತಕ್ಕ ಉತ್ತರವನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು

ಕಳೆದ ವರ್ಷ ೧ ಕ್ವಿಂಟಾಲ್ ಕೊಬ್ಬರಿಗೆ ೧೯-೨೦ ಸಾವಿರ ರು. ಆಸುಪಾಸಿನಲ್ಲಿದ್ದ ಕೊಬ್ಬರಿ ಬೆಲೆ ೭-೮ ಸಾವಿರ ರು.ಗೆ ಕುಸಿಯುವ ಮೂಲಕ ಪಾತಳಕ್ಕೆ ಇಳಿದಿದ್ದು, ಇದರಿಂದ ತೆಂಗು ಬೆಳೆಯನ್ನೆ ನಂಬಿ ಬದುಕು ನಡೆಸುತ್ತಿದ್ದ ಕೊಬ್ಬರಿ ಬೆಳೆಗಾರ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು ಚುನಾವಣಾ ಸಂದರ್ಭದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ನಾವು ಅಧಿಕಾರಕ್ಕೆ ಬಂದ ಮರುಕ್ಷಣದಲ್ಲೆ ಕ್ವಿಂಟಾಲ್ ಕೊಬ್ಬರಿಯನ್ನು ೧೮೦೦೦ ರು.ಗೆ ಏರಿಸುವುದಾಗಿ ಹೇಳಿದ್ದರು, ಅದು ಇದುವರೆಗೆ ಈಡೇಲ್ಲ್ಲ ಎಂದು ದೂರಿದರು

ಬೇಲೂರು ತಾಲೂಕು ಹಳೇಬೀಡು ಹೋಬಳಿಯ ೨.೫೦೦ ಎಕರೆ ಸರ್ಕಾರಿ ಜಮೀನಿದ್ದು ಅದನ್ನು ೬೫೦ ರೈತರು ಈ ಹಿಂದೆ ಉಳುಮೆ ಮಾಡುತ್ತಿದ್ದು ಮತ್ತೆ ಉಳುಮೆ ಮಾಡಲು ಅವಕಾಶ ನೀಡಿ ಅವರಿಗೆ ಮಂಜೂರಾತಿ ಪತ್ರವನ್ನು ನೀಡಬೇಕೆಂದು ಈಗಾಗಲೇ ೪ ಬಾರಿ ಬೆಂಗಳೂರಿಗೆ ಪಾದಯಾತ್ರೆ ಹೋಗಿ ಮಾನ್ಯ ರಾಜ್ಯಪಾಲರಿಗೆ ಹಾಗೂ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದರೂ ಬೆಳಗಾವಿ ಸುವರ್ಣಸೌಧ ಎದುರು ಬೃಹತ್ ಪ್ರತಿಭಟನೆ ನಡೆಸಿದರೂ ಯಾವುದೇ ಪ್ರಯೇಜನವಾಗಿಲ್ಲ ಎಂದು ಆರೋಪಿಸಿದರು.

ನಾಡುಕಂಡ ಜನಪರ, ರೈತಪರ ಹೋರಾಟಗಾರ ಪ್ರೊ,ನಂಜುಂಡಸ್ವಾಮಿ ಹಾಕಿಕೊಟ್ಟ ಮಾರ್ಗದಲ್ಲಿ ಸಂಘವನ್ನು ನಡೆಸಿಕೊಂಡು ಬರಲಾಗುತ್ತಿದ್ದು ಜೀವನದ ಕಡೇ ಕ್ಷಣದವರೆಗೂ ರೈತರ ಏಳಿಗೆಗಾಗಿ ಹೋರಾಟ ನಡೆಸುತ್ತೇನೆ ಎಂದು ಭರವಸೆ ನೀಡಿದರು..

ನೇಗಿಲು, ನೊಗ, ಕುಂಟೆ, ಎತ್ತುಗಾಡಿ ಸೇರಿ ಕೃಷಿ ಪರಿಕರಗಳನ್ನು ಪೂಜಿಸಲಾಯಿತು. ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ರಾಮಚಂದ್ರ, ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಶಾಂತಕುಮಾರ್‌, ರೈತ ಸಂಘದ ಮುಖಂಡರಾದ ಅಯೂಬ್ ಪಾಶ, ಏಜಾಜ್ ಪಾಶ, ನಂಜಮ್ಮ,ಮಹಮ್ಮದ್ ದಸ್ತಗಿರಿ , ಚಂದ್ರಪ್ಪ ರೆಡ್ಡಿ ,ಅಬ್ದುಲ್ ಕುನ್ನಿ, ಹನುಮಂತ, ಮಮತಾ, ಸುರೇಶ್‌, ಕಾಂತರಾಜು, ಶಿವಣ್ಣ, ಗಂಗಣ್ಣ, ಶಂಕ್ರಪ್ಪ ಇದ್ದರು.ರೈತ ಸಂಘ ಬುಧವಾರ ಆಯೋಜಿಸಿದ್ದ ವಿಶ್ವ ರೈತ ದಿನಾಚರಣೆ ಕಾರ್ಯಕ್ರಮವನ್ನು ರೈತ ಸಂಘದ ಜವೇನಹಳ್ಳಿ ನಿಂಗಪ್ಪ ಉದ್ಘಾಟಿಸಿದರು.