ಸಾರಾಂಶ
ಕುಷ್ಟಗಿ: ಇದೇ ಜ.22ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೊಳ್ಳಲಿದ್ದು, ಅಂದು ಸಂಜೆ ರಾಮನ ಹೆಸರಿನಲ್ಲಿ ಐದು ದೀಪಗಳನ್ನು ಬೆಳಗಿಸಬೇಕು ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.ಪಟ್ಟಣದ ರಾಘವೇಂದ್ರ ಮಠದಲ್ಲಿ ಅಯೋಧ್ಯೆಯಿಂದ ಬಂದಿರುವ ಮಂತ್ರಾಕ್ಷತೆ, ಆಮಂತ್ರಣ ಪತ್ರಿಕೆಯನ್ನು ತಾಲೂಕಿನ ಪ್ರತಿಯೊಂದು ಮನೆಗೂ ತಲುಪಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಭಾರತೀಯರ ಕನಸಿನ ರಾಮ ಮಂದಿರ ಮೂಲಸ್ಥಳದಲ್ಲಿಯೇ ನಿರ್ಮಾಣಗೊಂಡು ಲೋಕಾರ್ಪಣೆಗೊಳ್ಳುತ್ತಿರುವುದು ಸಂತಸದ ಕ್ಷಣವಾಗಿದೆ ಎಂದರು.ರಾಮ ಹಿಂದೂಗಳ ಆದರ್ಶ ವ್ಯಕ್ತಿಯಾಗಿದ್ದು, ಮಂದಿರ ದೇಶದಲ್ಲಿ ಕೋಟಿ ಕೋಟಿ ಇದ್ದರೂ ಮೂಲಸ್ಥಳದಲ್ಲಿ ರಾಮನ ವಿಗ್ರಹ ಪ್ರತಿಷ್ಠಾಪಿಸಬೇಕು ಎಂದು ಹೋರಾಟ ನಡೆದಿತ್ತು. ಸುದೀರ್ಘ ಹೋರಾಟದ ನಂತರ ಭವ್ಯ ರಾಮಮಂದಿರ ಉದ್ಘಾಟನೆಯಾಗಿ ಬಾಲರಾಮನ ಪ್ರತಿಷ್ಠಾಪನೆಯಾಗುತ್ತಿರುವುದು ಸಂತೋಷದ ಈ ಕ್ಷಣಕ್ಕೆ ದೇಶದ ಜನರು ಸಾಕ್ಷಿಯಾಗಲು ಪ್ರತಿ ಮನೆಗೆ ಮಂತ್ರಾಕ್ಷತೆ ತಲುಪಿಸುವ ಮೂಲಕ ಪುಣ್ಯದ ಕೆಲಸದಲ್ಲಿ ಎಲ್ಲರು ಒಗ್ಗೂಡಬೇಕು ಎಂದರು.ಯುವಮೋರ್ಚಾ ಅಧ್ಯಕ್ಷ ಉಮೇಶ ಯಾದವ ಮಾತನಾಡಿದರು.ಈ ಸಂದರ್ಭದಲ್ಲಿ ತಮ್ಮಣ್ಣ ಆಚಾರ್ಯ, ಚಂದ್ರಕಾಂತ್ ವಡ್ಡಿಗೇರಿ, ಜಯತೀರ್ಥರಾವ, ಭೀಮಣ್ಣ ಕುಲಕರ್ಣಿ, ಬಸನಗೌಡ ಪಾಟೀಲ್, ದೊಡ್ಡಬಸವ ಸುಂಕದ, ಜೆ.ಜೆ. ಆಚಾರ್ಯ ಉಪಸ್ಥಿತರಿದ್ದರು.