ಸಾರಾಂಶ
- ಶ್ರೀಕಂಠೇಶ್ವರ ದೇವಾಲಯದ ಅಂಧಕಾಸುರ ಸಂಹಾರ ಪ್ರಕರಣ
ಫೋಟೋ- 3ಎಂವೈಎಸ್ 55- ನಂಜನಗೂಡಿನಲ್ಲಿ ನಡೆದ ಶಾಂತಿಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಲೋಕನಾಥ್ ಮಾತನಾಡಿದರು. ಹೆಚ್ಚುವರಿ ಎಸ್ಪಿ ಡಾ. ನಂದಿನಿ, ಉಪವಿಭಾಗಾಧಿಕಾರಿ ರಕ್ಷಿತ್, ತಹಸೀಲ್ದಾರ್ ಶಿವಪ್ರಸಾದ್ ಇದ್ದರು.ಕನ್ನಡಪ್ರಭ ವಾರ್ತೆ ನಂಜನಗೂಡುಶ್ರೀಕಂಠೇಶ್ವರಸ್ವಾಮಿ ದೇವಾಲಯದ ವತಿಯಿಂದ ಡಿ. 26ರಂದು ನಡೆದ ಅಂಧಕಾಸುರನ ಸಂಹಾರ ಧಾರ್ಮಿಕ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ನಡೆದು ಒಂದು ವಾರದ ಬಳಿಕ ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಲೋಕನಾಥ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಶಾಂತಿ ಸಭೆ ಫಲ ಪ್ರದವಾಗಲಿಲ್ಲ.
ಪಟ್ಟಣದ ಮಿನಿ ವಿಧಾನಸೌಧದ ತಾಲೂಕು ಕಚೇರಿಯ ಸಭಾಂಗಣದಲ್ಲಿ ನಡೆದ ಶಾಂತಿಸಭೆಯಲ್ಲಿ ದಲಿತಪರ, ರೈತ ಪರ ಸಂಘಟನೆಗಳ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು. ಶ್ರೀಕಂಠೇಶ್ವರ ಭಕ್ತರಿಗೆ ಶಾಂತಿ ಸಭೆ ನಡೆಯುವ ಬಗ್ಗೆ ಯಾವುದೇ ಮಾಹಿತಿ ಇಲ್ಲ, ಜಿಲ್ಲಾಡಳಿತ ಏಕಪಕ್ಷೀಯವಾಗಿ ಸಭೆ ನಡೆಸಲು ಮುಂದಾಗುತ್ತಿದೆ ಎಂದು ಆರೋಪಿಸಿ ಶ್ರೀಕಂಠೇಶ್ವರ ಭಕ್ತರು ಸಭೆಯಿಂದ ಹೊರ ನಡೆಯಲು ಮುಂದಾದರು.ಬಿಜೆಪಿ ನಗರಾಧ್ಯಕ್ಷ ಶ್ರೀನಿವಾಸರೆಡ್ಡಿ ಮಾತನಾಡಿ, ಅಂಧಕಾಸುರನ ಸಂಹಾರ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿ ದೇವರ ಉತ್ಸವ ಮೂರ್ತಿಗಳಿಗೆ ನೀರು ಎರಚಿ ಅಪಚಾರ ಎಸಗಿದ್ದಾರೆ ಎಂದು ಆಪಾದಿಸಿರುವ ಗುಂಪಿನ ಮುಖಂಡರಿಗೆ ಸರಿಯಾದ ಮಾಹಿತಿ ನೀಡಿದೇ ಅವ್ಯವಸ್ಥೆಯ ಸಭೆಯಾಗಿದೆ. ಕೆಲವರಿಗೆ ಮಾಹಿತಿ ಕೊಟ್ಟು ಇನ್ನು ಕೆಲವರಿಗೆ ಮಾಹಿತಿಯನ್ನೇ ಕೊಟ್ಟಿಲ್ಲ. ನಾನು ಯಾವುದೋ ಕೆಲಸದ ನಿಮಿತ್ತ ಮಿನಿ ವಿಧಾನಸೌಧಕ್ಕೆ ಬಂದವನು ಸಭೆ ನಡೆಯುವುದು ತಿಳಿದು ಒಳಗಡೆ ಬಂದಿದ್ದೇನೆ. ಈ ಬಗ್ಗೆ ಯಾರೂ ಧ್ವನಿ ಎತ್ತುತ್ತಿದ್ದಾರೋ ಅವರಿಗೆ ಸಭೆಯ ಮಾಹಿತಿ ಇಲ್ಲ. ಹಾಗಾಗಿ ಮತ್ತೊಂದು ದಿನ ಶಾಂತಿ ಸಭೆ ಆಯೋಜಿಸುವಂತೆ ಆಕ್ಷೇಪ ವ್ಯಕ್ತಪಡಿಸಿ ಸಭೆಯಿಂದ ಹೊರ ನಡೆದರು.
ಈ ವೇಳೆ ಅವರನ್ನು ಹಿಂಬಾಲಿಸಿದ ಮುಖಂಡರನ್ನು ಮನವೊಲಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಲೋಕನಾಥ್, ಎಲ್ಲರ ಅಹವಾಲು ಆಲಿಸಿ ಸಮಸ್ಯೆ ಇತ್ಯರ್ಥ ಪಡಿಸುವುದೇ ನಮ್ಮ ಉದ್ದೇಶವಾಗಿದೆ. ಎಲ್ಲರಿಗೂ ಮಾಹಿತಿ ತಲುಪಿಸುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡಿದೆ. ಸಭೆಗೆ ಬಂದು ಅರ್ಧಕ್ಕೆ ಎದ್ದು ಹೋಗುವುದು ಸಭಾ ಗೌರವಲ್ಲ, ಸಭೆಯಲ್ಲಿ ಕುಳಿತು ಸಭೆಯನ್ನು ಆಲಿಸಿ ಎಂದು ಎದ್ದು ಹೊರ ಹೋಗುತ್ತಿದ್ದ ಭಕ್ತಮಂಡಳಿಯ ಮುಖಂಡರನ್ನು ಸಭೆಯಲ್ಲಿ ಕೂರುವಂತೆ ಮನವಿ ಮಾಡಿದರು.ಇದೇ ವೇಳೆ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ನಂದಿನಿ ಮಾತನಾಡಿ, ಎರಡು ಕಡೆಯಿಂದ ಎಫ್ ಐಆರ್ ದಾಖಲಾದ ಮೇಲೆ ನಮಗೆ ಕೆಲವು ರೀತಿ ನೀತಿ ಇರುತ್ತವೆ. ಕಾನೂನು ಚೌಕಟ್ಟಿನಲ್ಲಿ ನಾವು ಕೆಲಸ ಮಾಡಬೇಕಾಗಿರುವುದರಿಂದ ಇದಕ್ಕೆ ಕಾಲಾವಕಾಶ ಬೇಕಿದೆ. ಯಾರ ಭಾವನೆಗಳಿಗೆ ಧಕ್ಕೆಯಾಗಿದೆ ಎಂಬುದಕ್ಕೆ ನ್ಯಾಯಾಲಯಕ್ಕೆ ಸಾಕ್ಷ್ಯ ಒದಗಿಸಲು ಅಧಿಕೃತ ದಾಖಲೆಗಳನ್ನು ಕಲೆ ಹಾಕಲು ತನಿಖೆ ನಡೆಯುತ್ತಿದೆ. ಧಾರ್ಮಿಕ ವಿಚಾರ ಬಂದಾಗ ನಾವು ಬಹಳ ಸೂಕ್ಷ್ಮವಾಗಿ ಕಾರ್ಯನಿರ್ವಹಣೆ ಮಾಡಬೇಕಾಗುತ್ತದೆ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಆಲೋಚನೆಗಳಿಗೆ ತಕ್ಕಂತೆ ಹೇಗೇಗೋ ಸಂದೇಶಗಳನ್ನು ಭಿತ್ತರಿಸುವುದು ಕೂಡ ನಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆ ಅವರಿಗೆ ತಿಳುವಳಿಕೆ ನೀಡಲಾಗುತ್ತಿದ್ದು, ಆದರೂ ಸಹ ಮತ್ತೆ ಅದೇ ತಪ್ಪು ಮರುಕಳಿಸಿದರೆ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಎಲ್ಲ ದೃಷ್ಟಿಕೋನದಿಂದ ತನಿಖೆ ಹಂತದಲ್ಲಿರುವುದರಿಂದ ಎಲ್ಲರೂ ಸಹಕರಿಸಬೇಕು. ಜೊತೆಗೆ ನಂಜನಗೂಡು ಬಂದ್ ಗೆ ಕರೆ ನೀಡಿರುವುದನ್ನು ಹಿಂಪಡೆಯುವಂತೆ ಮನವಿ ಮಾಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಲೋಕನಾಥ್ ಮಾತನಾಡಿ, ಎರಡು ಗುಂಪಿನ ನಡುವೆ ಭಾವನೆಗಳ ನಡುವೆ ಸಂಘರ್ಷ ಹೊರತುಪಡಿಸಿ ಪರಸ್ಪರ ಅನ್ಯೋನ್ಯತೆಯಿಂದ ಒಗ್ಗಟ್ಟಾಗಿ ಇರುವುದನ್ನು ಈ ಸಭೆಯಲ್ಲಿ ಗಮನಿಸಿದ್ದೇನೆ. ಘಟನೆ ಕುರಿತು ತನಿಖೆ ನಡೆಯುತ್ತಿರುವುದರಿಂದ ಸತ್ಯಾಸತ್ಯತೆ ಹೊರಬರಲಿದೆ. ಅಲ್ಲದೆ ಕಡ್ಡಾಯವಾಗಿ ತಪ್ಪಿತಸ್ಥರ ಮೇಲೆ ಶಿಕ್ಷೆಯಾಗಲಿದೆ, ಹಾಗಾಗಿ ನಂಜನಗೂಡು ಬಂದ್ ಕರೆ ನೀಡಿ ಅನುಮತಿ ನೀಡುವಂತೆ ಪತ್ರ ಬರೆದಿರುವವರು ಬಂದ್ ಹಿಂಪಡೆಯುವಂತೆ ಮನವಿ ಮಾಡಿಕೊಂಡರು.ಇದಕ್ಕೆ ಪ್ರತಿಕ್ರಿಯಿಸಿದ ನಗರಸಭಾ ಸದಸ್ಯ ಕಪಿಲೇಶ್, ಬಂದ್ ಆಚರಿಸುವ ಕುರಿತು ಹಲವು ಸಂಘಟನೆಗಳು, ಸಂಘ ಸಂಸ್ಥೆಯವರು ಕೂಡಿ ನಿರ್ಧಾರ ಮಾಡಿರುವುದರಿಂದ ಸಭೆಯಲ್ಲಿ ಇರುವ ನಾವು ನಾಲ್ಕು ಜನ ನಿರ್ಧಾರ ತಿಳಿಸಲು ಸಾಧ್ಯವಿಲ್ಲ. ಎಲ್ಲರೊಂದಿಗೂ ಚರ್ಚಿಸಿ ನಮ್ಮ ಅಂತಿಮ ನಿರ್ಧಾರ ಪ್ರಕಟಿಸುತ್ತೇವೆ, ಆದ್ದರಿಂದ ನಮಗೆ ಕಾಲಾವಕಾಶ ಬೇಕು ಎಂದು ತಿಳಿಸಿದರು.
ತಪ್ಪು ನಡೆದಿದ್ದರೆ ಶಿಕ್ಷೆಗೆ ಗುರಿ ಪಡಿಸಿಇದಕ್ಕೂ ಮುನ್ನ ಎಂಜಲು ನೀರು ಎರಚಲಾಗಿದೆ ಎಂದು ವಿಷಯವನ್ನು ತಿರುಚಲಾಗಿದೆ. ಸತ್ಯಾಸತ್ಯತೆಯನ್ನು ತನಿಖೆ ಮೂಲಕ ಬಯಲಿಗೆಳೆದು ಯಾರೇ ತಪ್ಪೆಸಗಿದ್ದರೂ ಶಿಕ್ಷೆಗೆ ಗುರಿಪಡಿಸಿ ಎಂದು ದಸಂಸ ಜಿಲ್ಲಾ ಸಂಚಾಲಕ ಮಲ್ಲೇಶ್, ನಾರಾಯಣ, ಸುರೇಶ್ ಒತ್ತಾಯಿಸಿದರು.
ತಾಪಂ ಮಾಜಿ ಅಧ್ಯಕ್ಷ ಬಿ.ಎಂ. ನಾಗೇಶ್ ರಾಜ್ ಮಾತನಾಡಿ, ಮಹಿಷಾಸುರ ರಾಕ್ಷಸನೋ, ರಾಜನೋ ಎಂಬ ಬಗ್ಗೆ ಇನ್ನೂ ವ್ಯಾಖ್ಯಾನ ನಡೆಯುತ್ತಿದೆ. ಇಂತಹ ವಿವಾದಿತ ವ್ಯಕ್ತಿಯ ಭಾವಚಿತ್ರವಿಟ್ಟು ಸಂಹಾರ ಮಾಡುವ ಕಾರ್ಯಕ್ಕೆ ನಾವು ಆಕ್ಷೇಪ ವ್ಯಕ್ತಪಡಿಸಿದ್ದೇವು. ಅರ್ಚಕರು ತಾಳ್ಮೆಯಿಂದ ನಡೆದುಕೊಳ್ಳದೇ ಗೊಂದಲ ಸೃಷ್ಟಿಸಿದರು ಎಂದು ಆಪಾದಿಸಿದ ಅವರು, ಮಹಿಷಾಸುರನಿಗೂ, ನಂಜುಂಡೇಶ್ವರನಿಗೂ ಸಂಬಂಧವೇ ಇಲ್ಲ. ಅರ್ಚಕರು ಮಹಿಷಾಸುರ ಚಿತ್ರ ಬಳಸಿ ನಂಜುಂಡೇಶ್ವರನಿಗೆ ಅಪಮಾನ ಮಾಡಿದ್ದಾರೆ. ಹಾಗಾಗಿ ಅರ್ಚಕರು ಹಾಗೂ ದೇವಾಲಯದ ಇಓ ಕಾರ್ಯ ನಿರ್ವಹಣಾಧಿಕಾರಿಯನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿದರು.ದೇವಾಲಯದ ಕೈಪಿಡಿಯಂತೆ ಆಚರಣೆ
ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಪ್ರಧಾನ ಆಗಮಿಕ ಜೆ. ನಾಗಚಂದ್ರ ದೀಕ್ಷಿತ್ ಮಾತನಾಡಿ, ಮುಜರಾಯಿ ಇಲಾಖೆ ಹೊರತಂದಿರುವ ದೇವಾಲಯದ ಕೈಪಿಡಿಯಂತೆಯೇ ಎಲ್ಲ ಧಾರ್ಮಿಕ ಆಚರಣೆಗಳನ್ನು, ಸಂಪ್ರದಾಯ ಬದ್ದವಾಗಿ ಉತ್ಸವಾಧಿಗಳನ್ನು ಮಾಡಿಕೊಂಡು ಬರಲಾಗುತ್ತಿದೆ. ನಾವು ಕೈಪಿಡಿಯಲ್ಲಿರುವಂತೆ ದೇವರ ಕಾರ್ಯ ಹೊರತುಪಡಿಸಿ ಬೇರೆ ಕೆಲಸ ಮಾಡಿಲ್ಲ ಎಂದು ಹೇಳಿದರು.ಹಿರಿಯ ಅರ್ಚಕ ನೀಲಕಂಠ ದೀಕ್ಷಿತ್ ಮಾತನಾಡಿ, ನಾವು ತಲೆ ತಲಾಂತರಗಳಿಂದ ಇದೇ ಚಿತ್ರವನ್ನು ಬಳಸಿಕೊಂಡು ಅಂಧಕಾಸುರನ ವಧೆ ಸಂಹಾರ ಮಾಡುವ ಕಾರ್ಯ ಮಾಡಿಕೊಂಡು ಬರಲಾಗುತ್ತಿದೆ. ನಂಜನಗೂಡಿನಲ್ಲಿ ಮಾತ್ರವಲ್ಲದೇ, ದಕ್ಷಿಣ ಭಾರತದ ಎಲ್ಲ ಶಿವ ದೇವಾಲಯಗಳಲ್ಲಿ ತಮಿಳುನಾಡಿನ ಚಿದಂಬರಂ, ತಲಕಾಡು, ಚಾಮುಂಡಿಬೆಟ್ಟ, ಮೈಸೂರು ಅರಮನೆಯಲ್ಲೂ ಈ ಕಾರ್ಯ ಮಾಡಲಾಗುತ್ತಿದೆ. ಇದು ಅಂಧಕಾಸುರನ ಸಂಹಾರವೇ ಹೊರತು ಮಹಿಷಾಸುರ ಸಂಹಾರ ಅಲ್ಲ, ಕಾರ್ಯಕ್ರಮದಲ್ಲಿ ದೇವರ ಮೇಲೆ ನೀರು ಎರಚಿರುವುದು ಸತ್ಯ, ನಾವು ಎಂಜಲು ನೀರು ಎಂದು ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.
ತಿಪ್ಪೆ ಸಾರಿಸುವ ಕೆಲಸ ಬೇಡನಗರಸಭಾ ಸದಸ್ಯ ಕಪಿಲೇಶ್ ಮಾತನಾಡಿ, ನಂಜನಗೂಡು ಬಂದ್ ಕರೆ ನೀಡಿ ಗೃಹ ಸಚಿವರಿಗೆ ದೂರು ನೀಡಿದ ಮೇಲೆ ಜಿಲ್ಲಾಡಳಿತಕ್ಕೆ ಶಾಂತಿ ಸಭೆ ನೆನಪಾಗಿದೆ. ಪರಿಸ್ಥಿತಿ ಕೈಮೀರಿದ ಮೇಲೆ ಸಭೆ ಕರೆಯುವ ಮುನ್ನಾ ಘಟನೆ ಆದ ಮರು ದಿನವೇ ಪರಿಸ್ಥಿತಿಯನ್ನು ಜಿಲ್ಲಾಡಳಿತ ನಿಯಂತ್ರಿಸಬೇಕಿತ್ತು. ಅಲ್ಲದೆ ಕೆಲವರಿಗೆ ಅಂಧಕಾಸುರನ ವಧೆ ಬಗ್ಗೆ ಆಕ್ಷೇಪ ಇದ್ದರೆ ದೇವಾಲಯದ ವಿರುದ್ದ ದೂರು ನೀಡಬಹುದಿತ್ತು. ನೂರಾರು ಭಕ್ತರು ಸೇರುವ ಜಾಗದಲ್ಲಿ ಬಂದು ಉತ್ಸವ ಮೂರ್ತಿಗಳಿಗೆ ನೀರು ಎರಚಿ ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ನಮ್ಮ ಭಾವನೆಗಳನ್ನು ಕೆರಳಿಸಿದಾಗ ನಾವು ಪ್ರತಿರೋಧ ತೋರದೇ ಇರೋಕೆ ಆಗುತ್ತದೆಯೇ. ಅಲ್ಲದೆ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳದೇ ಸ್ಥಳದಲ್ಲಿ ನೆರದಿದ್ದ ಭಕ್ತರ ಮೇಲೆಯೇ ಸುಳ್ಳು ದೂರು ದಾಖಲಿಸಲಾಗಿದೆ. ಈಗ ಶಾಂತಿ ಸಭೆ ನೆಪದಲ್ಲಿ ತಿಪ್ಪೆ ತಾರಿಸುವ ಕೆಲಸ ಮಾಡುವುದು ಬೇಡ ಎಂದು ಹರಿಹಾಯ್ದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ರಕ್ಷಿತ್, ತಹಸೀಲ್ದಾರ್ ಶಿವಪ್ರಸಾದ್, ಡಿವೈಎಸ್ಪಿ ಗೋವಿಂದರಾಜು, ಪಟ್ಟಣ ಠಾಣೆ ಇನ್ಸ್ಪೆಕ್ಟರ್ ಬಸವರಾಜು ಉಪಸ್ಥಿತರಿದ್ದರು.ಬಂದ್ ನಿಶ್ಚಿತ
ಜ. 4ರಂದು ಗುರುವಾರ ಶ್ರೀಕಂಠೇಶ್ವರಸ್ವಾಮಿ ಭಕ್ತರು ಕರೆ ನೀಡಲಾಗಿರುವ ಕರೆ ನೀಡಿರುವ ಸ್ವಯಂ ಘೋಷಿತ ನಂಜನಗೂಡು ಬಂದ್ ನಿಶ್ಚಿತವಾಗಿದೆ. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದು ನಮ್ಮ ಅಹವಾಲು ಆಲಿಸುವರೆಗೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಭಕ್ತರು ಘೋಷಣೆ ಮಾಡಿದ್ದಾರೆ.