ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ ಹುಬ್ಬಳ್ಳಿಯ ಕರಸೇವಕನ ಬಂಧನ ಖಂಡಿಸಿ ಗುರುವಾರ ಖಾಸಗಿ ಬಸ್ ನಿಲ್ದಾಣದ ಎದುರು ಜಿಲ್ಲಾ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಈ ಹಿಂದೆ ಕರಸೇವಕ ಶ್ರೀಕಾಂತ್ ಪೂಜಾರಿ ಒಳ್ಳೆಯ ನಡೆತೆಯ ಮೇಲೆ ಅವರ ಮೇಲಿದ್ದ ಕೇಸನ್ನು ವಾಪಸ್ ತೆಗೆಯಲಾಗಿದೆ. ಕಾಂಗ್ರೆಸ್ ಸರ್ಕಾರವೇ ಶ್ರೀಕಾಂತ್ ಮೇಲಿದ್ದ ರೌಡಿಶೀಟ್‍ನ್ನು ತೆಗೆದಿದ್ದು, ಈಗ ಕರಸೇವಕ ಎಂದು ಬಂಧಿಸಲಾಗಿದೆ. ಇದು ಹಿಂದುತ್ವ ವಿರೋಧಿ ನೀತಿಯಾಗಿದೆ. ಕಾಂಗ್ರೆಸ್ ಸರ್ಕಾರ ತುಘಲಕ್ ನೀತಿ ಅನುಸರಿಸುತ್ತಿದೆ ಎಂದು ಹರಿಹಾಯ್ದರು.ಕಾಂಗ್ರೆಸ್ಸಿಗರು ಕಾಶ್ಮೀರದಲ್ಲಿ ರಾಷ್ಟ್ರಧ್ವಜ ಹಾರಿಸಲು ಬಿಡಲಿಲ್ಲ. ಆಯೋಧ್ಯೆಯಲ್ಲಿ ಭವ್ಯವಾಗಿ ರಾಮಮಂದಿರ ಕಟ್ಟಲಾಗಿದೆ ಎಂಬ ಹೊಟ್ಟೆಯುರಿಯಿಂದ ಈ ರೀತಿ ವರ್ತಿಸುತ್ತಿದ್ದಾರೆ. ಆಯೋಧ್ಯೆಗೆ ಹೋಗುವವರನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.ಬಿಜೆಪಿ ರಾಜ್ಯ ಪ್ರಕೋಷ್ಟಗಳ ಸಂಚಾಲಕ ಎಂ.ಬಿ ಭಾನುಪ್ರಕಾಶ್ ಮಾತನಾಡಿ, ರಾಜ್ಯ ಸರ್ಕಾರ ಕಾನೂನಿನ ದುರುಪಯೋಗ ಪಡಿಸಿಕೊಂಡು ಕರ ಸೇವಕರನ್ನು ಬಂಧಿಸುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಸರ್ಕಾರ ಕರಸೇವಕರನ್ನು ಬಂಧಿಸುತ್ತಿರುವುದಕ್ಕೆ ದಿಕ್ಕಾರವಿದೆ. ೧೯೯೨ರಲ್ಲಿ ಕರ ಸೇವೆಯಲ್ಲಿ ಭಾಗಿಯಾದ ಎಲ್ಲ ಕಾರ್ಯಕರ್ತರನ್ನು ಸರ್ಕಾರ ಬಂಧಿಸಬೇಕು. ಶ್ರೀರಾಮ ಈ ದೇಶದಲ್ಲಿ ಸರ್ವೋಚ್ಚ ಸ್ಥಾನದಲ್ಲಿ ಕೂರುತ್ತಿದ್ದಾನೆ. ಶ್ರೀರಾಮನ ನೇತೃತ್ವದಲ್ಲಿ ಭಾರತ ತಲೆ ಎತ್ತಿ ನಿಲ್ಲಲಿದೆ ಎಂದು ಹೇಳಿದರು. ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಚಾಣಕ್ಷತೆಯಿಂದ ಅಯೋಧ್ಯೆಯ ಚಿತ್ರಣ ಬದಲಾ ಗಿದೆ. ಸಂಭ್ರಮದ ನಡುವೆ ಶ್ರೀರಾಮನ ಭಕ್ತ ಶ್ರೀಕಾಂತ್ ಪೂಜಾರಿ ಬಂಧನ ಖಂಡನೀಯ. ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ ಎದು ಆರೋಪಿಸಿದರು.
ರಾಜ್ಯ ಬಿಜೆಪಿ ಉಪಾಧ್ಯಕ್ಷ ಹರತಾಳು ಹಾಲಪ್ಪ ಮಾತನಾಡಿ, ಕಾಂಗ್ರೆಸ್ ಸರ್ಕಾರ ಮಂತ್ರಾಕ್ಷತೆಯ ಹೆಸರಲ್ಲಿ ಜನ ಸೇರುತ್ತಿರುವುದನ್ನು ಸಹಿಸದೇ ಕರ ಸೇವಕರನ್ನು ಬಂಧಿಸುತ್ತಿದೆ. ರಾಜ್ಯ ಸರ್ಕಾರ ಹಿಂದೂ ವಿರೋಧಿ ನಡೆ ಅನುಸರಿಸಿದರೇ ಚುನಾಣೆಯಲ್ಲಿ ಜನ ತಕ್ಕ ಉತ್ತರ ಕೊಡ್ತಾರೆ ಕುಟುಕಿದರು.ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ ಮೇಘರಾಜ್, ನಗರಾಧ್ಯಕ್ಷ ಜಗದೀಶ್ ಪ್ರಮುಖರಾದ ವಿಶ್ವಾಸ್,ಎಸ್.ದತ್ತಾತ್ರಿ, ಸಂತೋಷ್ ಬಳ್ಳಕೆರೆ, ವಿನ್ಸೆಂಟ್, ಮಾಲತೇಶ್, ಸುರೇಖಾ, ಸೀತಾಲಕ್ಷ್ಮೀ, ರಶ್ಮಿ, ಅ.ಮಾ.ಪ್ರಕಾಶ್, ಆರತಿ ಮತ್ತಿತರರು ಇದ್ದರು. --------------------ಎಸ್ಪಿ ಕಚೇರಿಗೆ ಮುತ್ತಿಗೆ ಯತ್ನ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ಬಳಿಕ ಕರಸೇವಕರನ್ನು ಬಂಧಿಸಿದಂತೆ ನಮ್ಮನ್ನು ಬಂಧಿಸಿ ಎಂಬ ಘೋಷಣೆ ಕೂಗುತ್ತ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಕಚೇರಿಗೆ ನುಗ್ಗಿದ್ದರು. ಈ ಸಂದರ್ಭ ಎಸ್ಪಿ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದಾಗ ಪೊಲೀಸರು ಮಾಜಿ ಸಚಿವ ಈಶ್ವರಪ್ಪ, ಶಾಸಕ ಎಸ್.ಎನ್. ಚನ್ನಬಸಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಮುಖಂಡರಾದ ಎಂ.ಬಿ.ಭಾನುಪ್ರಕಾಶ್ ಮತ್ತಿತರರನ್ನು ಅವರನ್ನು ಮುಂಜಾಗ್ರತಾ ಕ್ರಮವಾಗಿ ಪೊಲೀಸರು ವಶಕ್ಕೆ ಪಡೆದರು.