ಸಾರಾಂಶ
ಬೀದರ್‌ನ ಗುತ್ತಿಗೆದಾರ ಸಚಿನ್ ಪಂಚಾಳ ಆತ್ಮಹತ್ಯೆ ಹಿನ್ನೆಲೆ ಸಚಿವ ಪ್ರಿಯಾಂಕ್ ಖರ್ಗೆಗೆ ಸಂಪುಟದಿಂದ ವಜಾಗೊಳಿಸಿ, ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬಿಜೆಪಿ ಜಿಲ್ಲಾ ಘಟಕದಿಂದ ದಾವಣಗರೆಯಲ್ಲಿ ಶನಿವಾರ ಪ್ರತಿಭಟಿಸಲಾಯಿತು.
ಬಾಣಂತಿಯರು, ಕೂಸುಗಳ ಸರಣಿ ಸಾವು, ನೌಕರರ ಆತ್ಮಹತ್ಯೆಗೆ ಆಕ್ರೋಶ । ಮುಡಾ ಹಗರಣದ ಮಧ್ಯೆ ಕುರ್ಚಿಗಂಟಿಕೊಂಡ ಸಿಎಂ: ಗಾಯತ್ರಿ
ಕನ್ನಡಪ್ರಭ ವಾರ್ತೆ ದಾವಣಗೆರೆ ಬಾಣಂತಿಯರ ಸರಣಿ ಸಾವುಗಳನ್ನು ತಡೆಯಲು ವಿಫಲವಾದ ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ, ಬೀದರ್‌ನ ಗುತ್ತಿಗೆದಾರ ಸಚಿನ್ ಪಂಚಾಳ ಆತ್ಮಹತ್ಯೆ ಹಿನ್ನೆಲೆ ಸಚಿವ ಪ್ರಿಯಾಂಕ್ ಖರ್ಗೆಗೆ ಸಂಪುಟದಿಂದ ವಜಾಗೊಳಿಸಿ, ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬಿಜೆಪಿ ಜಿಲ್ಲಾ ಘಟಕದಿಂದ ನಗರದಲ್ಲಿ ಶನಿಅಅವಾರ ಪ್ರತಿಭಟಿಸಲಾಯಿತು. ನಗರದ ಬಿಜೆಪಿ ಜಿಲ್ಲಾ ಕಚೇರಿಯಿಂದ ಪಕ್ಷದ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಗಾಂಧಿ ವೃತ್ತ, ಹಳೆ ಪಿಬಿ ರಸ್ತೆ ಮಾರ್ಗವಾಗಿ ಉಪ ವಿಭಾಗಾಧಿಕಾರಿ ಕಚೇರಿವರೆಗೆ ರಾಜ್ಯ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗುತ್ತ, ಸಚಿವ ಪ್ರಿಯಾಂಕ ಖರ್ಗೆ ರಾಜೀನಾಮೆಗೆ ಒತ್ತಾಯಿಸಿ ಉಪ ವಿಭಾಗಾಧಿಕಾರಿ ಮುಖಾಂತರ ರಾಜ್ಯಪಾಲರಿಗೆ ಮನವಿ ಅರ್ಪಿಸಲಾಯಿತು. ಪಕ್ಷದ ಹಿರಿಯ ಮುಖಂಡರಾದ ಗಾಯತ್ರಿ ಸಿದ್ದೇಶ್ವರ ಮಾತನಾಡಿ, ಕಾಂಗ್ರೆಸ್ ಸರ್ಕಾರ ತಾನು ಹೆಣ್ಣು ಮಕ್ಕಳ ಪರವೆಂದು ಹೇಳಿಕೊಂಡೇ, ಅದೇ ಮಹಿಳೆಯರ ಹತ್ಯೆಗೈಯುತ್ತಿದೆ. ಬಾಣಂತಿಯರ ಸಾವು ನಿಜಕ್ಕೂ ಆತಂಕಕಾರಿ ಸಂಗತಿ ಸಂಗತಿಯಾಗಿದೆ. ಹೆಣ್ಣುಮಕ್ಕಳು ಬದುಕುವುದು ಈ ಸರ್ಕಾರಕ್ಕೆ ಬೇಕಾದಂತಿಲ್ಲ. ಸ್ವತಃ ಕಾಂಗ್ರೆಸ್ ಸರ್ಕಾರದ ಭಾಗವಾಗಿರುವ ಮಹಿಳಾ ಸಚಿವೆಯರು, ಶಾಸಕಿಯರು, ಇತರ ಸದಸ್ಯೆಯರೇ ಇದರ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದು ಹರಿಹಾಯ್ದರು. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧವೇ ಮೂಡಾ ಹಗರಣದ ಆರೋಪವಿದೆ. ಹೀಗಿದ್ದರೂ ಅಧಿಕಾರ ಬಿಟ್ಟು ಕೆಳಗಿಳಿದು, ತನಿಖೆಗೆ ಸಹಕರಿಸುವ ಕೆಲಸ ಸಿದ್ದರಾಮಯ್ಯ ಮಾಡುತ್ತಿಲ್ಲ. ಅದೆಷ್ಟರಮಟ್ಟಿಗೆ ಸಿದ್ದರಾಮಯ್ಯ ಅಧಿಕಾರಕ್ಕೆ ಅಂಟಿಕೊಂಡಿರಬಹುದು ಎಂದು ಗಾಯತ್ರಿ ಸಿದ್ದೇಶ್ವರ ಪ್ರಶ್ನಿಸಿದರು. ಪಕ್ಷದ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ ಮಾತನಾಡಿ, ಕಾಂಗ್ರೆಸ್ ಸರ್ಕಾರವು ತಾನು ಜನಪರ, ರೈತಪರವೆಂದು ಹೇಳಿಕೊಂಡೇ ಸ್ಟ್ಯಾಂಪ್ ಡ್ಯೂಟಿ, ಹಾಲು, ತೈಲ ದರ, ಕಂದಾಯ, ಮದ್ಯ, ವಿದ್ಯುತ್ ಹೀಗೆ ಪ್ರತಿಯೊಂದರ ದರ ಹೆಚ್ಚಿಸಿದೆ. ನಾಳೆಯಿಂದ ಕೆಎಸ್ಸಾರ್ಟಿಸಿ ಬಸ್ಸು ದರ ಹೆಚ್ಚಳವಾಗುತ್ತಿದೆ. ಗ್ಯಾರಂಟಿ ಎಂದು ನೀವು ಘೋಷಿಸಿದ್ದಾಗಲೇ ಬರೆ ಮೇಲೆ ಬರೆ ಅಂತ ಹಿರಿಯರು ಹೇಳಿದ್ದ ಮಾತು ಈಗ ನಿಜವಾಗುತ್ತಿದೆ ಎಂದು ಕಿಡಿಕಾರಿದರು. ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ಎಚ್.ಸಿ.ಜಯಮ್ಮ, ಪಕ್ಷದ ಮುಖಂಡರಾದ ಯಶವಂತರಾವ್ ಜಾಧವ್, ಶಿವನಹಳ್ಳಿ ರಮೇಶ, ಧನಂಜಯ ಕಡ್ಲೇಬಾಳು, ಐರಣಿ ಅಣ್ಣೇಶ, ಪ್ರಭು ಕಲ್ಬುರ್ಗಿ, ಎಚ್.ಪಿ. ವಿಶ್ವಾಸ್, ಎಸ್.ಟಿ.ಯೋಗೇಶ್ವರ, ಮಂಜುಳಾ ಮಹೇಶ, ಭಾಗ್ಯ ಪಿಸಾಳೆ, ಚೇತನಾ ಬಾಯಿ, ಸವಿತಾ ರವಿಕುಮಾರ, ರಾಜನಹಳ್ಳಿ ಶಿವಕುಮಾರ, ಟಿಂಕರ್ ಮಂಜಣ್ಣ, ಕೆಟಿಜೆ ನಗರ ಆನಂದ, ಕಿಶೋರಕುಮಾರ, ಕೆಟಿಜೆ ನಗರ ಲೋಕೇಶ್, ಪಿ.ಎನ್.ಜಗದೀಶಕುಮಾರ, ಶ್ಯಾಮ ಪೈಲ್ವಾನ್, ರಾಜು ವೀರಣ್ಣ, ಪ್ರವೀಣ ಜಾಧವ್, ಟಿಪ್ಪು ಸುಲ್ತಾನ್, ಡಾ.ನಸೀರ್ ಅಹಮ್ಮದ್ ಇತರರು ಇದ್ದರು. ಕಾಂಗ್ರೆಸ್ ಬಣ್ಣ ಒಂದೊಂದಾಗಿ ಈಗ ಬಯಲುರೈತ ವಿರೋಧಿ, ಮಹಿಳಾ ವಿರೋಧಿ, ಕಾರ್ಮಿಕ ವಿರೋಧಿ, ಜನ ವಿರೋಧಿಯಾದ ಇಂತಹ ಸರ್ಕಾರವನ್ನು ನಾಡಿನ ಜನತೆ ಇನ್ನು ಸಹಿಸುವುದಿಲ್ಲ. ಗ್ಯಾರಂಟಿ ಭರವಸೆ ಮೇಲೆ ಜನರಿಗೆ ವಂಚಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದ ಬಣ್ಣ ಈಗ ದಿನ ಕಳೆದಂತೆ ಬಯಲಾಗುತ್ತಿದೆ.ಗಾಯತ್ರಿ ಸಿದ್ದೇಶ್ವರ, ಬಿಜೆಪಿ ಹಿರಿಯ ಮುಖಂಡರು. ಸಿಬಿಐಗೆ ವಹಿಸಲು ಹಿಂದೇಟು, ಏನಿದರ ಮರ್ಮ?ನಮ್ಮ ಪಕ್ಷದೊಳಗಿನ ಗೊಂದಲವನ್ನು ಸರಿಪಡಿಸುವ ಕೆಲಸವನ್ನು ನಮ್ಮ ವರಿಷ್ಟರು ಮಾಡುತ್ತಾರೆ. ಒಬ್ಬ ಗುತ್ತಿಗೆದಾರ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರಕರಣವನ್ನು ಸಿಬಿಐಗೆ ವಹಿಸಲು ಯಾಕೆ ಹಿಂದೇಟು ಹಾಕುತ್ತಿದ್ದೀರಿ? ಇದರ ಹಿಂದಿನ ಮರ್ಮವೇನು?ಎನ್.ರಾಜಶೇಖರ ನಾಗಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ. ಹೆಬ್ಬಾಳ್ಕರ್ ವಿರುದ್ಧ ಜಯಮ್ಮ ತೀವ್ರ ವಾಗ್ದಾಳಿರಾಜ್ಯದಲ್ಲಿ 372 ಸಾವಿನ ಪ್ರಕರಣ ಬೆಳಕಿಗೆ ಬಂದಿದ್ದು, ಬಾಣಂತಿಯರು, ನವಜಾತ ಶಿಶುಗಳು, ಗುತ್ತಿಗೆದಾರರು ಹೀಗೆ ಹಸುಗೂಸುಗಳಿಂದ ವಯೋವೃದ್ಧರ ಸರಣಿ ಸಾವಿನ ಭಾಗ್ಯ ಕೊಟ್ಟ ಶ್ರೇಯ ಸಿದ್ದರಾಮಯ್ಯ ಸರ್ಕಾರಕ್ಕೆ ಸಲ್ಲುತ್ತದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಮಗೆ ಯಾವುದೋ ಒಂದು ಮಾತಿನಿಂದ ನೋವಾಗಿದೆಯೆನ್ನುತ್ತಾರೆ. ಇಂತಹ ಸಚಿವೆ ತಮ್ಮ ಸ್ಥಾನಕ್ಕೆ ಮೊದಲು ರಾಜೀನಾಮೆ ನೀಡಲಿ. ಸರ್ಕಾರಕ್ಕೆ ಅಧಿಕಾರದ ಹಪಹಪಿ ಇದ್ದು, ಜನಪರ ಆಡಳಿತ ನಡೆಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಮಹಿಳೆಯರಿಗೆ ನ್ಯಾಯ ಕೊಡಿಸುವವರೆಗೂ ನಮ್ಮ ಹೋರಾಟ ನಿರಂತರವಾಗಿರುತ್ತದೆ.ಎಚ್.ಸಿ.ಜಯಮ್ಮ, ರಾಜ್ಯ ಉಪಾಧ್ಯಕ್ಷೆ, ಬಿಜೆಪಿ ಮಹಿಳಾ ಮೋರ್ಚಾ.