ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಖಂಡಿಸಿ ಬಿಜೆಪಿ ಪ್ರತಿಭಟನೆ
KannadaprabhaNewsNetwork | Published : Oct 17 2023, 12:45 AM IST
ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಖಂಡಿಸಿ ಬಿಜೆಪಿ ಪ್ರತಿಭಟನೆ
ಸಾರಾಂಶ
ಬೆಂಗಳೂರಿನಲ್ಲಿ ನಡೆದ ಐಟಿ ದಾಳಿಯಲ್ಲಿ ಗುತ್ತಿಗೆದಾರರ ಮನೆಗಳಲ್ಲಿ ಕೋಟ್ಯಂತರ ರುಪಾಯಿ ಪತ್ತೆಯಾಗಿದೆ. ಇದು ಪಂಚರಾಜ್ಯಗಳ ಚುನಾವಣೆಗಾಗಿ ರಾಜ್ಯ ಸರ್ಕಾರ ಸಂಗ್ರಹಿಸಿದ ಹಣ ಎಂದು ಆರೋಪಿಸಿ ಬಿಜೆಪಿ ಧಾರವಾಡ ಗ್ರಾಮೀಣ ಘಟಕದಿಂದ ಸೋಮವಾರ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ ಬೆಂಗಳೂರಿನಲ್ಲಿ ನಡೆದ ಐಟಿ ದಾಳಿಯಲ್ಲಿ ಗುತ್ತಿಗೆದಾರರ ಮನೆಗಳಲ್ಲಿ ಕೋಟ್ಯಂತರ ರುಪಾಯಿ ಪತ್ತೆಯಾಗಿದೆ. ಇದು ಪಂಚರಾಜ್ಯಗಳ ಚುನಾವಣೆಗಾಗಿ ರಾಜ್ಯ ಸರ್ಕಾರ ಸಂಗ್ರಹಿಸಿದ ಹಣ ಎಂದು ಆರೋಪಿಸಿ ಬಿಜೆಪಿ ಧಾರವಾಡ ಗ್ರಾಮೀಣ ಘಟಕದಿಂದ ಸೋಮವಾರ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಬಿಜೆಪಿ ಗ್ರಾಮೀಣ ಘಟಕದ ಜಿಲ್ಲಾಧ್ಯಕ್ಷ ಬಸವರಾಜ ಕುಂದಗೋಳಮಠ, ಬೆಂಗಳೂರಿನಲ್ಲಿ ನಡೆದ ಐಟಿ ದಾಳಿಯಲ್ಲಿ ಕಾಂಟ್ರ್ಯಾಕ್ಟರ್ ಅಂಬಿಕಾಪತಿ ಎಂಬುವವರ ಮನೆಯಲ್ಲಿ ₹42 ಕೋಟಿ ನಗದು ಸಿಕ್ಕಿದ್ದು , ಕಾಂಗ್ರೆಸ್ ಸರ್ಕಾರ ಕಾಂಟ್ರ್ಯಾಕ್ಟರ್‌ಗಳಿಗೆಂದು ನೀಡಿದ ಬಾಕಿ ಹಣ ₹650 ಕೋಟಿಗೆ ಪ್ರತಿಯಾಗಿ ಕಾಂಟ್ರ್ಯಾಕ್ಟರ್‌ಗಳು ನೀಡಿದ ಕಮಿಷನ್ ಹಣವೇ ₹42 ಕೋಟಿಯಾಗಿದೆ. ಈ ವರೆಗೆ ಸರ್ಕಾರ ರಾಜ್ಯದಲ್ಲಿ ಬರಕ್ಕೆ ತುತ್ತಾಗಿರುವ ರೈತರಿಗೆ ಪರಿಹಾರ ನೀಡಿಲ್ಲ, ವಿದ್ಯುತ್ ಕಡಿತ ವಿಪರೀತವಾಗಿದೆ, ವರ್ಗಾವಣೆ ದಂಧೆ ನಡೆಯುತ್ತಿದೆ, ತುಷ್ಟೀಕರಣದಲ್ಲಿ ಸರ್ಕಾರ ಮುಳುಗಿದೆ ಎಂದು ಆರೋಪಿಸಿದರು. ರಾಜ್ಯ ಕಾಂಗ್ರೆಸ್ ನೇತೃತ್ವದ ಜನ ವಿರೋಧಿ ಸರ್ಕಾರದ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ತಕ್ಷಣವೇ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು. ನಂತರ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ಮಂಡಲಗಳ ಅಧ್ಯಕ್ಷರಾದ ಮೃತ್ಯುಂಜಯ ಹಿರೇಮಠ, ಉಮೇಶ ಕುಸುಗಲ್ ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಪ್ರಮುಖರು, ಕಾರ್ಯಕರ್ತರು ಇದ್ದರು.