ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ, ಭ್ರಷ್ಟಾಚಾರ ಹಾಗೂ ಸಮರ್ಪಕ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿನ ನಿರ್ಲಕ್ಷ್ಯ ಖಂಡಿಸಿ, ಮಾಜಿ ಶಾಸಕಿ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ನೇತೃತ್ವದಲ್ಲಿ ನಗರದಲ್ಲಿ ಶುಕ್ರವಾರ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಕಾರವಾರ

ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ, ಭ್ರಷ್ಟಾಚಾರ ಹಾಗೂ ಸಮರ್ಪಕ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿನ ನಿರ್ಲಕ್ಷ್ಯ ಖಂಡಿಸಿ, ಮಾಜಿ ಶಾಸಕಿ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ನೇತೃತ್ವದಲ್ಲಿ ನಗರದಲ್ಲಿ ಶುಕ್ರವಾರ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.

ನಗರದ ಮಿತ್ರ ಸಮಾಜ ಮೈದಾನದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆಯು ಸುಭಾಷ್ ವೃತ್ತ, ಸವಿತಾ ಸರ್ಕಲ್, ಕೋಡಿಭಾಗ್ ರಸ್ತೆ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿತು.

ಈ ವೇಳೆ ಮಾತನಾಡಿದ ರೂಪಾಲಿ ನಾಯ್ಕ, ಶಕ್ತಿ ಯೋಜನೆಯನ್ನು ಜಾರಿಗೆ ತಂದಿರುವ ಸರ್ಕಾರ, ಸುಗಮ ಸಾರಿಗೆ ವ್ಯವಸ್ಥೆ ಕಲ್ಪಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು. ತಾಲೂಕಿನಾದ್ಯಂತ ರಸ್ತೆಗಳು ಹೊಂಡಮಯವಾಗಿದ್ದು, ಗುಂಡಿಗಳಿಂದಾಗಿ ಅಪಘಾತಗಳು ಸಂಭವಿಸಿ ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಸರಿಯಾದ ಬಸ್ಸುಗಳಿಲ್ಲದೆ, ಇರುವ ಬಸ್ಸುಗಳಿಗೆ ಟೈಯರ್ ಹಾಗೂ ನಿರ್ವಹಣೆ ಕೂಡ ಇಲ್ಲದೆ ಶಾಲಾ ವಿದ್ಯಾರ್ಥಿಗಳು ಮತ್ತು ವಯಸ್ಸಾದವರು ಮಳೆಗಾಲದಲ್ಲಿ ತೀವ್ರ ಪರದಾಡುವಂತಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ವಿದ್ಯುತ್ ಪೂರೈಕೆಯಲ್ಲೂ ಸರ್ಕಾರ ಕಣ್ಣಾಮುಚ್ಚಾಲೆ ಆಡುತ್ತಿದ್ದು, ವಿದ್ಯುತ್ ವ್ಯತ್ಯಯ ಸರಿಪಡಿಸಬೇಕಾದ ಲೈನ್ ಮ್ಯಾನ್ ಗಳನ್ನು ಗೃಹಜ್ಯೋತಿ ಯೋಜನೆಯ ದಾಖಲಾತಿ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ಕಮ್ಮರಗಾಂವ್ ಎಂಬ ಪ್ರದೇಶದಲ್ಲಿ ಕಳೆದ ಎರಡು ತಿಂಗಳಿನಿಂದ ವಿದ್ಯುತ್ ಇಲ್ಲದೇ ಜನರು ಕತ್ತಲಲ್ಲಿ ಕಾಲ ಕಳೆಯುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ತುರ್ತು ಸೇವೆಗಳ ಕೊರತೆಯಿದ್ದು, ಆ್ಯಂಬುಲೆನ್ಸ್‌ಗಳಿದ್ದರೂ ಸಿಬ್ಬಂದಿ ಇಲ್ಲದೆ ರೋಗಿಗಳು ಪರದಾಡುತ್ತಿದ್ದಾರೆ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ಉದ್ಘಾಟನೆಯಾಗಿದ್ದರೂ ತಜ್ಞ ವೈದ್ಯರ ನೇಮಕವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾವೇರಿ ಜಲವಿವಾದದ ಕುರಿತು ಪ್ರತಿಕ್ರಿಯಿಸಿದ ಅವರು, ಕರ್ನಾಟಕದ ಜನರಿಗೆ ಮೊದಲು ಕುಡಿಯುವ ನೀರು ಒದಗಿಸಿ, ಆ ಬಳಿಕ ಬೇರೆ ರಾಜ್ಯಕ್ಕೆ ನೀರು ಹರಿಸುವ ಬಗ್ಗೆ ಸರ್ಕಾರ ನಿರ್ಧರಿಸಲಿ ಎಂದು ಆಗ್ರಹಿಸಿದರು. ರಾಜ್ಯದ ಸಚಿವರು ಮತ್ತು ಶಾಸಕರು ಕೇವಲ ಕುರ್ಚಿ ಹಾಗೂ ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆಯೇ ಹೊರತು ಜನರ ಕಷ್ಟಗಳ ಬಗ್ಗೆ ಯಾರಿಗೂ ಕಾಳಜಿ ಇಲ್ಲ. ಮೂಲಭೂತ ಸೌಕರ್ಯಗಳಿಗೆ ಬಳಸಬೇಕಾದ ಹಣವನ್ನು ಬೇರೆಡೆಗೆ ಡೈವರ್ಟ್ ಮಾಡಲಾಗುತ್ತಿದೆ ಎಂದು ಅವರು ಟೀಕಿಸಿದರು.

ಜನರ ಜೀವದ ಜೊತೆ ಚೆಲ್ಲಾಟವಾಡುವುದನ್ನು ಬಿಟ್ಟು, ಸರ್ಕಾರ ತಕ್ಷಣವೇ ಎಲ್ಲ ಸೇವೆಗಳನ್ನು ಸಮರ್ಪಕವಾಗಿ ಒದಗಿಸಬೇಕು. ಇಲ್ಲದಿದ್ದಲ್ಲಿ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮನವಿ ಸ್ವೀಕರಿಸಲು ವಿಳಂಬ: ಡಿಸಿ ಕಚೇರಿಗೆ ಮುತ್ತಿಗೆ

ಇನ್ನು ಜಿಲ್ಲಾಧಿಕಾರಿ ಕಚೇರಿ ಗೇಟ್ ಎದುರು ನಿಂತು ಅರ್ಧ ಗಂಟೆ ಕಳೆದರೂ ಮನವಿ ಸ್ವೀಕರಿಸಲು ಜಿಲ್ಲಾಧಿಕಾರಿ ಆಗಮಿಸದ ಹಿನ್ನಲೆ ಪ್ರತಿಭಟನಾನಿರತರು ಆಕ್ರೋಶಗೊಂಡು ಗೇಟ್ ಒಳನುಗ್ಗಿದ ಪ್ರಸಂಗ ಸಹ ನಡೆಯಿತು. ಪೊಲೀಸರು ತಡೆದರೂ ಅದನ್ನು ಲೆಕ್ಕಿಸದೇ ಒಳನುಗಿದ್ದ ಬಿಜೆಪಿ ಕಾರ್ಯಕರ್ತರು ಕಚೇರಿಯ ಮುಖ್ಯದ್ವಾರದ ಎದುರು ಜಮಾಯಿಸಿ ಆಕ್ರೋಶ ಹೊರಹಾಕಿದರು. ಬಳಿಕ ಸ್ಥಳಕ್ಕಾಗಮಿಸಿದ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಮೂಲಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.