ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ
KannadaprabhaNewsNetwork | Published : Oct 19 2023, 12:45 AM IST
ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ
ಸಾರಾಂಶ
ರಾಮನಗರ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಭ್ರಷ್ಟಾಚಾರ ಹಾಗೂ ಜನ ವಿರೋಧಿ ಆಡಳಿತ ಖಂಡಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ರಾಮನಗರ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಭ್ರಷ್ಟಾಚಾರ ಹಾಗೂ ಜನ ವಿರೋಧಿ ಆಡಳಿತ ಖಂಡಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. ನಗರದ ಐಜೂರು ವೃತ್ತದಲ್ಲಿ ಸೇರಿದ ಕಾರ್ಯಕರ್ತರು, ಅಕ್ಟೋಬರ್ ನಲ್ಲಿ ದಾಖಲೆಯ ಕಲೆಕ್ಷನ್ , 4ನೇ ಕಂತಿನಲ್ಲಿ ಸುರ್ಜೆವಾಲೆಗೆ 5 ಸಾವಿರ ಕೋಟಿ ಸಂದಾಯ, ಕಾಂಗ್ರೆಸ್ ಕಲೆಕ್ಷನ್ ದಾಹಕ್ಕೆ ಗುತ್ತಿಗೆದಾರ ಬಲಿ, ಸಿಎಂ - ಡಿಸಿಎಂಗಳು ಕಲೆಕ್ಷನ್ ಏಜೆಂಟ್ ಗಳು... ಎಂಬ ಭಿತ್ತಿಪತ್ರ ಪ್ರದರ್ಶಿಸುತ್ತಾ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಮಿತಿ ಮೀರಿದೆ. ಗುತ್ತಿಗೆದಾರರು ಮತ್ತು ಬಿಲ್ಡರ್ ಗಳಿಂದ ಹಣ ವಸೂಲಿ ಮಾಡಲಾಗುತ್ತಿದೆ. ರಾಜಧಾನಿಯಲ್ಲಿ ನಡೆದಿರುವ ಐಟಿ ದಾಳಿಯಲ್ಲಿ ನೂರಾರು ಕೋಟಿ ಹಣ ಪತ್ತೆಯಾಗಿರುವುದೇ ಇದಕ್ಕೆ ಸಾಕ್ಷಿ. ಹಣದ ಮೂಲ ಕಾಂಗ್ರೆಸ್ಸಿಗರಿಗೆ ಸೇರಿದ್ದಾಗಿದೆ. ಹಣದ ಬಗ್ಗೆ ಸೂಕ್ತ ತನಿಖೆ ನಡೆದರೆ ಕಾಂಗ್ರೆಸ್ ನಾಯಕರ ನಿಜಬಣ್ಣ ಬಯಲಾಗಲಿದೆ. ಹೊರ ರಾಜ್ಯಗಳಲ್ಲಿ ನಡೆಯುತ್ತಿರುವ ಚುನಾವಣೆಗೆ ಕರ್ನಾಟಕ ಸರ್ಕಾರ ಹಣ ಸಂಗ್ರಹಿಸಿ ಪಕ್ಷದ ವರಿಷ್ಠರಿಗೆ ಕಳುಹಿಸಿಕೊಡುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ರಾಜ್ಯ ಸರ್ಕಾರ ಎಟಿಎಂ ಆಗಿ ಪರಿವರ್ತನೆಯಾಗಿದೆ. ಭ್ರಷ್ಟಾಚಾರದ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ಸಿದ್ದರಾಮಯ್ಯ ಸರ್ಕಾರ ಶೇ.60 ಕಮಿಷನ್ ಸರ್ಕಾರವಾಗಿ ಬದಲಾಗಿದೆ.ಅಧಿಕಾರಿಗಳಿಗೆ ಹಣ ವಸೂಲಿ ಮಾಡಲು ಟಾರ್ಗೆಟ್ ನೀಡಲಾಗಿದೆ. ಹಿರಿಯ ಕಲಾವಿದ ಪಂಡಿತ್ ರಾಜೀವ್ ತಾರಾನಾಥ್ ಅವರ ಕಾರ್ಯಕ್ರಮಕ್ಕೆ ಸಂಭಾವನೆಯಾಗಿ 5 ಲಕ್ಷ ರುಪಾಯಿ ನೀಡುವಂತೆ ಹಾಗೂ ಅಧಿಕಾರಿಗಳಿಗೆ 3 ಲಕ್ಷ ರುಪಾಯಿ ನೀಡುವಂತೆ ಬೇಡಿಕೆ ಇಡಲಾಗಿದೆ. ಇದು ಸರ್ಕಾರ ಶೇ.60 ಕಮಿಷನ್ ಸರ್ಕಾರವಾಗಿದೆ ಎಂಬುದನ್ನು ಸಾಬೀತುಪಡಿಸಿದೆ ಎಂದು ದೂರಿದರು. ಇಂಧನ ಸಚಿವ ಕೆ.ಜೆ. ಜಾರ್ಜ್ ಕಾಣೆಯಾಗಿದ್ದಾರೆ. ರಾಜ್ಯದಲ್ಲಿ ವಿದ್ಯುತ್ ಲೋಡ್ ಶೆಡ್ಡಿಂಗ್ ನಿಂದ ಕೃಷಿ ಪಂಪ್ ಸೆಟ್ ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆಯಾಗದೆ ಬೆಳೆಗೆ ನೀರು ಹರಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಬೆಳೆಗಳು ಒಣಗುತ್ತಿವೆ. ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಓದಲು ಬೆಳಕು ಇಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ, ರಾಜ್ಯದ ಜನತೆಗೆ ಆಳುವ ಸರ್ಕಾರ ಕತ್ತಲೆ ಭಾಗ್ಯ ಕರುಣಿಸಿದೆ ಎಂದು ಕಿಡಿ ಕಾರಿದರು. ಮಳೆ ಕೊರತೆಯಿಂದ ರಾಜ್ಯದ ನೂರಾರು ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಲಾಗಿದೆ, ಆದರೆ, ರೈತರಿಗೆ ಪರಿಹಾರ ನೀಡಿಲ್ಲ.ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದಿದೆ. ಅಲ್ಲಲ್ಲಿ ಗಲಭೆಗಳು ನಡೆಯುತ್ತಿವೆ. ಒಕ್ಕಲಿಗ ಸಮುದಾಯದ ಬಗ್ಗೆ ಅವಹೇಳನ ಮಾಡಿರುವ ಪ್ರೊ. ಕೆ.ಎಸ್ ಭಗವಾನ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆಯೂ ಪ್ರತಿಭಟನಾಕಾರರು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥ ನಾರಾಯಣಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರುದ್ರದೇವರು, ಜಿಲ್ಲಾ ಉಪಾಧ್ಯಕ್ಷ ಆರ್ .ವಿ.ಸುರೇಶ್, ನಗರ ಘಟಕ ಅಧ್ಯಕ್ಷ ಶಿವಾನಂದ, ಕೆಎಸ್ ಐಸಿಎಲ್ ಮಾಜಿ ಅಧ್ಯಕ್ಷ ಗೌತಮ್ ಗೌಡ, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷರಾದ ಜಯಣ್ಣ, ಎಸ್.ಆರ್ .ನಾಗರಾಜು, ನಗರಸಭೆ ಮಾಜಿ ಸದಸ್ಯರಾದ ರಾಜು, ನಾಗೇಶ್ , ಮುಖಂಡರಾದ ಸಂದೀಪ್, ವಿನೋದ್ ಭಗತ್ ಮತ್ತಿತರರು ಭಾಗವಹಿಸಿದ್ದರು. ಬಾಕ್ಸ್............ ಗುತ್ತಿಗೆದಾರರ ಮನೆಯಲ್ಲಿ ಪತ್ತೆಯಾದ ಹಣಕ್ಕೆ ಸ್ಪಷ್ಟೀಕರಣ ಕೊಡಿ ರಾಮನಗರ: ಗುತ್ತಿಗೆದಾರರ ಮನೆಯಲ್ಲಿ ಪತ್ತೆಯಾದ ಕೋಟಿ ಕೋಟಿ ನಗದು ಕಮಿಷನ್ ರೂಪದಲ್ಲಿ ಸಂಗ್ರಹಿಸಿರುವ ಹಣವಾಗಿದ್ದು, ಈ ವಿಚಾರವಾಗಿ ರಾಜ್ಯ ಸರ್ಕಾರವೇ ಆ ಹಣ ಎಲ್ಲಿಂದ ಬಂತು, ಏತಕ್ಕಾಗಿ ಸಂಗ್ರಹಿಸಲಾಗಿತ್ತು. ಎಲ್ಲಿಗೆ ರವಾನಿಸಲು ಉದ್ದೇಶಿಸಲಾಗಿತ್ತು ಎಂಬುದನ್ನು ಸ್ಪಷ್ಟೀಕರಣ ನೀಡಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥ ನಾರಾಯಣಗೌಡ ಒತ್ತಾಯಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ವಿರುದ್ಧ ಆರೋಪ ಮಾಡಿದ್ದ ಗುತ್ತಿಗೆದಾರರ ಮನೆಯಲ್ಲಿಯೇ ಐಟಿ ದಾಳಿ ವೇಳೆ ಕೋಟ್ಯಂತರ ರುಪಾಯಿ ನಗದು ಸಿಕ್ಕಿದೆ. ಯಾವ ಕಮಿಷನ್ ಹಣವನ್ನು ಅಲ್ಲಿ ಇಡಲಾಗಿತ್ತು ಎಂಬುದಕ್ಕೆ ರಾಜ್ಯ ಸರ್ಕಾರವೇ ಉತ್ತರ ನೀಡಬೇಕು ಎಂದರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ನಕಲಿ ಸ್ವಾಮಿ, ಲೂಟಿ ರವಿಗೆ ಯಾವಾಗ ಉತ್ತರ ಕೊಡಬೇಕು ಗೊತ್ತಿದೆ. ಆಗ ಉತ್ತರ ಕೊಡುತ್ತೇನೆ. ಈಗ ಸಿಕ್ಕಿರುವುದು ಬಿಜೆಪಿಯವರ ಹಣ. ನಮ್ಮ ಸರ್ಕಾರವನ್ನು ಬೀಳಿಸಲು ಕಲೆಕ್ಷನ್ ಮಾಡಿರುವ ಹಣವೆಂದು ಬೇಜವಾಬ್ದಾರಿಯಿಂದ ಹೇಳಿಕೆ ಕೊಡುತ್ತಿದ್ದಾರೆ. ಹಾಗಾದರೆ ಆ ಹಣದಿಂದ ವ್ಯಾಪಾರಕ್ಕೆ ಸಿದ್ಧರಾಗಿದ್ದಾರೆಯೇ ಎಂಬುದಕ್ಕೆ ಡಿ.ಕೆ.ಶಿವಕುಮಾರ್ ಉತ್ತರ ಕೊಡಬೇಕು ಎಂದು ಹೇಳಿದರು. ರಾಮನಗರಕ್ಕೆ ಕಸಾಯಿ ಖಾನೆ ಭಾಗ್ಯ ಕಲ್ಪಿಸಿದ ಕಾಂಗ್ರೆಸ್ ಸರ್ಕಾರ ಇದೀಗ ಕಸದ ತೊಟ್ಟಿಯನ್ನಾಗಿ ಮಾಡಲು ಹೊರಟಿದೆ. ಬೆಂಗಳೂರು ಕಸವನ್ನು ಅಲ್ಲಿಯೇ ವಿಲೇವಾರಿ ಮಾಡುವ ವ್ಯವಸ್ಥೆ ಮಾಡಬೇಕು. ಪರಿಸರ ಮತ್ತು ಸೂಕ್ಷ್ಮ ಪ್ರದೇಶದ ದೃಷ್ಟಿಯಿಂದ ಅರಣ್ಯದಂಚಿನಲ್ಲಿ ಕಸ ವಿಲೇವಾರಿ ಘಟಕ ನಿರ್ಮಾಣ ಮಾಡಬಾರದು ಎಂದು ಅಶ್ವತ್ಥ ನಾರಾಯಣಗೌಡ ಒತ್ತಾಯಿಸಿದರು. 18ಕೆಆರ್ ಎಂಎನ್ 1.ಜೆಪಿಜಿ ರಾಮನಗರದ ಐಜೂರು ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.