ಗುತ್ತಿಗೆ ಮೀಸಲಾತಿ, ಶಾಸಕರ ಅಮಾನತು ಖಂಡಿಸಿ ಬಿಜೆಪಿ ಪ್ರತಿಭಟನೆ

| Published : Mar 25 2025, 12:46 AM IST

ಸಾರಾಂಶ

ಸಭಾಧ್ಯಕ್ಷರು 18 ಬಿಜೆಪಿ ಶಾಸಕರನ್ನು 6 ತಿಂಗಳು ಅಮಾನತು ಮಾಡಿರುವುದು ಖಂಡನೀಯ. ಇದು ಕಾನೂನು ಬಾಹೀರ ಮತ್ತು ದ್ವೇಷದ ರಾಜಕಾರಣ ಎಂದು ಕಿಡಿಕಾರಿದರು. ಇದೊಂದು ಅಸಂವಿಧಾನಿಕ ಹಾಗೂ ಏಕಪಕ್ಷೀಯ ನಿರ್ಧಾರವಾಗಿದೆ. ಜನರಿಂದ ಆಯ್ಕೆಯಾದ ಶಾಸಕರಿಗೆ ಹಾಗೂ ಕ್ಷೇತ್ರದ ಮತದಾರರಿಗೆ ಮಾಡಿದ ಅಪಮಾನವಾಗಿದೆ.

ಕೊಪ್ಪಳ:

ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ ಹಾಗೂ ಸದನದಿಂದ 18 ಶಾಸಕರನ್ನು ಅಮಾನತು ಮಾಡಿರುವುದನ್ನು ಖಂಡಿಸಿ ಬಿಜೆಪಿ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಬಳಿಕ ಉಪವಿಭಾಗಾಧಿಕಾರಿ ಮಹೇಶ ಮಾಲಗಿತ್ತಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಸಂವಿಧಾನದಲ್ಲಿ ಧರ್ಮ ಆಧಾರದಲ್ಲಿ ಮೀಸಲಾತಿ ನೀಡುವುದಕ್ಕೆ ಅವಕಾಶವಿಲ್ಲ. ಗುತ್ತಿಗೆ ನೀಡುವಲ್ಲಿ ಮುಸ್ಲಿಂರಿಗೆ ಶೇ.೪ ಮೀಸಲಾತಿ ನೀಡಿರುವುದು ತುಷ್ಟೀಕರಣದ ಪರಾಮಾವಧಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಭಾಧ್ಯಕ್ಷರು 18 ಬಿಜೆಪಿ ಶಾಸಕರನ್ನು 6 ತಿಂಗಳು ಅಮಾನತು ಮಾಡಿರುವುದು ಖಂಡನೀಯ. ಇದು ಕಾನೂನು ಬಾಹೀರ ಮತ್ತು ದ್ವೇಷದ ರಾಜಕಾರಣ ಎಂದು ಕಿಡಿಕಾರಿದರು. ಇದೊಂದು ಅಸಂವಿಧಾನಿಕ ಹಾಗೂ ಏಕಪಕ್ಷೀಯ ನಿರ್ಧಾರವಾಗಿದೆ. ಜನರಿಂದ ಆಯ್ಕೆಯಾದ ಶಾಸಕರಿಗೆ ಹಾಗೂ ಕ್ಷೇತ್ರದ ಮತದಾರರಿಗೆ ಮಾಡಿದ ಅಪಮಾನವಾಗಿದೆ ಎಂದು ಆರೋಪಿಸಿದರು.

ಶಾಸಕರ ಸಂವಿಧಾನದತ್ತ ಹಕ್ಕನ್ನು ಕಾಂಗ್ರೆಸ್ ಸರ್ಕಾರ ಕಿತ್ತುಕೊಂಡಿದೆ. ಸಭಾಧ್ಯಕ್ಷರು ತಮ್ಮ ನಿರ್ಧಾರ ಮರುಪರಿಶೀಲಿಸಿ ಅಮಾನತು ಆದೇಶ ಹಿಂಪಡೆಯಬೇಕು. ಮುಸ್ಲಿಂ ವಿದ್ಯಾರ್ಥಿಗಳು ವಿದೇಶಕ್ಕೆ ಶಿಕ್ಷಣಾಭ್ಯಾಸಕ್ಕೆ ತೆರಳಿದರೆ ಅವರಿಗೆ ₹ ೨೦ರಿಂದ ₹ ೩೦ ಲಕ್ಷಕ್ಕೆ ಹೆಚ್ಚಿಸಿದ್ದು, ಶಾದಿ ಭಾಗ್ಯಕ್ಕೆ ಅನುದಾನ ನೀಡುವುದು, ಮುಸ್ಲಿಂ ಹೆಣ್ಣುಮಕ್ಕಳಿಗೆ ಮಾತ್ರ ಆತ್ಮರಕ್ಷಣೆಗೆ ವಿಶೇಷ ಅನುದಾನ ನೀಡಿದ್ದು ಹಲಾಲ್ ಬಜೆಟ್ ಆಗಿದೆ ಎಂದು ದೂರಿದರು.

ಸಂವಿಧಾನದಲ್ಲಿ ಧರ್ಮ ಆಧಾರಿತ ಮೀಸಲಾತಿ ಕೊಡಲು ಅವಕಾಶವಿಲ್ಲ. ಸುಪ್ರೀಂಕೋರ್ಟ್ ಸೇರಿ ವಿವಿಧ ಕೋರ್ಟ್‌ಗಳಲ್ಲೂ ಸಹ ಈ ಕುರಿತು ತೀರ್ಪು ನೀಡಿವೆ. ಹಿಂದೂಗಳ ವಿರುದ್ಧ ಕೈಗೊಳ್ಳುವ ನಿರ್ಣಯಗಳನ್ನು ಕೂಡಲೇ ವಾಪಾಸ್ ಪಡೆಯಬೇಕು ಎಂದು ಆಗ್ರಹಿಸಲಾಯಿತು.

ರಾಜ್ಯ ಸರ್ಕಾರವು ಬಜೆಟ್‌ನಲ್ಲಿ ಗ್ಯಾರಂಟಿಗಳಿಗೆ ಮೀಸಲಿಟ್ಟ ಅನುದಾನ ಬಳಸಬೇಕು. ಬದಲಿಗೆ ಎಸ್‌ಸಿಪಿ,ಟಿಎಸ್‌ಪಿ ಅನುದಾನ ಬಳಕೆ ಮಾಡಕೂಡದು. ಕಳೆದ ೩ ವರ್ಷಗಳಲ್ಲಿ ₹ ೩೯ ಸಾವಿರ ಕೋಟಿ ಬೇರೆ ಉದ್ದೇಶಕ್ಕೆ ಬಳಕೆ ಮಾಡಿಕೊಂಡಿದ್ದು ಪರಿಶಿಷ್ಟ ಸಮುದಾಯಕ್ಕೆ ಮಾಡಿದ ಅಪಮಾನ ಎಂದರಲ್ಲದೇ ಕೂಡಲೇ ಈ ಮೊತ್ತವನ್ನು ಪರಿಶಿಷ್ಟ ಸಮುದಾಯಗಳ ಅಭಿವೃದ್ಧಿಗೆ ವಿನಿಯೋಗ ಮಾಡಬೇಕು ಎಂದು ಆಗ್ರಹಿಸಿದರು.

ಈ ವೇಳೆ ವಿಪ ಸದಸ್ಯೆ ಹೇಮಲತಾ ನಾಯಕ, ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸೂಗೂರ, ಮಾಜಿ ಸಂಸದ ಶಿವರಾಮೆಗೌಡ, ಮಾಜಿ ಶಾಸಕ ಪರಣ್ಣ ಮುನುವಳ್ಳಿ, ಡಾ. ಬಸವರಾಜ ಕ್ಯಾವಟರ, ಎಚ್. ಗಿರೀಗೌಡ, ಅಪ್ಪಣ್ಣ ಪದಕಿ, ಮಹಾಂತೇಶ ಪಾಟೀಲ್ ಮೈನಳ್ಳಿ, ಚಂದ್ರು ಕವಲೂರು, ಚಂದ್ರು ಹಲಿಗೇರಿ, ಮಹಾಲಕ್ಷ್ಮಿ ಕಂದಾರಿ, ಕೀರ್ತಿ ಪಾಟೀಲ್ ಇದ್ದರು.