ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಭ್ರಷ್ಟಾಚಾರ ವಿರೋಧಿಸಿ ಬಿಜೆಪಿ ಪ್ರತಿಭಟನೆ

| Published : Jun 29 2024, 12:39 AM IST

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಭ್ರಷ್ಟಾಚಾರ ವಿರೋಧಿಸಿ ಬಿಜೆಪಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರು. ಭಾರೀ ಮೊತ್ತದ ಭ್ರಷ್ಟಾಚಾರ ನಡೆದಿದ್ದು, 89 ಕೋಟಿ ರು. ಹಣವನ್ನು ಲೀಲಾಜಾಲವಾಗಿ ಬಳಸಿಕೊಂಡಿದ್ದಾರೆ. 700ಕ್ಕೂ ಅಧಿಕ ನಕಲಿ ಖಾತೆಗಳಿಗೆ ಹಣ ವರ್ಗಾವಣೆ ಮಾಡುವ ಮೂಲಕ ಹಣ ದುರುಪಯೋಗ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಭ್ರಷ್ಟಾಚಾರ ವಿರೋಧಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆಯಲ್ಲಿ ಆಗಮಿಸಿ ಮನವಿ ಪತ್ರ ಸಲ್ಲಿಸಿದರು. ಭ್ರಷ್ಟಾಚಾರದ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಶರಣ ಪ್ರಕಾಶ ಪಾಟೀಲ್ ರಾಜೀನಾಮೆ ನೀಡುವಂತೆ ಒತ್ತಾಯಿಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್ ಮಾತನಾಡಿ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರು. ಭಾರೀ ಮೊತ್ತದ ಭ್ರಷ್ಟಾಚಾರ ನಡೆದಿದ್ದು, 89 ಕೋಟಿ ರು. ಹಣವನ್ನು ಲೀಲಾಜಾಲವಾಗಿ ಬಳಸಿಕೊಂಡಿದ್ದಾರೆ. 700ಕ್ಕೂ ಅಧಿಕ ನಕಲಿ ಖಾತೆಗಳಿಗೆ ಹಣ ವರ್ಗಾವಣೆ ಮಾಡುವ ಮೂಲಕ ಹಣ ದುರುಪಯೋಗ ಮಾಡಲಾಗಿದೆ ಎಂದು ಆರೋಪಿಸಿದರು.

ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ದಾವಣಗೆರೆ, ತೆಲಂಗಾಣ, ಹೈದರಾಬಾದ್‌ಗಳಲ್ಲಿ ಖಾತೆ ತೆರೆಯಲಾಗಿತ್ತು ಎಂಬುದು ಇಲ್ಲಿ ಗಮನಾರ್ಹ ಅಂಶವಾಗಿದೆ. ಕೂಲಿ ಕಾರ್ಮಿಕರು, ಎಮ್ಮೆ ಕಾಯುವ ಅಮಾಯಕ ವ್ಯಕ್ತಿಗಳ ಖಾತೆಗೆ 2 ಲಕ್ಷ ರು.ನಿಂದ 5 ಲಕ್ಷ ರು.ವರೆಗೆ ಹಣ ಹಾಕಿ ನಗದೀಕರಿಸಿಕೊಳ್ಳಲಾಗಿದೆ ಎಂದು ದೂರಿದರು.

ಈ ಹಣವನ್ನು ಲೋಕಸಭೆ ಚುನಾವಣೆ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳಿಗೆ ಬಳಸಿಕೊಂಡಿರುವ ಮಾಹಿತಿ ಇದೆ ಎಂದು ಹೇಳಲಾಗುತ್ತಿದ್ದು, ನಿಗಮದ ವ್ಯವಸ್ಥಾಪಕ ನಿರ್ದೇಶಕ ಇದು ತಮ್ಮ ಸಹಿ ಅಲ್ಲವೆಂದು ಹೇಳಿದರೆ ಬ್ಯಾಂಕ್‌ನವರು ಅವರದ್ದೇ ಸಹಿ ಎನ್ನುತ್ತಿದ್ದಾರೆ. ಇದರಲ್ಲಿ ಯಾವುದು ಸತ್ಯ ಎನ್ನುವುದು ಗೊತ್ತಾಗಬೇಕಿದೆ ಎಂದು ಆಗ್ರಹಿಸಿದರು.

ಬೇರೆ ಬ್ಯಾಂಕ್‌ನಲ್ಲಿ ಖಾತೆ ತೆರೆದಾಗ ಆ ವಿಷಯ ಆರ್ಥಿಕ ಇಲಾಖೆ ಗಮನಕ್ಕೆ ಬಾರದಿರಲು ಕಾರಣವೇನು. ಸ್ವತಃ ಹಣಕಾಸು ಖಾತೆ ನಿರ್ವಹಿಸುತ್ತಿರುವ ಸಿದ್ದರಾಮಯ್ಯ ಇದಕ್ಕೆ ಹೊಣೆಗಾರರಲ್ಲವೇ, ಆ ಹಣವನ್ನು ಮರು ವರ್ಗಾವಣೆ ಮಾಡಿಸಿದ ವ್ಯಕ್ತಿಗಳು ಯಾರು, ಅವರ ಬಂಧನ ಏಕೆ ಆಗಿಲ್ಲ, ಅವರನ್ನು ಏಕೆ ತನಿಖೆಗೆ ಒಳಪಡಿಸಿಲ್ಲವೆಂದು ಪ್ರಶ್ನಿಸಿದರು.

ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಎಚ್.ಎಂ.ರಘು ಮಾತನಾಡಿ, ಬಹುರಾಜ್ಯಗಳ ಹಗರಣವಾಗಿರುವುದರಿಂದ ವಾಲ್ಮೀಕಿ ಅಭಿವೃದ್ಧಿ ನಿಗಮದ ಪ್ರಕರಣವನ್ನು ಸಿಬಿಐ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ, ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ, ಎಸ್.ಸಚ್ಚಿದಾನಂದ, ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಅಶೋಕ್ ಜಯರಾಂ, ಬಿಜೆಪಿ ನಗರ ಘಟಕದ ಅಧ್ಯಕ್ಷ ಎಂ.ವಸಂತಕುಮಾರ್, ಮುಖಂಡರಾದ ಎಚ್.ಆರ್.ಅರವಿಂದ್, ಸಿ.ಟಿ.ಮಂಜುನಾಥ, ಸಿದ್ದರಾಜು, ಕೆ.ಎಸ್.ಆನಂದ, ಕೇಶವ, ಎಚ್.ಆರ್.ಅಶೋಕ್‌ಕುಮಾರ್, ಟಿ.ವಿವೇಕ, ಪೀಳ್ಳಿ ರಮೇಶ್, ಟಿ.ಕೃಷ್ಣ ಇತರರಿದ್ದರು.