2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ಏಕದಳ, ದ್ವಿದಳ ಮತ್ತು ತೋಟಗಾರಿಕಾ ಬೆಳೆಗಳಿಗೆ ಎನ್‌ಡಿಆರ್‌ಎಫ್‌ ಮತ್ತು ಎಸ್‌ಡಿಆರ್‌ಎಫ್‌ ನಿಯಮಾವಳಿಯನ್ವಯ ರಾಜ್ಯ ಸರ್ಕಾರ ರೈತರಿಗೆ ಕೂಡಲೇ ಪರಿಹಾರ ಬಿಡುಗಡೆ ಮಾಡಬೇಕು.

ಧಾರವಾಡ:

ರಾಜ್ಯ ಸರ್ಕಾರದ ರೈತ ವಿರೋಧಿ ಧೋರಣೆ ಖಂಡಿಸಿ ಮಂಗಳವಾರ ಬಿಜೆಪಿಯ ಗ್ರಾಮಾಂತರ ಜಿಲ್ಲಾ ಮತ್ತು ಮಹಾನಗರ ಜಿಲ್ಲಾ ರೈತ ಮೋರ್ಚಾ ವತಿಯಿಂದ ಜಿಲ್ಲಾಧಿಕಾರಿ ಕಚೇರಿ‌ ಎದುರು ಪ್ರತಿಭಟನೆ ನಡೆಸಲಾಯಿತು.

2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ಏಕದಳ, ದ್ವಿದಳ ಮತ್ತು ತೋಟಗಾರಿಕಾ ಬೆಳೆಗಳಿಗೆ ಎನ್‌ಡಿಆರ್‌ಎಫ್‌ ಮತ್ತು ಎಸ್‌ಡಿಆರ್‌ಎಫ್‌ ನಿಯಮಾವಳಿಯನ್ವಯ ರಾಜ್ಯ ಸರ್ಕಾರ ರೈತರಿಗೆ ಕೂಡಲೇ ಪರಿಹಾರ ಬಿಡುಗಡೆ ಮಾಡಬೇಕು. ಹೆಸರು, ಉದ್ದು, ಬೆಳೆಗಳ ಬೆಂಬಲ‌ ಬೆಲೆ ಖರೀದಿಯಲ್ಲಿನ ನಿಯಮಗಳಲ್ಲಿ ಸಡಿಲಿಕೆ ಮಾಡಬೇಕು. ರಾಜ್ಯದಲ್ಲಿನ ಐದು ಎಕರೆ ಒಳಗಿನ ಬಗರಹುಕುಂ ಸಾಗುವಳಿದಾರ ರೈತರಿಗೆ ಅರಣ್ಯ ಇಲಾಖೆಯ ಕಿರುಕುಳ ಮುಕ್ತಗೊಳಿಸಬೇಕು. ರಾಜ್ಯದ ಕಬ್ಬು ಬೆಳೆಗಾರರಿಗೆ ಪ್ರತಿ ಟನ್‌ಗೆ ₹ 3500 ದರ ನೀಡಬೇಕು. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ಯೋಜನೆಗೆ ರಾಜ್ಯ ಸರ್ಕಾರ ₹ 4000 ಕೊಡಬೇಕು ಎಂದು ಆಗ್ರಹಿಸಿದರು.

ಸಹಕಾರ ಸಂಘಗಳಲ್ಲಿ ರೈತರಿಗೆ ₹ 10 ಲಕ್ಷ ತನಕ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಬೇಕು. ಕೃಷಿ ಸಲಕರಣೆಗಳನ್ನು ಸಬ್ಸಿಡಿ ದರದಲ್ಲಿ ಕೊಡಲು ಅಗತ್ಯ ಅನುದಾನ ಬಿಡುಗಡೆ ಮಾಡುವುದು ಸೇರಿದಂತೆ ಇತರ ಬೇಡಿಕೆ ಈಡೇರಿಸಬೇಕು ಎಂದು ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದರು. ಇದಕ್ಕೂ ಮುಂಚೆ ಕಡಪಾ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೂ ಮೆರವಣಿಗೆ ನಡೆಸಲಾಯಿತು.

ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿ ವಿರೋಧಿಸಿ ಸುವರ್ಣಸೌಧದ ಎದುರು ಪ್ರತಿಭಟಿಸುತ್ತೇವೆ ಎಂದರು.

ಶಾಸಕ ಎಂ.ಆರ್. ಪಾಟೀಲ ಮಾತನಾಡಿ, ರಾಜ್ಯದಲ್ಲಿನ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಆದರೆ, ಆಡಳಿತಾರೂಢ ಕಾಂಗ್ರೆಸ್ ಮುಖಂಡರು ಅಧಿಕಾರಕ್ಕೆ ಕಿತ್ತಾಡುತ್ತಿದ್ದಾರೆ. ಮುಖ್ಯಮಂತ್ರಿ ಮತ್ತು ಸಚಿವರು ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.

ವಿಪ ಸದಸ್ಯ ಪ್ರದೀಪ ಶೆಟ್ಟರ, ಮಾಜಿ ಸಚಿವ ಶಂಕರಪಾಟೀಲ ಮುನೇನಕೊಪ್ಪ, ಬಿಜೆಪಿ ರೈತಮೋರ್ಚಾ ಜಿಲ್ಲಾ ಅಧ್ಯಕ್ಷ ಈಶ್ವರಗೌಡ ಪಾಟೀಲ, ರಾಘವೇಂದ್ರಗೌಡ ಪಾಟೀಲ, ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ, ತಿಪ್ಪಣ್ಣ ಮಜ್ಜಗಿ, ಮಾಜಿ ಶಾಸಕಿ ಸೀಮಾ ಮಸೂತಿ, ಮುಖಂಡರಾದ ಲಿಂಗರಾಜ ಪಾಟೀಲ, ಜಯತೀರ್ಥ ಕಟ್ಟಿ, ರಾಜಣ್ಣ ಕೊರವಿ, ಮಾಲತೇಶ ಶ್ಯಾಗೋಟಿ, ಶಿವಾನಂದ ಗುಂಡಗೋವಿ, ಗುರು ಪಾಟೀಲ, ಬಸವರಾಜ ಗುಂಜಾಳ, ಸದಾನಂದ ಕೊಕಾಟಿ, ಬಸವರಾಜ ಬಾಳಗಿ, ಮಂಜುನಾಥ ನೀರಲಕಟ್ಟಿ, ಶಂಕರ ಕುಮಾರ ದೇಸಾಯಿ, ಬಸವರಾಜ ಕುಂದಗೋಳ ಮಠ, ಶಶಿಮೌಳಿ ಕುಲಕರ್ಣಿ, ಕರಿಯಪ್ಪ ಅಮ್ಮಿನಭಾವಿ, ವಿಠ್ಠಲ ಯಡಳ್ಳಿ, ಮೋಹನ ರಾಮದುರ್ಗ, ಮಂಜುನಾಥ ಹಿರೇಮಠ ಮತ್ತಿತರರು ಇದ್ದರು.