ಈ ಹಿಂದೆ ದೇಶದಲ್ಲಿ ಇಂದಿರಾ ಗಾಂಧಿ ಅವರು ತುರ್ತು ಪರಸ್ಥಿತಿ ಹೇರಿ ಜನರ ವಾಕ್‌ ಸ್ವಾತಂತ್ರ್ಯವನ್ನೇ ಕಸಿದುಕೊಂಡಿದ್ದರು. ಈಗ ರಾಜ್ಯ ಸರ್ಕಾರ ತಾನು ಮಾಡಿರುವ ಅವ್ಯವಹಾರಗಳನ್ನು ಮುಚ್ಚಿ ಹಾಕಿಕೊಳ್ಳಲು ದ್ವೇಷ ಭಾಷಣ ಮಸೂದೆ ಕಾಯ್ದೆ ಜಾರಿಗೊಳಿಸಲು ಮುಂದಾಗಿದೆ.

ನವಲಗುಂದ:

ಕರ್ನಾಟಕ ದ್ವೇಷ, ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ-2025 ಪೂರ್ವಾಗ್ರಹಪೀಡಿತವಾಗಿದ್ದು, ವಿರೋಧ ಪಕ್ಷಗಳನ್ನು ಕಟ್ಟಿಹಾಕುವ ತಂತ್ರ ಹೊಂದಿದೆ. ಯಾವುದೇ ಕಾರಣಕ್ಕೂ ಇದಕ್ಕೆ ಅಂಕಿತ ಹಾಕದೆ ಈ ಮಸೂದೆಯನ್ನು ತಿರಸ್ಕರಿಸುವಂತೆ ಅಗ್ರಹಿಸಿ ಬಿಜೆಪಿ ನವಲಗುಂದ ಮಂಡಳದಿಂದ ಬುಧವಾರ ಉಪತಹಸೀಲ್ದಾರ್‌ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಈ ವಿಧೇಯಕವನ್ನು ರಾಜ್ಯ ಸರ್ಕಾರ ಅಂಗೀಕಾರ ಮಾಡುವ ಮೂಲಕ ರಾಜ್ಯದಲ್ಲಿ ಮತ್ತೊಮ್ಮೆ ತುರ್ತು ಪರಿಸ್ಥಿತಿ ಹೇರಿದೆ. ಅಂದು ರಾಷ್ಟ್ರಮಟ್ಟದಲ್ಲಿ ಇಂದಿರಾಗಾಂಧಿ ಮಾಡಿದ್ದ ಕೆಲಸವನ್ನು ಈಗ ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಇದು ಸಂವಿಧಾನ ವಿರೋಧಿ ಧೋರಣೆಯಾಗಿದೆ ಎಂದು ಕಿಡಿಕಾರಿದರು.

ಈ ವೇಳೆ ಬಿಜೆಪಿ ಗ್ರಾಮೀಣ ಘಟಕದ ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ, ಮಂಡಲ ಅಧ್ಯಕ್ಷ ಗಂಗಪ್ಪ ಮನಮಿ, ಮಂಜುನಾಥ್ ಗಣಿ ಮುಖಂಡರಾದ ಷಣ್ಮುಖ ಗುರಿಕಾರ, ಸುರೇಶ ಗಾಣಿಗೇರ, ದೇವರಾಜ್ ದಾಡಿಬಾಯಿ, ಸಿದ್ದಣ್ಣ ಕಿಟಿಗೇರಿ, ಸಿದ್ದನಗೌಡ ಪಾಟೀಲ್, ಸಂತೋಷ ಜೀವನಗೌಡ್ರ, ಮಲ್ಲಿಕಾರ್ಜುನ್ ಸಂಗನಗೌಡ್ರ, ಸಾಯಿಬಾಬಾ ಆನೆಗುಂದಿ, ಮಹಾಂತೇಶ ಕಲಾಲ್, ಬಸವರಾಜ್ ಕಾತರಾಕಿ, ಆನಂದ ಜಕ್ಕನಗೌಡ್ರ ಸಂತೋಷ ಹೊಸಮನಿ, ವಿನಾಯಕ ದಾಡಿಬಾಯಿ, ಆನಂದ ಚವಡಿ, ರವಿಕುಮಾರ್ ಸವದತ್ತಿ, ಜಯಪ್ರಕಾಶ ಬದಾಮಿ ಸೇರಿದಂತೆ ಹಲವರಿದ್ದರು.

ಧಾರವಾಡದಲ್ಲೂ ಪ್ರತಿಭಟನೆ:

ರಾಜ್ಯ ಸರ್ಕಾರ ದ್ವೇಷ ಭಾಷಣ ಮಸೂದೆ ಕಾಯ್ದೆ ಜಾರಿ ಮುಂದಾಗಿರುವುದನ್ನು ವಿರೋಧಿಸಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ಸರ್ಕಾರ ಸಂವಿಧಾನ ದುರುಪಯೋಗ ಮಾಡಿಕೊಳ್ಳುತ್ತಿದೆ. ಈ ಹಿಂದೆ ದೇಶದಲ್ಲಿ ಇಂದಿರಾ ಗಾಂಧಿ ಅವರು ತುರ್ತು ಪರಸ್ಥಿತಿ ಹೇರಿ ಜನರ ವಾಕ್‌ ಸ್ವಾತಂತ್ರ್ಯವನ್ನೇ ಕಸಿದುಕೊಂಡಿದ್ದರು. ಈಗ ರಾಜ್ಯ ಸರ್ಕಾರ ತಾನು ಮಾಡಿರುವ ಅವ್ಯವಹಾರಗಳನ್ನು ಮುಚ್ಚಿ ಹಾಕಿಕೊಳ್ಳಲು ದ್ವೇಷ ಭಾಷಣ ಮಸೂದೆ ಕಾಯ್ದೆ ಜಾರಿಗೊಳಿಸಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ರಾಜ್ಯದಲ್ಲಿ ಕೈ ಸರ್ಕಾರ ಜನರ ವಾಕ್ ಸ್ವಾತಂತ್ರ್ಯ ಕಸಿದುಕೊಳ್ಳುತ್ತಿದೆ. ಕೂಡಲೇ ತಾನು ಜಾರಿಗೊಳಿಸಿರುವ ದ್ವೇಷ ಭಾಷಣ ಮಸೂದೆ ಕಾಯ್ದೆಯನ್ನು ಹಿಂಪಡೆಯಬೇಕು. ಇಲ್ಲದೇ ಹೋದರೆ ಬರುವ ದಿನಗಳಲ್ಲಿ ಬಿಜೆಪಿ ರಾಜ್ಯಾದ್ಯಂತ ದೊಡ್ಡಮಟ್ಟದ ಹೋರಾಟಕ್ಕೆ ಕರೆ ನೀಡುತ್ತದೆ ಎಂದು ಬಿಜೆಪಿ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಎಚ್ಚರಿಕೆ ನೀಡಿದರು.