ಬಿತ್ತನೆ ಬೀಜ ಬೆಲೆ ಏರಿಕೆ ವಿರುದ್ಧ ಬಿಜೆಪಿ ಪ್ರತಿಭಟನೆ

| Published : May 30 2024, 12:47 AM IST

ಬಿತ್ತನೆ ಬೀಜ ಬೆಲೆ ಏರಿಕೆ ವಿರುದ್ಧ ಬಿಜೆಪಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದ ಎದುರು ಬಿಜೆಪಿ ಜಿಲ್ಲಾ ಘಟಕ, ರೈತ ಮೋರ್ಚಾದಿಂದ ಬಿತ್ತನೆ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ, ದಾವಣಗೆರೆ

ತೀವ್ರ ಬರದಿಂದ ರಾಜ್ಯದ ರೈತರು ತತ್ತರಿಸಿರುವ ಬೆನ್ನಲ್ಲೇ ಬಿತ್ತನೆ ಬೀಜಗಳ ದರವನ್ನು ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಿ, ಸಮರ್ಪಕವಾಗಿ ಬಿತ್ತನೆ ಬೀಜ ವಿತರಿಸಲು ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ, ಧೋರಣೆ ಖಂಡಿಸಿ ಬಿಜೆಪಿ ಜಿಲ್ಲಾ ಘಟಕ ಹಾಗೂ ರೈತ ಮೋರ್ಚಾದಿಂದ ನಗರದ ಕೃಷಿ ಇಲಾಖೆ ಕಚೇರಿ ರೈತ ಸಂಪರ್ಕ ಕೇಂದ್ರದ ಮುಂದೆ ಬುಧವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಎಪಿಎಂಸಿ ಯಾರ್ಡ್‌ಗೆ ಹೊಂದಿಕೊಂಡಿರುವ ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿಯ ರೈತ ಸಂಪರ್ಕ ಕೇಂದ್ರದ ಮುಂದೆ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ, ರೈತ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಬಿ.ಎಂ.ಸತೀಶ ಕೊಳೇನಹಳ್ಳಿ ಇತರರ ನೇತೃತ್ವದಲ್ಲಿ ಪ್ರತಿಭಟಿಸಿದ ಪಕ್ಷದ ಮುಖಂಡರು, ರೈತರು, ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಮಾತನಾಡಿದ ಬಿ.ಎಂ.ಸತೀಶ ಕೊಳೇನಹಳ್ಳಿ, ಕಳೆದ ಹಂಗಾಮಿನ ಭೀಕರ ಬರದಿಂದ ರೈತರು ತತ್ತರಿಸಿದ್ದಾರೆ. ಇದೀಗ

ಮುಂಗಾರು ಪೂರ್ವದ ಮಳೆಯಿಂದಾಗಿ ಸಂಭ್ರಮದಿಂದ ರೈತರು ಮತ್ತೆ ಕೃಷಿಯತ್ತ ಮುಖ ಮಾಡಿದ್ದರು. ಭೂಮಿ ಉಳುಮೆ ಮಾಡಿ, ಹಸನು ಮಾಡಿಕೊಂಡಿದ್ದ ರೈತರು ಬಿತ್ತನೆ ಬೀಜಕ್ಕೆಂದು ರೈತ ಸಂಪರ್ಕ ಕೇಂದ್ರಕ್ಕೆ ಹೋದರೆ ಬಿತ್ತನೆ ಬೀಜಗಳ ಬೆಲೆಯನ್ನು ಕಾಂಗ್ರೆಸ್ ಸರ್ಕಾರವು ಏರಿಸಿದೆ. ಮುಕ್ತ ಮಾರುಕಟ್ಟೆಯಲ್ಲೂ ಬಿತ್ತನೆ ಬೀಜಗಳ ಬೆಲೆ ಭಾರೀ ಹೆಚ್ಚಳವಾಗಿದೆ. ಇದೊಂದು ರೈತ ವಿರೋಧಿ ಕ್ರಮವಾಗಿದೆ. ಸಿದ್ದರಾಮಯ್ಯ ಸರ್ಕಾರ ಒಂದು ಕೈಯಲ್ಲಿ ಗ್ಯಾರಂಟಿ ಕೊಟ್ಟು, ಮತ್ತೊಂದು ಕೈಯಲ್ಲಿ ಸುಲಿಗೆಗೆ ಇಳಿದಿದೆ. ಬೆಲೆ ಏರಿಸುವ ಮೂಲಕ ಗ್ಯಾರಂಟಿ ಯೋಜನೆಗೆ ಹಣ ಹೊಂದಿಸಲು ರೈತರ ಜೇಬಿಗೆ ಕೈ ಹಾಕಿ, ಪಿಕ್ ಪಾಕೆಟ್ ಮಾಡುತ್ತಿದೆ. ಇದು ನಾಚಿಕೆಗೇಡಿನ ಪರಮಾವಧಿ ಎಂದು ಅವರು ಕಿಡಿಕಾರಿದರು.

ಪಕ್ಷದ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ ಮಾತನಾಡಿ, ತಕ್ಷಣವೇ ಸರ್ಕಾರ ರೈತರ ನೆರವಿಗೆ ಧಾವಿಸಬೇಕೆ ಹೊರತು, ಹೀಗೆ ಗಾಯದ ಮೇಲೆ ಬರೆ ಎಳೆಯುವಂತೆ ಬಿತ್ತನೆ ಬೀಜಗಳ ಬೆಲೆ ಏರಿಸಬಾರದು. ತಕ್ಷಣವೇ ಸಬ್ಸಿಡಿ ಹೆಚ್ಚಿಸಿ, ಬಿತ್ತನೆ ಬೀಜವನ್ನು ಕಡಿಮೆ ದರಕ್ಕೆ ನೀಡಬೇಕು. ಬರದಿಂದ ತತ್ತರಿಸಿದ ರೈತರ ಕಣ್ಣೀರೊರೆಸುವ ಕೆಲಸ ಮಾಡಬೇಕು. ರೈತರಿಗೆ ಗುಣಮಟ್ಟ ದ ಬಿತ್ತನೆ ಬೀಜಗಳ ವಿತರಣೆಗೆ ಕ್ರಮ ವಹಿಸಬೇಕು. ನಕಲಿ ಬೀಜಗಳ ಹಾವಳಿ ಸಂಪೂರ್ಣ ನಿರ್ಮೂಲನೆ ಮಾಡಬೇಕು. ನಕಲಿ ಬಿತ್ತನೆ ಬೀಜ ತಯಾರಕರು, ಮಾರಾಟಗಾರರು, ಪೂರೈಸುವ ವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ ಮಾತನಾಡಿ, ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಜನರನ್ನು ಮರಳು ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಮತ್ತೊಂದು ಕಡೆ ಸದ್ದಿಲ್ಲದೇ ಜನರಿಗೆ ಬೆಲೆ ಏರಿಕೆ ಬರೆ ಹಾಕುತ್ತಿದೆ ಎಂದು ಆರೋಪಿಸಿದರು.

ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿಲಕುಮಾರ ನಾಯ್ಕ, ಐರಣಿ ಅಣ್ಣೇಶ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಆರ್.ಎಲ್‌.ಶಿವಪ್ರಕಾಶ, ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಮಾಯ ಕೊಂಡ ಜಿ.ಎಸ್.ಶ್ಯಾಮ್, ಸಂಗನಗೌಡ, ಶಂಕರಗೌಡ ಬಿರಾದಾರ, ಕೆ.ಎಂ.ವೀರೇಶ ಪೈಲ್ವಾನ, ಕೆ.ಜಿ.ಕಲ್ಲಪ್ಪ, ರಮೇಶ ನಾಯ್ಕ, ಎಚ್.ಬಿ.ನವೀನಕುಮಾರ, ಡಾ.ನಸೀರ್ ಅಹಮ್ಮದ್‌, ಟಿಂಕರ್ ಮಂಜಣ್ಣ, ಶಿವಾಜಿರಾವ್‌, ಪಿ.ಎಸ್.ಬಸವರಾಜ, ಅತಿಥ್‌ ಅಂಬರಕರ್‌, ರಘುನಂದನ್ ಅಂಬರಕರ್‌, ಅಣಬೇರು ಶಿವಪ್ರಕಾಶ, ಆನೆಕೊಂಡ ರೇವಣಸಿದ್ದಪ್ಪ, ಅಣಜಿ ಗುಡ್ಡೇಶ, ಆನೆಕೊಂಡ ಪುಟ್ಟಪ್ಪ, ಧನುಷ್‌ ಇತರರು ಇದ್ದರು. ಬಿಜೆಪಿ ರೈತ ಮೋರ್ಚಾ ಬೇಡಿಕೆಗಳೇನು?

ಸಹಾಯಧನ ಹೆಚ್ಚಿಸಿ, ಕಡಿಮೆ ದರಕ್ಕೆ ಬಿತ್ತನೆ ಬೀಜ ಪೂರೈಸಬೇಕು. ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ ವಿತರಣೆಗೆ ಕ್ರಮ ವಹಿಸಬೇಕು. ನಕಲಿ ಬೀಜಗಳ ಹಾವಳಿ ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು. ಜಿಲ್ಲೆಯಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಭತ್ತ, ಮೆಕ್ಕೆ ಬಿತ್ತುತ್ತಾರೆ. ಈಗಾಗಲೇ ಭತ್ತ, ಮೆಕ್ಕೆಜೋಳ ಬೀಜಗಳ ದಾಸ್ತಾನು ಅಗತ್ಯ ಪ್ರಮಾಣದಲ್ಲಿಲ್ಲದೆ ಅಭಾವ ಕಂಡುಬರುತ್ತಿದೆ. ಆದ್ದರಿಂದ ಸಾಕಷ್ಟು ಪ್ರಮಾಣದಲ್ಲಿ ಪೂರೈಕೆ ಮಾಡಲು ತಕ್ಷಣ ಕ್ರಮ ಕೈಗೊಳ್ಳಬೇಕು..ಜಿಲ್ಲೆಯಲ್ಲಿ ಅಗತ್ಯ ಪ್ರಮಾಣದಷ್ಟು ರಸಗೊಬ್ಬರ ಪೂರೈಕೆ ಮಾಡಲು ಕ್ರಮ ವಹಿಸಬೇಕು. .ಬರ ಪರಿಹಾರ ಸರಿಯಾಗಿ ವಿತರಣೆಯಾಗಿಲ್ಲ. ಈ ಬಗ್ಗೆ ಗಮನವಹಿಸಿ ಬರ ಪರಿಹಾರ ಸರಿಯಾದ ರೀತಿ ವಿತರಣೆ ಮಾಡಬೇಕು ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಬಿ.ಎಂ.ಸತೀಶ ಕೊಳೇನಹಳ್ಳಿ ಒತ್ತಾಯಿಸಿದ್ದಾರೆ.