ಗೊಬ್ಬರ ಕೊರತೆ ಖಂಡಿಸಿ ಬಿಜೆಪಿ ಬೃಹತ್ ಪ್ರತಿಭಟನೆ

| Published : Aug 11 2025, 12:34 AM IST

ಗೊಬ್ಬರ ಕೊರತೆ ಖಂಡಿಸಿ ಬಿಜೆಪಿ ಬೃಹತ್ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಸಮರ್ಪಕ ರಸಗೊಬ್ಬರ ಪೂರೈಕೆ ಮಾಡದ ರಾಜ್ಯ ಸರ್ಕಾರದ ನಡೆ ಖಂಡಿಸಿ ಭಾನುವಾರ ಶಿರಹಟ್ಟಿಯಲ್ಲಿ ಬಿಜೆಪಿ ಹಾಗೂ ರೈತ ಮೋರ್ಚಾ ವತಿಯಿಂದ ಮಾರುತಿ ದೇವಸ್ಥಾನದಿಂದ ಎತ್ತು, ಚಕ್ಕಡಿಯೊಂದಿಗೆ ಶಾಸಕ ಡಾ. ಚಂದ್ರು ಕೆ. ಲಮಾಣಿ ನೇತೃತ್ವದಲ್ಲಿ ಮೆರವಣಿಗೆ ನಡೆಸಿ, ನೆಹರು ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಸರ್ಕಾರದ ಕಾರ್ಯವೈಖರಿ ವಿರುದ್ಧ ಹರಿಹಾಯ್ದರು.

ಶಿರಹಟ್ಟಿ: ಸಮರ್ಪಕ ರಸಗೊಬ್ಬರ ಪೂರೈಕೆ ಮಾಡದ ರಾಜ್ಯ ಸರ್ಕಾರದ ನಡೆ ಖಂಡಿಸಿ ಭಾನುವಾರ ಶಿರಹಟ್ಟಿಯಲ್ಲಿ ಬಿಜೆಪಿ ಹಾಗೂ ರೈತ ಮೋರ್ಚಾ ವತಿಯಿಂದ ಮಾರುತಿ ದೇವಸ್ಥಾನದಿಂದ ಎತ್ತು, ಚಕ್ಕಡಿಯೊಂದಿಗೆ ಶಾಸಕ ಡಾ. ಚಂದ್ರು ಕೆ. ಲಮಾಣಿ ನೇತೃತ್ವದಲ್ಲಿ ಮೆರವಣಿಗೆ ನಡೆಸಿ, ನೆಹರು ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಸರ್ಕಾರದ ಕಾರ್ಯವೈಖರಿ ವಿರುದ್ಧ ಹರಿಹಾಯ್ದರು.ಈ ವೇಳೆ ಶಾಸಕ ಡಾ. ಚಂದ್ರು ಕೆ. ಲಮಾಣಿ ಮಾತನಾಡಿ, ರೈತರಿಗೆ ಸುಳ್ಳು ಭರವಸೆ ಕೊಟ್ಟು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಇದೀಗ ರೈತರನ್ನು ತುಳಿಯುತ್ತಿದೆ. ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ಸಕಾಲಕ್ಕೆ ರಸಗೊಬ್ಬರ ಪೂರೈಸದೇ ಸಂಕಷ್ಟಕ್ಕೆ ಸಿಲುಕಿಸಿದೆ ಎಂದು ಆರೋಪಿಸಿದರು.ಈ ಬಾರಿ ರಾಜ್ಯದಲ್ಲಿ ಮುಂಗಾರು ಮಳೆ ಉತ್ತಮವಾಗಿದೆ ಎಂಬುದು ಅರಿವಿದ್ದರೂ ಮುಂದಾಲೋಚನೆ ಮಾಡದೇ ರೈತರಿಗೆ ರಸಗೊಬ್ಬರ ಕೊಡದೇ ಇರುವ ರಾಜ್ಯದ ಅಶಕ್ತ ಕಾಂಗ್ರೆಸ್ ಸರ್ಕಾರ ಏನೇ ಕೇಳಿದರೂ ಕೇಂದ್ರ ಸರ್ಕಾರದ ಕಡೆಗೆ ಬೊಟ್ಟು ತೋರಿಸುತ್ತಿದೆ. ಉತ್ತಮ ಆಡಳಿತ ನೀಡುವಲ್ಲಿ ವಿಫಲರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಮುಂದಿನ ದಿನಗಳಲ್ಲಿ ಕಿತ್ತೊಗೆಯಬೇಕು ಎಂದು ಆಗ್ರಹಿಸಿದರು.ನಮ್ಮ ಜಿಲ್ಲೆಯಲ್ಲಿ ಹೆಚ್ಚಿನ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆದಿರುವ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳಿಂದ ರಾಜ್ಯ ಸರ್ಕಾರ ಸಮಗ್ರ ವರದಿ ಪಡೆದುಕೊಂಡಿದ್ದರೂ ಕೇಂದ್ರ ಸರ್ಕಾರ ಬೇಡಿಕೆಗಿಂತ ಅಧಿಕ ಪ್ರಮಾಣದಲ್ಲಿ ಅಂದರೆ ೮.೭೩ ಲಕ್ಷ ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಪೂರೈಸಿದ್ದರೂ ಜಿಲ್ಲೆಗೆ ಹಾಗೂ ತಾಲೂಕುಗಳಿಗೆ ಹಂಚಿಕೆ ಮಾಡಿಲ್ಲ. ಇದರಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರ ತಾರತಮ್ಯ ನೀತಿ ಇದೆ ಎಂದು ಆರೋಪಿಸಿದರು.ಸಿಎಂ ಹಾಗೂ ಕೃಷಿ ಸಚಿವರು ನಿದ್ದೆಗಣ್ಣಿನಲ್ಲಿರುವ ತರ ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆ ನೀಡುತ್ತಿರುವುದು ಹಾಸ್ಯಾಸ್ಪದವಾಗಿದೆ. ಇವರ ಆಡಳಿತ ವೈಖರಿಯಿಂದ ಇಂದು ಪೊಲೀಸ್ ಇಲಾಖೆ ಸರ್ಪಗಾವಲಿನಲ್ಲಿ ಯೂರಿಯಾ ಗೊಬ್ಬರ ಹಂಚಿಕೆ ಮಾಡುವ ಪರಿಸ್ಥಿತಿ ಎದುರಾಗಿದೆ ಎಂದರು.ಕೇಂದ್ರ ಸರ್ಕಾರ ಬೇಡಿಕೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ರಸಗೊಬ್ಬರ ಪೂರೈಸಿದ್ದರೂ ರಾಜ್ಯದ ರೈತರಿಗೆ ಕೃತಕ ಅಭಾವ ಸೃಷ್ಟಿ ಮಾಡಿ ಪಕ್ಕದ ಕೇರಳ ರಾಜ್ಯಕ್ಕೆ ರಾಜ್ಯದ ಕಾಂಗ್ರೆಸ್ ಸರ್ಕಾರವೇ ಹೆಚ್ಚಿನ ಬೆಲೆಗೆ ಕಾಳಸಂತೆಯಲ್ಲಿ ಗೊಬ್ಬರ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ ಎಂದು ಗಂಭೀರ ಆರೋಪ ಮಾಡಿದರು.ಮತಗಳ್ಳತನ ಗಾಂಧಿ ಕುಟುಂಬದ ಪರಂಪರೆ:ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಸಂಸತ್ ಚುನಾವಣೆ ವೇಳೆ ಅಕ್ರಮ ಮತದಾನ ಆಗಿದೆ ಎನ್ನುವ ಆರೋಪ ಸತ್ಯಕ್ಕೆ ದೂರವಾಗಿದ್ದು, ಇದು ಗಾಂಧಿ ಕುಟುಂಬದ ಪರಂಪರೆಯೇ ಹೊರತು ಮತ್ಯಾರೂ ಮಾಡಲು ಸಾಧ್ಯವಿಲ್ಲ. ಕಾಂಗ್ರೆಸ್ ಸರ್ಕಾರವೇ ಮತಪಟ್ಟಿ ಪರಿಷ್ಕರಣೆ ಮಾಡಿದ್ದು, ಅವರೇ ಮತ್ತೆ ಆರೋಪ ಮಾಡುತ್ತಿದ್ದಾರೆ. ಇವರ ಹತಾಶೆ ಮನೋಭಾವ ತೋರಿಸುತ್ತಿದೆ ಎಂದು ಟೀಕಿಸಿದರು.ಸುನೀಲ ಮಹಾಂತಶೆಟ್ಟರ, ಹೇಮಗಿರೀಶ ಹಾವಿನಾಳ, ಶಿವಪ್ರಕಾಶ ಮಹಾಜನಶೆಟ್ಟರ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಸಲ್ಲಿಸಿದ ಬೇಡಿಕೆ ೬.೩೧ ಲಕ್ಷ ಮೆಟ್ರಿಕ್ ಟನ್ ಆಗಿದ್ದು, ಕೇಂದ್ರ ಸರ್ಕಾರ ಜುಲೈ ಅಂತ್ಯಕ್ಕೆ ೮.೭೩ ಲಕ್ಷ ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ರಾಜ್ಯಕ್ಕೆ ನೀಡಿದೆ. ರಸಗೊಬ್ಬರ ಕೊರತೆಗೆ ಕೇಂದ್ರ ಸರ್ಕಾರ ಕಾರಣ ಎಂದು ಕಾಂಗ್ರೆಸ್ ಆರೋಪ ಮಾಡುತ್ತಿರುವುದು ಸರಿಯೇ ಎಂದು ಪ್ರಶ್ನಿಸಿದರು.ನಾಗರಾಜ ಲಕ್ಕುಂಡಿ, ಬಿ.ಡಿ. ಪಲ್ಲೇದ, ತಿಮ್ಮರಡ್ಡಿ ಮರಡ್ಡಿ, ಫಕ್ಕೀರಪ್ಪ ಗುಡಿಮನಿ, ತಿಪ್ಪಣ್ಣ ಕೊಂಚಿಗೇರಿ, ಆರ್.ಬಿ. ಕುಲಕರ್ಣಿ, ಜೆ.ಆರ್. ಕುಲಕರ್ಣಿ ಮಾತನಾಡಿದರು.ಚಂದ್ರಕಾಂತ ನೂರಶೆಟ್ಟರ, ನಂದಾ ಪಲ್ಲೇದ, ಫಕ್ಕೀರೇಶ ರಟ್ಟಿಹಳ್ಳಿ, ಸಂದೀಪ ಕಪ್ಪತ್ತನವರ, ಶಂಕರ ಮರಾಠೆ, ಗಂಗಾಧರ ಮೆಣಸಿನಕಾಯಿ, ಪ್ರವೀಣ ಪಾಟೀಲ, ಸಂತೋಷ ಓಬಾಜಿ, ರಾಜುರಡ್ಡಿ ಬಮ್ಮನಕಟ್ಟಿ, ಮಲ್ಲಿಕಾರ್ಜುನ ಕಬಾಡಿ, ಫಕ್ಕೀರೇಶ ಕರಿಗಾರ, ಪರಶುರಾಮ ಡೊಂಕಬಳ್ಳಿ, ವೀರಣ್ಣ ಅಂಗಡಿ ಇದ್ದರು. ಪಿಎಸ್‌ಐ ಚನ್ನಯ್ಯ ದೇವೂರ ಬಂದೋಬಸ್ತ್ ಕೈಗೊಂಡಿದ್ದರು. ಆನಂತರ ತಹಸೀಲ್ದಾರ್‌ ಕೆ. ರಾಘವೇಂದ್ರರಾವ್ ಅವರ ಮುಖಾಂತರ ಮನವಿ ಸಲ್ಲಿಸಿದರು.