ಶಾಸಕರ ಅಮಾನತು ಖಂಡಿಸಿ ಬಿಜೆಪಿ ಪ್ರತಿಭಟನೆ

| Published : Mar 25 2025, 12:46 AM IST

ಸಾರಾಂಶ

ಶಿವಮೊಗ್ಗ: ರಾಜ್ಯ ಸರ್ಕಾರದ ಹಿಂದೂ ವಿರೋಧಿ ನೀತಿ ಹಾಗೂ 18 ಬಿಜೆಪಿ ಶಾಸಕರನ್ನು ಅಮಾನತುಗೊಳಿಸಿದ್ದನ್ನು ವಿರೋಧಿಸಿ ಜಿಲ್ಲಾ ಬಿಜೆಪಿಯು ಸೋಮವಾರ ನಗರದ ಅಮೀರ್ ಅಹಮ್ಮದ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ವೇಳೆ ಮುಖ್ಯಮಂತ್ರಿಗಳ ಪ್ರತಿಕೃತಿಯನ್ನು ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ಶಿವಮೊಗ್ಗ: ರಾಜ್ಯ ಸರ್ಕಾರದ ಹಿಂದೂ ವಿರೋಧಿ ನೀತಿ ಹಾಗೂ 18 ಬಿಜೆಪಿ ಶಾಸಕರನ್ನು ಅಮಾನತುಗೊಳಿಸಿದ್ದನ್ನು ವಿರೋಧಿಸಿ ಜಿಲ್ಲಾ ಬಿಜೆಪಿಯು ಸೋಮವಾರ ನಗರದ ಅಮೀರ್ ಅಹಮ್ಮದ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ವೇಳೆ ಮುಖ್ಯಮಂತ್ರಿಗಳ ಪ್ರತಿಕೃತಿಯನ್ನು ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಶಾಸಕ ಹಾಗೂ ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ಮಾತನಾಡಿ, ಕಾಲಕಾಲಕ್ಕೆ ಕಾಂಗ್ರೆಸ್ ಸಂವಿಧಾನಕ್ಕೆ ತಿದ್ದುಪಡಿ ಮುಸ್ಲಿಮರ ಓಲೈಕೆಗೆ ಏನು ಬೇಕೋ ಅದನ್ನು ಮಾಡಿಕೊಂಡಿದೆ. ಕಾಂಗ್ರೆಸ್ ಆವತ್ತು ದೇಶವನ್ನು ಇಬ್ಭಾಗ ಮಾಡಿತ್ತು. ಈಗ ಮುಸ್ಲಿಂ ತುಷ್ಠೀಕರಣ ಬಜೆಟ್ ಮೂಲಕ ಊರು ಊರನ್ನು ಒಡೆಯುತ್ತಿದೆ ಎಂದು ಕಿಡಿ ಕಾರಿದರು.ಕಾಂಗ್ರೆಸ್ ಹಿಂದೂ-ಮುಸ್ಲಿಂರನ್ನು ಒಂದಾಗಿರಲು ಬಿಡುತ್ತಿಲ್ಲ. ಗುತ್ತಿಗೆಯಲ್ಲಿ ಈಗಾಗಲೇ ಮುಸ್ಲಿಂರೇ ಹೆಚ್ಚಿದ್ದಾರೆ. ಮತ್ತೆ ಮುಸ್ಲಿಂರಿಗೆ ಶೇ.೪% ರಷ್ಟು ಮೀಸಲು ಕಲ್ಪಿಸಿದೆ. ಸಾಧನೆಗಳ ಆಧಾರದ ಮೇಲೆ ಅವರಿಗೆ ಮತ ಕೇಳುವ ಯೋಗ್ಯತೆ ಇಲ್ಲ. ಅದಕ್ಕಾಗಿ ಗ್ಯಾರಂಟಿಗಳ ಮೇಲೆ ಮತ ಕೇಳುತ್ತಿದ್ದಾರೆ ಆಕ್ರೋಶ ವ್ಯಕ್ತಪಡಿಸಿದರು.ಇದೇ ಸಂದರ್ಭದಲ್ಲಿ ಕನ್ನಡ ಹೋರಾಟಗಾರರು, ವಿಚಾರವಾದಿಗಳು, ಬುದ್ಧಿಜೀವಿಗಳನ್ನು ತರಾಟೆಗೆ ತೆಗೆದುಕೊಂಡ ಜ್ಞಾನೇಂದ್ರ, ಎಲ್ಲದಕ್ಕೂ ನೀವೇ ಬಾಸ್ ಆಗಿದ್ದೀರಿ. ಬೇರೆ ವಿಷಯಗಳಿಗೆ ಹೋರಾಡುತ್ತೀರಿ. ಮುಸ್ಲಿಂ ತುಷ್ಠೀಕರಣದ ಬಗ್ಗೆ ನೀವೇಕೆ ಸುಮ್ಮನಿದ್ದೀರಿ. ಭವಿಷ್ಯದ ಕರ್ನಾಟಕವನ್ನು ಮಣ್ಣು ಪಾಲು ಮಾಡುತ್ತಿದ್ದೀರಿ ಎಂದು ಕುಟುಕಿದರು.ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಮುಸ್ಲಿಂರಿಗೆ ಪಾಕಿಸ್ತಾನ ಮಾಡಿ ಕೊಟ್ಟಾಗಿದೆ. ಯಾವುದೇ ಕಾರಣಕ್ಕೂ ರಾಜ್ಯವನ್ನು ಬಿಟ್ಟುಕೊಡುವುದಿಲ್ಲ. ಕಾಂಗ್ರೆಸ್ ನ ನೀಚತನ, ಕುಟಿಲ ನೀತಿಗೆ ಜನ ಉತ್ತರ ಕೊಡುತ್ತಾರೆ. ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಶಾಲಾ ಮಕ್ಕಳಿಗೆ ಸೈಕಲ್ ಕೊಟ್ಟಿದ್ದರು. ಹೆಣ್ಣು ಮಕ್ಕಳಿಗೆ ಭಾಗ್ಯಲಕ್ಷ್ಮಿ ಯೋಜನೆ ನೀಡಿದರು. ಅವು ಕೇವಲ ಹಿಂದೂಗಳಿಗೆ ಅಂತಾ ಹೇಳಿದ್ರಾ ಎಂದು ಪ್ರಶ್ನಿಸಿದ ಅವರು, ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. 9 ವಿವಿಗಳನ್ನು ಮುಚ್ಚಿ ಆ ಹಣವನ್ನು ಮುಸ್ಲಿಂರಿಗೆ ನೀಡುತ್ತಿದೆ ಎಂದು ದೂರಿದರು.ಸಭಾಧ್ಯಕ್ಷರು ಷರಿಯತ್‌ ಕಾನೂನನ್ನು ಅನುಸರಿಸುತ್ತಿದ್ದಾರೆ. ಅವರು ಪಕ್ಷಾತೀತವಾಗಿರಬೇಕು. ಆದರೆ ಕಾಂಗ್ರೆಸ್ ಬರೆದುಕೊಟ್ಟಿದ್ದನ್ನು ಸಭಾಧ್ಯಕ್ಷರು ಮಾಡುತ್ತಿದ್ದಾರೆ. ನಮ್ಮ ಅಮಾನತು ವಾಪಸ್ ಗೆ ಭಿಕ್ಷೆ ಬೇಡುವುದಿಲ್ಲ. ಸಂವಿಧಾನ ಬಾಹಿರವಾಗಿ ನಮ್ಮನ್ನು 6 ತಿಂಗಳು ಹೊರಗೆ ಹಾಕಿ ನೀವು ಹೇಗೆ ವಿಧಾನಸೌಧದಲ್ಲಿರುತ್ತೀರಿ ಎಂದು ಸವಾಲು ಹಾಕಿದರು.

ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಧನಂಜಯ ಸರ್ಜಿ, ಡಿ.ಎಸ್.ಅರುಣ್, ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಸಿ.ಮಂಜುಳಾ, ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ಪ್ರಮುಖರಾದ ಎಸ್. ಜ್ಞಾನೇಶ್ವರ್, ಎಸ್.ದತ್ತಾತ್ರಿ, ಡಾ.ರವೀಂದ್ರ, ಟಿ.ಡಿ.ಮೇಘರಾಜ್, ಹರಿಕೃಷ್ಣ, ಮೋಹನ್ ರೆಡ್ಡಿ, ಕೆ.ವಿ.ಅಣ್ಣಪ್ಪ, ಸಿ.ಎಚ್.ಮಾಲತೇಶ್, ರಶ್ಮಿ ಶ್ರೀನಿವಾಸ್, ಸುರೇಖಾ ಮುರಳೀಧರ, ಶಾಂತಾ ಸುರೇಂದ್ರ ಮತ್ತಿತರರು ಇದ್ದರು.