ಸಾರಾಂಶ
ಹರಪನಹಳ್ಳಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ಮತ್ತು ಬಿಜೆಪಿಯ 18 ಶಾಸಕರನ್ನು ಆರು ತಿಂಗಳ ಕಾಲ ಅಮಾನತು ಮಾಡಿದ ಕ್ರಮವನ್ನು ಖಂಡಿಸಿ ತಾಲೂಕು ಬಿಜೆಪಿ ಘಟಕದ ವತಿಯಿಂದ ಪಟ್ಟಣದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು.
ಇಲ್ಲಿಯ ಬಿಜೆಪಿ ಕಚೇರಿಯಿಂದ ತಾಲೂಕು ಆಡಳಿತ ಸೌಧಕ್ಕೆ ತೆರಳಿದ ಮುಖಂಡರು, ಕಾರ್ಯಕರ್ತರು ತಹಸೀಲ್ದಾರ್ ಕಚೇರಿ ಮುಂಭಾಗ ರಸ್ತೆ ತಡೆದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಾಡಿನ ಜನತೆ ಉಪಯೋಗಿಸುವ ದಿನನಿತ್ಯದ ವಸ್ತುಗಳ ಮೇಲೆ ಪ್ರತಿ ದಿನ ಬೆಲೆ ಏರಿಕೆ ಮಾಡುತ್ತಿರುವುದು ಖಂಡನೀಯ. ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದು ರಾಜ್ಯವನ್ನು ಅಭಿವೃದ್ಧಿಪಡಿಸುವುದಕ್ಕಲ್ಲ, ಲೂಟಿ ಮಾಡುವುದಕ್ಕೆ ಎಂದು ದೂರಿದರು. ಇಂತಹ ತುಘಲಕ್ ಆಡಳಿತಕ್ಕೆ ರಾಜ್ಯದ ಜನ ತಕ್ಕ ಪಾಠ ಕಲಿಸುವ ದಿನ ಸಮೀಪವಿದೆ ಎಂದು ಹೇಳಿದರು.ಬಿಜೆಪಿ ಮಂಡಲ ಅಧ್ಯಕ್ಷ ಕೆ. ಲಕ್ಷ್ಮಣ್, ಮುಖಂಡರಾದ ಆರುಂಡಿ ನಾಗರಾಜ, ಎಸ್.ಪಿ. ಲಿಂಬ್ಯನಾಯ್ಕ, ಬಾಗಳಿ ಕೊಟ್ರೇಶ್, ಕಣವಿಹಳ್ಳಿ ಮಂಜುನಾಥ, ಹಲುವಾಗಲು ದ್ಯಾಮಪ್ಪ, ಚೆನ್ನನಗೌಡ, ಮುದಕವ್ವನರ ಶಂಕರ, ಕಡತಿ ರಮೇಶ, ಕಡಕೋಳ ಸಿದ್ದಣ್ಣ, ಮಂಜ್ಯಾನಾಯ್ಕ, ಆರ್. ಲಿಂಬ್ಯನಾಯ್ಕ, ಮೇಘ್ಯನಾಯ್ಕ ಚಂದ್ರಶೇಖರ, ರೇಖಮ್ಮ, ಸ್ವಪ್ನಾ ಮಲ್ಲಿಕಾರ್ಜುನ ಪಾಲ್ಗೊಂಡಿದ್ದರು.
ಬೆಲೆ ಏರಿಕೆ ವಿರುದ್ಧ ಹೂವಿನಹಡಗಲಿಯಲ್ಲಿ ಬಿಜೆಪಿ ಪ್ರತಿಭಟನೆ:ರಾಜ್ಯ ಸರ್ಕಾರದ ಬೆಲೆ ಏರಿಕೆ ವಿರುದ್ಧ ಹೂವಿನಹಡಗಲಿಯ ಲಾಲ್ ಬಹದ್ದೂರ್ ಶಾಸ್ತ್ರಿ ವೃತ್ತದಲ್ಲಿ ತಾಲೂಕು ಬಿಜೆಪಿ ಘಟಕದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಎಸ್. ಸಂಜೀವರೆಡ್ಡಿ, ಮನುಷ್ಯ ಹುಟ್ಟಿನಿಂದ ಸಾವಿನ ವರೆಗೂ ಈ ರಾಜ್ಯ ಸರ್ಕಾರ ತೆರಿಗೆ ವಿಧಿಸಿದೆ. ದೈನಂದಿನ ಬದುಕಿಗೆ ಅಗತ್ಯವಿರುವ ಎಲ್ಲ ವಸ್ತುಗಳ ಬೆಲೆ ಏರಿಕೆ ಮಾಡಿ ಬಡ ಹಾಗೂ ಮಧ್ಯಮ ವರ್ಗಗಳಿಗೆ ಬರೆ ಎಳೆದಿದ್ದಾರೆ ಎಂದು ದೂರಿದರು.ರಾಜ್ಯ ಸರ್ಕಾರದ ಈ ಬೆಲೆ ಏರಿಕೆಯನ್ನು ಈ ಕೂಡಲೇ ಹಿಂಪಡೆಯದಿದ್ದರೆ, ಬಿಜೆಪಿಯಿಂದ ಪ್ರತಿಭಟನೆಯ ವ್ಯಾಪ್ತಿ ಹಳ್ಳಿಗಳಿಗೂ ವ್ಯಾಪಿಸುತ್ತದೆ. ಗ್ಯಾರಂಟಿ ಯೋಜನೆಗಳಿಗೆ ಹಣ ಹಂಚಿಕೆ ಮಾಡುವುದಕ್ಕಾಗಿ ಜನರ ಪಿಕ್ ಪಾಕೆಟ್ ಮಾಡುತ್ತಿದೆ. ಇದರಿಂದ ಜನರಿಗೆ ಸಾಕಷ್ಟು ಹೊರೆಯಾಗಿದೆ. ಈ ಕೂಡಲೇ ರಾಜ್ಯ ಸರ್ಕಾರ ಬೆಲೆ ಏರಿಕೆ ತಡೆ ಹಿಡಿಯುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.ಈಟಿ ಲಿಂಗರಾಜ, ವಿಶ್ವನಾಥ ಇತರರು ಮಾತನಾಡಿದರು. ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಪೂಜಾರ, ಜೆ. ಸಿರಾಜ್, ಮೇಟಿ ಹುಲಗೇಶ, ಬೀರಬ್ಬಿ ಬಸವರಾಜ, ಪುನೀತ್ ದೊಡ್ಮನಿ, ಕೊಟ್ರೇಶ ನಾಯ್ಕ, ನವಲಿ ಶಂಕರ, ಆರ್.ಟಿ. ನಾಗರಾಜ, ವಿಲ್ಸನ್ ಸ್ವಾಮಿ ಇತರರಿದ್ದರು.