ಸಾರಾಂಶ
ಹುಬ್ಬಳ್ಳಿ: ಗ್ಯಾರಂಟಿ ಯೋಜನೆಯ ಹೆಸರಿನಲ್ಲಿ ಜನರಿಗೆ ಬೆಲೆ ಏರಿಕೆ ಬರೆ ಹಾಕುತ್ತಿರುವ ರಾಜ್ಯ ಸರ್ಕಾರದ ನೀತಿ ಖಂಡಿಸಿ ಶುಕ್ರವಾರ ಬಿಜೆಪಿ ಹು-ಧಾ ಕೇಂದ್ರ ವಿಧಾನಸಭಾ ಮತಕ್ಷೇತ್ರದ ಕಾರ್ಯಕರ್ತರು ಇಲ್ಲಿನ ಗೋಕುಲ ರಸ್ತೆ ಅಕ್ಷಯ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲಾಯಿತು.
ಮುಖ್ಯಮಂತ್ರಿಗಳ ಪ್ರತಿಕೃತಿ ದಹಿಸುವ ವೇಳೆ ಪ್ರತಿಭಟನಾಕಾರರೊಂದಿಗೆ ಪೊಲೀಸರು ವಾಗ್ವಾದ ನಡೆಸಿದರು.ಈ ವೇಳೆ ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಜನತೆಗೆ ಐದು ಗ್ಯಾರಂಟಿ ನೀಡಿದ್ದಾರೆ.ಎಲ್ಲ ಗ್ಯಾರಂಟಿಗಳಿಗೂ ಕೊಕ್ಕೆ ಹಾಕಿ ಅದು ಜನರಿಗೆ ತಲುಪದಂತೆ ಮಾಡಿದ್ದಾರೆ. ವಿದ್ಯುತ್ ಬರೆ ಹಾಕಿದ್ದಾರೆ. ಜನನ ಮರಣ ಪ್ರಮಾಣ ಪತ್ರದ ಬೆಲೆ ಏರಿಕೆ ಮಾಡುವುದರ ಮೂಲಕ ಹುಟ್ಟಿದವರನ್ನು ಸತ್ತವರನ್ನು ಮುಖ್ಯಮಂತ್ರಿಗಳು ಬಿಟ್ಟಿಲ್ಲ. ಈ ಕುರಿತು ರಾಜ್ಯ ಬಿಜೆಪಿಯಿಂದ ಹಗಲು-ರಾತ್ರಿ ಹೋರಾಟ ನಡೆಸಿದರೂ ಯಾವುದೇ ಸ್ಪಂದನೆ ದೊರೆಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಲೆ ಏರಿಕೆ ಎಂದರೆ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುವುದು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಚಟವಾಗಿ ಬಿಟ್ಟಿದೆ, ಕೇಂದ್ರ ಸರ್ಕಾರ ಯಾವುದೇ ಬೆಲೆ ಏರಿಕೆ ಮಾಡಿಲ್ಲ. ಅದು ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡಿದೆ.ಅಲ್ಪಸಂಖ್ಯಾತರರಿಗೆ ಕಾಮಗಾರಿಯಲ್ಲಿ ಶೇ.4 ಮೀಸಲಾತಿ ನೀಡಿ ಅಲ್ಪಸಂಖ್ಯಾತರ ತುಷ್ಟಿಕರಣ ಮಾಡುತ್ತಿದ್ದಾರೆ. ಇದು ಸರಿಯಲ್ಲ ಎಂದರು.ಇದಲ್ಲದೇ ವಿಧಾನಸಭೆಯಲ್ಲಿ 18 ಶಾಸಕರ ಅಮಾನತ್ತು ಹಿಂಪಡೆಯುವ ವರೆಗೂ ನಾವು ಯಾರೂ ಸಭೆಗಳಿಗೆ ಹೋಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ರಾಜ್ಯ ಸರ್ಕಾರ ಎಲ್ಲ ಅಗತ್ಯ ವಸ್ತುಗಳ ಬೆಲೆ ಇಳಿಸಬೇಕೆಂದು ಒತ್ತಾಯಿಸಿದರು.
ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ಅಕ್ಕಮ್ಮ ಹೆಗಡೆ, ಈಶ್ವರಗೌಡ ಪಾಟೀಲ, ಮಾಜಿ ಮೇಯರ್ ವೀಣಾ ಬರದ್ವಾಡ ಸೇರಿದಂತೆ ಹಲವರು ಮಾತನಾಡಿದರು. ರಾಜು ಕಾಳೆ, ಹರೀಶ ಜಂಗ್ಲಿ, ಅಶೋಕ ವಾಲ್ಮೀಕಿ, ರೂಪಾ ಶೆಟ್ಟಿ, ದತ್ತಮೂರ್ತಿ ಕುಲಕರ್ಣಿ, ರವಿ ನಾಯಕ, ಸಿದ್ದು ಮೊಗಲಿಶೆಟ್ಟರ್, ಬೀರಪ್ಪ ಖಂಡೇಕಾರ, ಕೃಷ್ಣಾ ಗಂಡಗಾಳೇಕರ, ಉಮೇಶ ಕೌಜಗೇರಿ, ತೋಟಪ್ಪ ನಿಡುಗುಂದಿ ಸೇರಿದಂತೆ ಮೊದಲಾದವರಿದ್ದರು.ಪೊಲೀಸರೊಂದಿಗೆ ವಾಗ್ವಾದ: ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಬಿಜೆಪಿ ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಮುಖ್ಯಮಂತ್ರಿಗಳ ಪ್ರತಿಕೃತಿ ದಹನಕ್ಕೆ ಮುಂದಾದ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ತಡೆದರು. ಇದರಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು ಪೊಲೀಸರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಶಾಸಕ ಮಹೇಶ ಟೆಂಗಿನಕಾಯಿ, ದತ್ತಮೂರ್ತಿ ಕುಲಕರ್ಣಿ ಪೊಲೀಸರೊಂದಿಗೆ ವಾಗ್ವಾದ ನಡೆಸಿದರು.