ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜನಸಾಮಾನ್ಯರು ನೆಮ್ಮದಿಯಿಂದ ಬದುಕುವುದೇ ಕಷ್ಟವಾಗಿದೆ. ಚುನಾವಣೆಗೆ ಮುನ್ನ ಐದು ಗ್ಯಾರಂಟಿಗಳ ಹೆಸರಿನಲ್ಲಿ ಜನರಿಂದ ಮತ ಪಡೆದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ, ಇಂದು ಹುಟ್ಟಿನಿಂದ ಸಾಯುವವರೆಗೂ ಪ್ರತಿಯೊಂದು ಹಂತದಲ್ಲೂ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಅಗತ್ಯ ವಸ್ತುಗಳ ಬೆಲೆ ಹೆಚ್ಚಳಕ್ಕೆ ಕಾರಣವಾಗಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ನಡೆ ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಸಾರ್ವಜನಿಕರಿಗೆ ಉಚಿತವಾಗಿ ಹಾಲು, ಮೊಸರು, ಹೂ ನೀಡುವ ಮೂಲಕ ನಗರದಲ್ಲಿ ವಿನೂತನ ಪ್ರತಿಭಟನೆ ನಡೆಸಿದರು.

ನಗರದ ಮಹಾವೀರ ವೃತ್ತದಲ್ಲಿ ಸೇರಿದ ಪಕ್ಷದ ಕಾರ್ಯಕರ್ತರು, ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿಯನ್ನು ಖಂಡಿಸಿ ಘೋಷಣೆ ಕೂಗಿದರು. ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಜನರ ತೆರಿಗೆ ಹಣವನ್ನು ಲೂಟಿ ಹೊಡೆಯುತ್ತಿರುವ ಸರ್ಕಾರ, ಮತ್ತೊಂದೆಡೆ ಯೋಜನೆಗಳ ಹತ್ತುಪಟ್ಟು ಹಣವನ್ನು ಅಗತ್ಯ ವಸ್ತುಗಳ ಬೆಲೆ ಏರಿಸುವ ಮೂಲಕ ಮೋಸ ಮಾಡುತ್ತಿದೆ ಎಂದು ಆರೋಪಿಸಿದರು.

ಪ್ರತಿಭಟನಾಕಾರರನ್ನುದ್ದೇಶಿಸಿ ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್ ಮಾತನಾಡಿ, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜನಸಾಮಾನ್ಯರು ನೆಮ್ಮದಿಯಿಂದ ಬದುಕುವುದೇ ಕಷ್ಟವಾಗಿದೆ. ಚುನಾವಣೆಗೆ ಮುನ್ನ ಐದು ಗ್ಯಾರಂಟಿಗಳ ಹೆಸರಿನಲ್ಲಿ ಜನರಿಂದ ಮತ ಪಡೆದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ, ಇಂದು ಹುಟ್ಟಿನಿಂದ ಸಾಯುವವರೆಗೂ ಪ್ರತಿಯೊಂದು ಹಂತದಲ್ಲೂ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ. ಇದು ಗ್ಯಾರಂಟಿ ಸರ್ಕಾರವಲ್ಲ, ಬೆಲೆ ಏರಿಕೆಯ ಬಾದ್‌ಷಾ ಸರ್ಕಾರ ಎಂದು ತೀವ್ರ ವಾಗ್ದಾಳಿ ನಡೆಸಿದರು.

ಹಾಲು ಮತ್ತು ಮೊಸರಿನ ಬೆಲೆ ಏರಿಕೆಯ ಮೂಲಕ ಜನಸಾಮಾನ್ಯರಿಗೆ ಕಾಂಗ್ರೆಸ್ ಸರ್ಕಾರ ಮತ್ತೊಂದು ದೊಡ್ಡ ಆಘಾತ ನೀಡಿದೆ. ಹಾಲಿನ ಬೆಲೆಯಲ್ಲಿ ಪ್ರತಿ ಲೀಟರ್‌ಗೆ ೧೨ ರು. ಹಾಗೂ ಮೊಸರಿನ ಬೆಲೆಯಲ್ಲಿ ಪ್ರತಿ ಲೀಟರ್‌ಗೆ ೧೪ ರು. ಹೆಚ್ಚಳ ಮಾಡುವ ಮೂಲಕ ಪ್ರತಿಯೊಂದು ಕುಟುಂಬದ ಮಾಸಿಕ ಖರ್ಚನ್ನು ಹೆಚ್ಚಿಸಿದೆ. ಹಾಲು ಮತ್ತು ಮೊಸರು ಐಷಾರಾಮಿ ವಸ್ತುಗಳಲ್ಲ. ಮಕ್ಕಳು, ವೃದ್ಧರು ಸೇರಿದಂತೆ ಪ್ರತಿಯೊಂದು ಮನೆಯ ನಿತ್ಯದ ಅಗತ್ಯ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮೇಲೆ ಈ ನಿರ್ಧಾರ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಕಿಡಿಕಾರಿದರು.

ಚುನಾವಣಾ ಪ್ರಣಾಳಿಕೆಯಲ್ಲಿ ರೈತರಿಗೆ ಪ್ರತಿ ಲೀಟರ್ ಹಾಲಿಗೆ ೭ ರು. ಪ್ರೋತ್ಸಾಹ ಧನ ನೀಡುವುದಾಗಿ ಭರವಸೆ ನೀಡಿದ್ದ ಕಾಂಗ್ರೆಸ್ ಸರ್ಕಾರ, ಆ ಹಣವನ್ನು ತನ್ನ ಬಜೆಟ್‌ನಿಂದ ಭರಿಸುವ ಬದಲು ಗ್ರಾಹಕರ ಮೇಲೆ ಬೆಲೆ ಏರಿಕೆಯ ಹೊರೆ ಹಾಕುತ್ತಿರುವುದು ಯಾವ ನ್ಯಾಯ? ರೈತರಿಗೂ ನ್ಯಾಯ ಕೊಡದೆ, ಗ್ರಾಹಕರಿಗೂ ನೆಮ್ಮದಿ ನೀಡದೆ ಇರುವುದೇ ಕಾಂಗ್ರೆಸ್ ಆಡಳಿತದ ಸಾಧನೆಯೇ ಎಂದು ಪ್ರಶ್ನಿಸಿದರು.

ಬಿಜೆಪಿ ನಗರಾಧ್ಯಕ್ಷ ಪ್ರಸನ್ನಕುಮಾರ್, ಮುಖಂಡರಾದ ಹೊಸಹಳ್ಳಿ ಶಿವು, ನಾಗರಾಜು, ಯಲ್ಲೇಗೌಡ, ಶಿವಲಿಂಗಯ್ಯ, ಸಂತೋಷ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.