ರಾಹುಲ್‌ಗಾಂಧಿ ವಿರುದ್ಧ ಬಿಜೆಪಿ ಪ್ರತಿಭಟನೆ

| Published : Sep 14 2024, 01:50 AM IST

ಸಾರಾಂಶ

ಚಿಕ್ಕಮಗಳೂರು, ವಿದೇಶದಲ್ಲಿ ಭಾರತದ ಘನತೆ ಹಾಗೂ ಗೌರವಕ್ಕೆ ಚ್ಯುತಿ ತರುವಂತೆ ಮೀಸಲಾತಿ ರದ್ಧತಿ ಹೇಳಿಕೆ ನೀಡಿರುವ ರಾಹುಲ್‍ಗಾಂಧಿ ಅವರ ಸಂಸದ ಸ್ಥಾನ ಅನರ್ಹಗೊಳಿಸಬೇಕು ಎಂದು ಒತ್ತಾಯಿಸಿ ನಗರ ಬಿಜೆಪಿ ಘಟಕದಿಂದ ಆಜಾದ್‍ ಪಾರ್ಕ್ ವೃತ್ತದಲ್ಲಿ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ವಿದೇಶದಲ್ಲಿ ಭಾರತದ ಘನತೆ ಹಾಗೂ ಗೌರವಕ್ಕೆ ಚ್ಯುತಿ ತರುವಂತೆ ಮೀಸಲಾತಿ ರದ್ಧತಿ ಹೇಳಿಕೆ ನೀಡಿರುವ ರಾಹುಲ್‍ಗಾಂಧಿ ಅವರ ಸಂಸದ ಸ್ಥಾನ ಅನರ್ಹಗೊಳಿಸಬೇಕು ಎಂದು ಒತ್ತಾಯಿಸಿ ನಗರ ಬಿಜೆಪಿ ಘಟಕದಿಂದ ಆಜಾದ್‍ ಪಾರ್ಕ್ ವೃತ್ತದಲ್ಲಿ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾ ಬಿಜೆಪಿ ಕಚೇರಿಯಿಂದ ರಾಹುಲ್‍ಗಾಂಧಿ ವಿರುದ್ಧ ಧಿಕ್ಕಾರ ಹಾಕುತ್ತಾ ಕಾಲ್ನಡಿಗೆಯಿಂದ ಆಜಾದ್‌ ಪಾರ್ಕ್‌ ವೃತ್ತದ ಕಡೆ ತೆರಳಿದ ಕಾರ್ಯಕರ್ತರು ಮೀಸಲಾತಿ ರದ್ದುಗೊಳಿಸುತ್ತೇವೆ ಎಂದಿರುವ ಸಂಸದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಬಳಿಕ ಮಾತನಾಡಿದ ಬಿಜೆಪಿ ನಗರಾಧ್ಯಕ್ಷ ಕೆ.ಎಸ್.ಪುಷ್ಪರಾಜ್, ಅಮೇರಿಕಾದಲ್ಲಿ ವಿದ್ಯಾರ್ಥಿಗಳ ಜತೆಗಿನ ಸಂವಾದ ವೊಂದರಲ್ಲಿ ಭಾರತದ ಘನತೆಗೆ ಧಕ್ಕೆ ತರುವ ರೀತಿಯಲ್ಲಿ ಚುನಾವಣಾ ವ್ಯವಸ್ಥೆ ಹದಗೆಟ್ಟಿದೆ. ವ್ಯಾಪಕ ಭ್ರಷ್ಟಾಚಾರ ಹಾಗೂ ಮೀಸಲಾತಿ ರದ್ದುಗೊಳಿಸುವ ಬಗ್ಗೆ ಹೇಳಿಕೆ ನೀಡುವ ಮುಖಾಂತರ ದೇಶದ ಮರ್ಯಾದೆ ಹಾಳುಗೆಡವಿದ್ದಾರೆ ಎಂದು ದೂರಿದರು.

ಏಳು ದಶಕಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್ ಪಕ್ಷ ಆರಂಭದಿಂದ ಪರಿಶಿಷ್ಟ ಜಾತಿ, ವರ್ಗದ ಜನರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ. ಎಂದಿಗೂ ಪರಿಶಿಷ್ಟ ಸಮುದಾಯ ಶ್ರೇಯೋಭಿವೃದ್ಧಿಗೆ ಸಮಗ್ರ ನೀತಿ, ಕಾರ್ಯಕ್ರಮ ರೂಪಿಸುವಲ್ಲಿ ಸಂಪೂರ್ಣವಾಗಿ ವಿಫಲಗೊಂಡಿದೆ ಎಂದು ಆರೋಪಿಸಿದರು.

ಜಿಲ್ಲಾ ಎಸ್ಸಿ ಘಟಕದ ಅಧ್ಯಕ್ಷ ಕುರುವಂಗಿ ವೆಂಕಟೇಶ್ ಮಾತನಾಡಿ, ನೆಹರು ಕಾಲದಿಂದ ಮರಿಮಗ ರಾಹುಲ್‍ಗಾಂಧಿ ಕಾಲದ ವರೆಗೂ ದಲಿತರನ್ನು ಅವಮಾನ ಮಾಡುತ್ತಾ ಬಂದಿದ್ದಾರೆ. ರಾಹುಲ್‍ಗಾಂಧಿ ಅಂತಹವರು ಸಾವಿರಾರು ಜನ ಬಂದರೂ ಪರಿಶಿಷ್ಟರ ಮೀಸಲಾತಿ ರದ್ದುಗೊಳಿಸಲು ಎಂದಿಗೂ ಸಾಧ್ಯವಿಲ್ಲ ಎಂದರು.

ನೆಹರು ಪ್ರಧಾನಿಯಾದ ವೇಳೆ ಕಾಂಗ್ರೆಸ್ 400 ಸ್ಥಾನಗಳಿಸಿತ್ತು. ಕಾಲಕ್ರಮೇಣ ಕುಸಿತಕ್ಕೊಳಗಾಗಿ ಪ್ರಸಕ್ತ ಸಾಲಿನಲ್ಲಿ ಕಾಂಗ್ರೆಸ್ ಮೂರಂಕಿ ಸ್ಥಾನ ಗಳಿಸಲು ಸಾಧ್ಯವಾಗಿಲ್ಲ. ಮುಂಬರುವ ದಿನಗಳಲ್ಲಿ ಎರಡಂಕಿ ಸ್ಥಾನ ಗಳಿಸುವುದು ಅಸಾಧ್ಯ. ಹೀಗಾಗಿ ಕಾಂಗ್ರೆಸ್ ಸುಳ್ಳಿನ ಕಥೆಗಳನ್ನು ಜನತೆ ಅರಿತಿದ್ದಾರೆ ಎಂದರು.

ಪ್ರತಿಭಟನೆಯಲ್ಲಿ ನಗರಸಭಾ ಅಧ್ಯಕ್ಷೆ ಸುಜಾತಾ ಶಿವಕುಮಾರ್, ರಾಜ್ಯ ಎಸ್ಸಿ ಮೋರ್ಚಾ ಕಾರ್ಯದರ್ಶಿ ಸೀತರಾಮಭರಣ್ಯ, ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಜೆಸಂತಾ ಅನಿಲ್‍ಕುಮಾರ್‌, ಮುಖಂಡರಾದ ಬಿ. ರಾಜಪ್ಪ, ರೇವನಾಥ್, ರೂಪ ಕುಮಾರ್, ಕನಕರಾಜ್‍ ಅರಸ್, ಓಂಕಾರೇಗೌಡ, ಮಧು, ರಾಕೇಶ್ ಹಾಗೂ ಕಾರ್ಯಕರ್ತರು ಇದ್ದರು.

13 ಕೆಸಿಕೆಎಂ 4ಮೀಸಲಾತಿ ರದ್ದುಪಡಿಸುವ ಹೇಳಿಕೆ ನೀಡಿರುವ ರಾಹುಲ್‌ಗಾಂಧಿ ವಿರುದ್ಧ ಬಿಜೆಪಿ ಕಾರ್ಯಕರ್ತರು ಚಿಕ್ಕಮಗಳೂರಿನಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.