ಆಶ್ರಯಮನೆ ಹಗರಣದ ವಿರುದ್ಧ ಬಿಜೆಪಿ ಪ್ರತಿಭಟನೆ

| Published : Sep 12 2025, 12:06 AM IST

ಆಶ್ರಯಮನೆ ಹಗರಣದ ವಿರುದ್ಧ ಬಿಜೆಪಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಸಕಲೇಶಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ೩ ಕೋಟಿ ರು.ಗಳಿಗೂ ಹೆಚ್ಚು ಅವ್ಯವಹಾರದ ನಡೆದಿರುವ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ಜಿಲ್ಲಾ ಘಟಕದ ನೇತೃತ್ವದಲ್ಲಿ ಜಿಲ್ಲಾ ಪಂಚಾಯತಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿ, ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತು ಮಾಡಬೇಕು ಹಾಗೂ ಅವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಲಾಯಿತು. ೨೧೯ಕ್ಕೂ ಹೆಚ್ಚು ಅರ್ಹ ಫಲಾನುಭವಿಗಳಿಗೆ ತಲುಪಬೇಕಿದ್ದ ಸರ್ಕಾರದ ಅನುದಾನವನ್ನು ಅಧಿಕಾರಿಗಳೇ ದುರುಪಯೋಗ ಮಾಡಿಕೊಂಡಿದ್ದಾರೆ. ಯೋಜನೆಯ ಅನುಷ್ಠಾನದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಮಟ್ಟದ ಯೋಜನಾ ನಿರ್ದೇಶಕರು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿಗಳ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ ಎಂದು ದೂರಿದರು.

ಕನ್ನಡಪ್ರಭ ವಾರ್ತೆ ಹಾಸನ

ಜಿಲ್ಲೆಯ ಸಕಲೇಶಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ೩ ಕೋಟಿ ರು.ಗಳಿಗೂ ಹೆಚ್ಚು ಅವ್ಯವಹಾರದ ನಡೆದಿರುವ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ಜಿಲ್ಲಾ ಘಟಕದ ನೇತೃತ್ವದಲ್ಲಿ ಜಿಲ್ಲಾ ಪಂಚಾಯತಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿ, ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತು ಮಾಡಬೇಕು ಹಾಗೂ ಅವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಆಲೂರು-ಸಕಲೇಶಪುರ ವಿಧಾನಸಭಾ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ಮಾಧ್ಯಮದೊಂದಿಗೆ ಮಾತನಾಡಿ, ಹಾಸನ ಜಿಲ್ಲೆಯ ಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲಿ ಪಿಎಂಎವೈ ಯೋಜನೆ ಅಡಿಯಲ್ಲಿ ೩ ಕೋಟಿ ರು. ಗಳಿಗೂ ಹೆಚ್ಚು ಹಣದ ಅವ್ಯವಹಾರ ನಡೆದಿದೆ. ೨೧೯ಕ್ಕೂ ಹೆಚ್ಚು ಅರ್ಹ ಫಲಾನುಭವಿಗಳಿಗೆ ತಲುಪಬೇಕಿದ್ದ ಸರ್ಕಾರದ ಅನುದಾನವನ್ನು ಅಧಿಕಾರಿಗಳೇ ದುರುಪಯೋಗ ಮಾಡಿಕೊಂಡಿದ್ದಾರೆ. ಯೋಜನೆಯ ಅನುಷ್ಠಾನದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಮಟ್ಟದ ಯೋಜನಾ ನಿರ್ದೇಶಕರು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿಗಳ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ ಎಂದು ದೂರಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಮಾತನಾಡಿ, ಫಲಾನುಭವಿಗಳ ಮನೆ ನಿರ್ಮಾಣದ ಪ್ರಗತಿ ತೋರಿಸಲು ನಕಲಿ ಫೋಟೋಗಳನ್ನು ಅಪ್‌ಲೋಡ್ ಮಾಡಲಾಗಿದೆ. ಈ ಸುಳ್ಳು ಫೋಟೋಗಳ ಆಧಾರದ ಮೇಲೆ ಕಂತು ಬಿಡುಗಡೆ ಮಾಡಿರುವುದು ಬಹಿರಂಗವಾಗಿದೆ. ಸಕಲೇಶಪುರ ತಾಲ್ಲೂಕಿನ ಫಲಾನುಭವಿಗಳ ಹೆಸರು, ಗ್ರಾಮ, ಮಂಜೂರಾತಿ ಸಂಖ್ಯೆಯನ್ನು ಬಳಸಿಕೊಂಡು, ಹಾಸನ ತಾಲ್ಲೂಕಿನ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಲಾಗಿದೆ. ಕ್ಯೂಆರ್ ಕೋಡ್, ಖಾತೆ ಸಂಖ್ಯೆ, ಖಾತೆ ಹೆಸರು ಬದಲಾವಣೆ ಮಾಡಿ, ಸರ್ಕಾರದ ಹಣವನ್ನು ಲಪಟಾಯಿಸಲಾಗಿದೆ” ಎಂದು ಆರೋಪಿಸಿದರು.

ಪ್ರತಿಭಟನಾಕಾರರು ಯೋಜನೆಯ ಅನುಷ್ಠಾನದ ಕ್ರಮವನ್ನೇ ಪ್ರಶ್ನಿಸಿದರು. ನಿಯಮದ ಪ್ರಕಾರ ಫಲಾನುಭವಿಗಳ ಪಟ್ಟಿಯನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ತಯಾರಿಸಿ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಅನುಮೋದನೆ ನೀಡಿದ ಬಳಿಕ, ಜಿಲ್ಲಾ ಮಟ್ಟದ ಯೋಜನಾ ನಿರ್ದೇಶಕರಿಗೆ ಕಳುಹಿಸಿ, ಅಂತಿಮವಾಗಿ ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ಪರಿಶೀಲಿಸಿ ಹಣ ಬಿಡುಗಡೆ ಮಾಡಬೇಕಾಗಿದೆ. ಆದರೆ ಅಧಿಕಾರಿಗಳು ಈ ಎಲ್ಲಾ ಹಂತಗಳಲ್ಲಿ ನಕಲಿ ದಾಖಲೆ, ನಕಲಿ ಫೋಟೋ ಹಾಗೂ ಸುಳ್ಳು ವರದಿಗಳನ್ನು ಬಳಸಿ ಯೋಜನೆಯ ಹಣವನ್ನು ಲೂಟಿ ಮಾಡಿರುವುದು ಬಹಿರಂಗವಾಗಿದೆ ಎಂದು ದೂರಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ಗಿರೀಶ್, ಬಿ.ಎಚ್. ನಾರಾಯಣಗೌಡ, ರಾಜಕುಮಾರ್, ವೇಧವತಿ, ಚನ್ನಕೇಶವ, ವಿಶಾಲಾಕ್ಷಿ ಹಾಗೂ ಅನೇಕ ನಾಯಕರು ಪಾಲ್ಗೊಂಡು ಬಿಜೆಪಿ ಧ್ವಜ ಹಿಡಿದು ಪ್ರತಿಭಟನೆ ನಡೆಸಿದರು.